ವಿಷಯಕ್ಕೆ ಹೋಗು

ಪುಟ:ಕವಿಯ ಸೋಲು.pdf/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಕವಿಯ ಸೋಲು

ದಾಡಿಯೆ ಶೀಲದ ಧ್ವಜಪಟವಣ್ಣ
ದಾಡಿಯ ಹಳಿಯದೆ ಬೆಳೆಯಿಸಿರಣ್ಣ
ದಾಡಿಯ ಮೋಕ್ಷಕೆ ಒಯ್ಯುವುದಣ್ಣ.”

ಈ ಮಾತನು ಕೇಳಿದ ಕೆಲ ಜನರು
ಆ ಜ್ಞಾನಿಯ ದುರ ದುರ ನೋಡಿದರು
ಹುಲ್ಲೆಗಳೆಲ್ಲಾ ಹುಲಿಯನು ತಿನ್ನಲು
ಗಿಳಿಗಳ ಬಳಗವು ಗಿಡುಗನ ತಿನ್ನಲು
ಹವಣಿಪ ತೆರದಲಿ ನೋಡಿದರವರು.
"ಇವನೇ ಆಗಿನ ಜಟಕಾ ಸಾಬಿ
ಅವನೆ ಈಗಿನ ತತ್ವಜ್ಞಾನಿ.
ಜಟಕಾ ಹೊಡೆಯಲು ಹೋಗಿ ಸಾಬಿ
ನೀನೇ ಲೋಕದಿ ಬಲು ಅಜ್ಞಾನಿ”
ಎಂದಾ ದುರುಳರು ಕೂಗಾಡಿದರು.

ಶಾಂತಿಯ ಸತ್ಯದ ನಸುನಗೆಯಲ್ಲಿ
ತಮದ ತುರಂಗವನೋಡಿಸುತಲ್ಲಿ
ಎಲ್ಲರ ಮೆಚ್ಚಿನ ಒಳ್ನುಡಿಯಲ್ಲಿ
ಆ ಜ್ಞಾನಿಯು ಉತ್ತರ ಹೇಳಿದನು
ತಿಳಿವಿನ ಹೊನಲನು ನೆರೆ ಹರಿಸಿದನು.
"ಹಗಲಿರುಳೆನ್ನದೆ ದುಡಿದೂ ದುಡಿದು
ಹೆಂಡಿರ ಮಕ್ಕಳ ಸಾಕುವನರಿದು
ಜಟಕಾ ಸಾಬಿಯ ಮಾತೇಕಣ್ಣ
ತಿಳಿಯದೆ ಮಾತನು ಆಡುವಿರಣ್ಣ.
ಜಟಕಾ ಹೊಡೆಯುವ ಸಾಬಿಯೆ ರಾಜ