ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೧೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
“ಎಕ್ಕಲಗಾಣ”-? / ೧೦೩

ತಿಂಗಳ ಬಿಂಬಿಮಂ ಹಿಡಿದು ಹಿಂಡಿ ಪಳಚ್ಚನ ಸೋರ್ವ ಸೋನೆಯಂ-
ತಿಂಗಡಲಿಂ ಪೊದಳಮರ್ದನದೂಡೊಯ್ಯನೆ ಸೋರ್ವ ಸೋನೆಯಂ-
ತೇಂಗಡ ಸೀಯನುಣಿದುದೂ ಗೇಯದ ಮೆಲ್ಲುಲಿ ಜಾಣ ಗಾಣನಾ

ಇಲ್ಲಿ ಗಾಣನೆಂದರೆ 'ಗಾಯಕ' ಎಂಬುದೇ ಅರ್ಥವೆಂದು ಯಾರಿಗಾದರೂ ತಿಳಿಯದಿರದು.

'ಏಕ' ಎಂಬ ಸಂಸ್ಕೃತ ಶಬ್ದವು ಪ್ರಾಕೃತದಲ್ಲಿ ಹಾಗೂ ಕನ್ನಡದಲ್ಲಿ 'ಎಕ್ಕ' ಎಂಬ ರೂಪವನ್ನು ತಾಳುವುದು ಸುಪ್ರಸಿದ್ಧ. ಏಕ, ದಶ ಇತ್ಯಾದಿ ಸಂಖ್ಯಾ ಸ್ಥಾನಗಳನ್ನು, ಎಕ್ಕಂ, ದಹಂ ಇತ್ಯಾದಿಯಾಗಿ ಹೇಳುವ ರೂಢಿ ಇದೆಯಷ್ಟೆ, ಎಕ್ಕತುಳ (ಏಕತುಲ್ಕ), ಎಕ್ಕಸರ, ಎಕ್ಕಾವಳಿ ಇತ್ಯಾದಿಗಳು ಕನ್ನಡ ಸಾಹಿತ್ಯದಲ್ಲಿ ತುಂಬ ಇವೆ. ಆದುದರಿಂದ 'ಏಕಲ' ಎಂಬ ಸಂಸ್ಕೃತವು ಕನ್ನಡದಲ್ಲಿ 'ಎಕ್ಕಲ' ಎಂಬ ರೂಪವನ್ನು ಪಡೆಯುವುದು ಸಹಜವೂ ಕ್ರಮ ಪ್ರಾಪ್ತವೂ ಆಗಿದೆ.

ಇವುಗಳನ್ನೆಲ್ಲ ಪರಿಭಾವಿಸಿದರೆ 'ಎಕ್ಕಲಗಾಣ'ನೆಂದರೆ, ಸಂಗೀತ ಶಾಸ್ತ್ರಗಳಲ್ಲಿ ಹೇಳಿದ. 'ಏಕಲಗಾಯನ'ನೇ, ಎಂದರೆ ಒಂಟಿಯಾಗಿ, ವಾದ್ಯಾದಿಗಳ ಮೇಳವಿಲ್ಲದೆ ಹಾಡುವ ಗಾಯಕನೆಂಬುದೂ, 'ಯಕ್ಷಗಾನ' ಎಂಬರ್ಥವು ಆ ಶಬ್ದಕ್ಕೆ ಸರ್ವಥಾ ಸಾಧುವಲ್ಲವೆಂಬುದೂ ವಿದಿತವಾಗದಿರದು.

ಅಗ್ಗಳನ ಆ ಪದ್ಯವು 'ಎಕ್ಕಲಗಾಣ'ನ ಹಾಡುವಿಕೆಯ ಅಶಾಸ್ತ್ರೀಯತೆಯನ್ನೂ, ಸೌಂದರವನ್ನೂ ಒಟ್ಟಾಗಿಯೇ ಹೇಳುತ್ತಿದೆ ಎಂಬ ಪಂಡಿತ ತಿಮ್ಮಪ್ಪಯ್ಯನವರ ಅಭಿಪ್ರಾಯಕ್ಕೂ, ಆ ಪದ್ಯವು 'ದೇಸಿ'ಯ ಕುರಿತು ಸಾಂಪ್ರದಾಯಿಕವಾಗಿ ಬಂದ ತಾತ್ಸಾರ ವನ್ನು ಸೂಚಿಸುತ್ತಿದೆ ಎಂಬ ಶ್ರೀ ಕಾರಂತರ ಅಭಿಪ್ರಾಯಕ್ಕೂ ಅದರಲ್ಲಿ ಆಧಾರವಿದೆಯೇ ಎಂಬುದನ್ನು ಇನ್ನಷ್ಟು ವಿಮರ್ಶಿಸುವುದು ಯುಕ್ತವಾಗದಿರದು. ಆ ಪದ್ಯದ ಸರಿಯಾದ ಅಭಿಪ್ರಾಯವು ನಮಗಾಗಬೇಕಾದರೆ, ಅದರಲ್ಲಿರುವ ಸಂಗೀತ ಶಾಸ್ತ್ರದ ಪಾರಿಭಾಷಿಕ ಶಬ್ದಗಳ ಅರ್ಥಗಳನ್ನು ಮೊದಲಾಗಿ ತಿಳಿದುಕೊಳ್ಳಬೇಕು. ಅವುಗಳೊಳಗೆ 'ಠಾಯ' ಎಂದರೇನೆಂಬುದನ್ನು ನೋಡೋಣ.

ನಮ್ಮ ಪುರಾತನ ಸಂಗೀತ ಶಾಸ್ತ್ರ ಗ್ರಂಥಗಳಲ್ಲಿ 'ಸ್ಥಾಯಃ' ಎಂದುದನ್ನೇ, ಮತ್ತಣ ಗ್ರಂಥಗಳಲ್ಲಿ ಕಾಣಬಹುದು. ಉದಾ : "ರಾಗಸ್ಕಾವಯವಃ ಸ್ಥಾಯಃ” (ಸಂಗೀತ ರತ್ನಾಕರ- ಪ್ರಕೀರ್ಣಕಾಧ್ಯಾಯ, ಶ್ಲೋಕ-೫) 'ಸ್ಥಾಯವೆಂದರೆ ರಾಗದ ಅವಯವ', 'ಸಂಗೀತಸಾರಾಮೃತ', : ಚತುರ್ದಂಡೀ ಪ್ರಕಾಶಿಕಾ' ಇತ್ಯಾದಿಗಳಲ್ಲಿ 'ಠಾಯ'ವೆಂಬ ಹೆಸರನ್ನೇ ಇದಕ್ಕೆ ಬಳಸಲಾಗಿದೆ. ನಮ್ಮ ಪುರಾತನ ಸಂಗೀತ ಪದ್ಧತಿಯಲ್ಲಿ 'ಆಲಪ್ತಿ' ಎಂಬುದು, ಸತಾಲ ಮತ್ತು ವಿತಾಲ ಎಂದು ಎರಡು ವಿಧವಾಗಿತ್ತು. ಸತಾಲ ಎಂದರೆ ತಾಳಬದ್ಧವಾಗಿ ಮಾಡುತ್ತಿದ್ದ ಆಲಾಪವನ್ನು 'ರೂಪಕಾಲ' ಎಂದೂ 'ವಿತಾಲ ಎಂದರೆ ತಾಳಕ್ಕೊಳಪಡದ ಮಾಡುವ (ಈಗ ಕರ್ಣಾಟಕ ಸಂಗೀತದಲ್ಲಿ ಸಾಧಾರಣವಾಗಿ ರೂಢವಾಗಿರುವಂತಹ) ಆಲಾಪವನ್ನು 'ರಾಗಾಲಾಪ್ತಿ' ಎಂದೂ ಹೇಳುತ್ತಿದ್ದರು. (ಸಂ. ರತ್ನಾಕರ, ಪುಟ - ೨೬೭) ಪ್ರಬಂಧಾಂಗವಾಗಿ ಮಾಡುವ, ಎಂದರೆ ಒಂದು ಗೀತವನ್ನು ಹಾಡುವುದಕ್ಕೆ ಪೀಠಿಕೆಯಾಗಿ ಮಾಡುವ 'ಆಲಪ್ತಿ'ಯನ್ನು ವಿವರಿಸುವ ಸಂದರ್ಭದಲ್ಲಿ, 'ಸಂಗೀತ ರತ್ನಾಕರ'ದ ವ್ಯಾಖ್ಯಾತನಾದ ಕಲ್ಲಿನಾಥನು, ಆಲ ಸ್ಥಾಯಂ, ರಾಗಾಲರವಯವಂ; ವಿಧಾಯ, ಪ್ರಥಮಂ ಗೀತ್ವಾ ಇತ್ಯಾದಿಯಾಗಿ ಹೇಳುತ್ತಾನೆ. ಇದರಿಂದ ಸ್ಥಾಯ ಅಥವಾ ಅದರ ಅಪಭ್ರಂಶರೂಪವಾಗಿರುವ 'ಠಾಯ' ಎಂದರೆ, ಶಾಸ್ತ್ರೀಯ ರೀತಿಯಲ್ಲಿ ಗೀತ ಪ್ರಬಂಧವನ್ನು ಹಾಡುವಾಗ ಆರಂಭದಲ್ಲಿ ಮಾಡತಕ್ಕ