ಪುಟ:ಕರ್ನಾಟಕ ಗತವೈಭವ.djvu/೯೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ


೬೯
೧೦ನೆಯ ಪ್ರಕರಣ - ಕಲಚೂರ್ಯರು

ಶಿಕ್ಷಿಸಬೇಕೆಂದು ಜಗದೇವ ಬೊಮ್ಮಯ್ಯರು ಸಂಕಲ್ಪಿಸಿ, ಚನ್ನಬಸವೇಶನ ಅಪ್ಪಣೆಯನ್ನು ಪಡೆದು, ದೊರೆಯ ಬಳಿಯಲ್ಲಿ ದೀವಟಿಗೆಯ ಉದ್ಯೋಗವನ್ನು ಸ್ವೀಕರಿಸಿದರು. ಮುಂದೆ ಹೊತ್ತು ಸಾಧಿಸಿ, ಜಗದೇವ-ಮಲ್ಲಯ್ಯ- ಬೊಮ್ಮಯ್ಯರು ಅರಸನನ್ನು ಇರಿದು ಕೊಂದರು. ಇದರಿಂದ ಪಟ್ಟಣದಲ್ಲಿ ಹಾಹಾಕಾರವೆದ್ದಿತು. ಈ ಸುದ್ದಿಯನ್ನು ಕೇಳಿ, ಚನ್ನಬಸವನು ಇಲ್ಲಿರುವುದು ತಕ್ಕದಲ್ಲೆಂದೆಣಿಸಿ, ಶಿವಶರಣರೊಡನೆ ಉಳುವಿಗೆ ಹೊರಟನು. ಆಳಿಯ ಬಿಜ್ಜಳನು ಮಹಾಸೇನೆಯೊಡನೆ ಬಂದು, ಅವರ ಮೇಲೆ ಬಿದ್ದು ಅಪಜಯಪಟ್ಟು ಹಿಂದಿರುಗಿದನು. ಬಳಿಕ ಚನ್ನಬಸವನು ತನ್ನ ಸಂಗಡಿಗರೊಡನೆ ಉಳುವಿಯ ಮಹಾಮನೆಗೆ ಹೋಗಿ ಅಲ್ಲಿಯೇ ಬಯಲಾದನು.
ಜೈನರ ಕಥೆಯು ಇದರಿಂದ ಭಿನ್ನವಾಗಿದೆ. ಅವರು ಬಿಜ್ಜಳನನ್ನು ಕೊಂದ ದೋಷವನ್ನು ಬಸವನ ಮೇಲೆ ಹೊರಿಸುತ್ತಾರೆ. ಆದರೆ ಅದು ಏನೇ ಇರಲಿ, ಬಸವ- ಚನ್ನಬಸವೇಶರು ಧಾರ್ಮಿಕ ಗುರುಗಳಿದ್ದಂತೆಯೇ ರಾಜಕಾರಣ ಪಟುಗಳೂ ಇದ್ದರೆಂದು ಮಾತ್ರ ನಿರ್ವಿವಾದವಾಗಿ ಹೇಳಬಹುದು. ಸಮಾಜ ಸುಧಾರಣೆಯನ್ನು ಮಾಡಲಿಚ್ಚಿಸುವವರೆಲ್ಲರೂ ಲಿಂಗಾಯತ ಧರ್ಮದವರು ಸ್ವೀಕರಿಸಿದ ಪದ್ಧತಿಯನ್ನು ಸೂಕ್ಷವಾಗಿಯೂ ಕೂಲಂಕಷವಾಗಿಯೂ ಅಭ್ಯಾಸಮಾಡುವಂತಿದೆ. ಧರ್ಮಕ್ಕೂ ರಾಜಕಾರಣಕ್ಕೂ ಹಾಕಿರುವ ಈ ತಳಕು ನಮ್ಮ ಕರ್ನಾಟಕ ಇತಿಹಾಸದಲ್ಲಿ ಪದೆ ಪದೆ ಕಾಣಬರುತ್ತದೆ. ಬಿಜ್ಜಳನ ಮರಣದ ನಂತರ ಈ ಕಲಚೂರ್ಯ ವಂಶವು ಬಹಳ ದಿವಸ ಬಾಳಲಿಲ್ಲ.