ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೧೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

“ಎಕ್ಕಲಗಾಣ”-? / ೧೧೩

ಲಕ್ಷಣವಿದೆ. ಅಲ್ಲಿಯೂ ಅದಕ್ಕೆ ಪಂಚಮವಿಲ್ಲ. ಗೋವಿಂದ ದೀಕ್ಷಿತನು ಇದನ್ನು 'ದೇಶ' ಎಂದು ಹೆಸರಿಸಿ, ದೇಶಾಖ್ಯರಾಗಂ ಕಥಯಾಮಿ... ಸ್ಮಾತ್ ಪಂಚಮೇನಾಪಿ ವಿಹೀನ ಏಷಃ” ಎಂದಿದ್ದಾನೆ. ಈ ಶ್ಲೋಕವು ನಮ್ಮ ಸಂಶೋಧಕರ ಕಣ್ಣಿಗೆ ಬೀಳಲಿಲ್ಲವೆಂದು ತೋರುತ್ತದೆ. ಬೀಳುತ್ತಿದ್ದರೆ, ""ನಮ್ಮ ದೇಶದಲ್ಲಿಯೇ ಪಂಚಮವಿಲ್ಲವೆಂದು ದೀಕ್ಷಿತನು ಹೇಳುತ್ತಾನೆ” ಎನ್ನುತ್ತಿದ್ದರೋ ಏನೋ! ಮತ್ತೆ ಅವನು ನಮ್ಮ ಕಲಾ ವಿಮರ್ಶಕರಿಂದ 'ಪುಸ್ತಕ ಪಂಡಿತ'ರಿಂದಲ್ಲ- ಏನೇನು ಕೇಳಬೇಕಾಗಿತ್ತೋ!... ದೀಕ್ಷಿತನ ಪುಣ್ಯ!

ಮಲ್ಲಿನಾಥ ಪುರಾಣದಿಂದ ಉದ್ಧರಿಸಲಾದ 'ನುಣ್ಯರದಿನಾಣತಿ ಮಾಡಿದುದುನ್ಮದಾಳಿ ತಾವರೆಯೊಳಗಿರ್ದ ಲಕ್ಷ್ಮಿಯ ಮನಂಬಡವಕ್ಕಲಗಾಣನಂದದಿಂ ಎಂಬುದರಲ್ಲಿ ಎಕ್ಕಲಗಾಣನ ಕುರಿತು ಈ ಮೊದಲು ಮಾಡಿದ ವಿವೇಚನೆಯಿಂದ ತಿಳಿದುಬಂದುದಕ್ಕಿಂತ ಹೆಚ್ಚಿನದೇನೂ ತಿಳಿಯುವಂತಿಲ್ಲವಾದರೂ, ಅದನ್ನೇ ಪುಷ್ಟಿಕರಿಸುವ ಒಂದು ಮಾತು ಅದರಲ್ಲಿದೆ. ಇಲ್ಲಿ 'ನುಣ್ಣರ'ವೆಂಬುದು ಬಂದಿರುವುದನ್ನು ಗಮನಿಸಬೇಕು. ಯಾವು ದೊಂದು ಸಹಾಯವಿಲ್ಲದೆ ಹಾಡಿದರೂ 'ಮನಂಬಡೆ'ಯಬೇಕಾದರೆ, ಅಂಥವನ ಕಂಠ ಸ್ವರವು ಅತಿ ಮಧುರವಾಗಿರಲೇಬೇಕು. ಆದುದರಿಂದಲೇ ಅಗ್ಗಳನೂ ತನ್ನ ಎಕ್ಕಲಗಾಣ ನನ್ನು 'ಇಂಪಾಣ'ನೆಂದು ಕರೆದುದಾಗಿದೆ. ಶ್ರುತಿವಾದ್ಯವನ್ನೂ, 'ಪಕ್ಕವಾದ್ಯ'ಗಳನ್ನೂ ತೆಗೆದುಬಿಟ್ಟರೆ, ನಮ್ಮ ಸಂಗೀತಗಾರರೊಳಗೆ ಎಷ್ಟು ಮಂದಿಯ 'ಕಚೇರಿ'ಗಳನ್ನು ನಮಗೆ ಕೇಳಲು ಸಾಧ್ಯವಾದೀತು? ಆದುದರಿಂದ, 'ಏಕಲ' ಎಂಬುದಕ್ಕೆ ಪ್ರೊ| ಸಾಂಬಮೂರ್ತಿ ಯವರು ಕೊಟ್ಟ ಅರ್ಥವು (a person who is able to sing by himself without the aid of any instrument) ಶಾಸ್ತ್ರ ಸಂಮತವೂ, ಉಚಿತವೂ ಆಗಿದೆ. 'ಇಂಪಾಣ'ನು ಮಾತ್ರ 'ಎಕ್ಕಲಗಾಣ'ನಾಗಬಲ್ಲನು.

ಈ ಸುದೀರ್ಘವಾದ ವಿವೇಚನೆಯಿಂದ, 'ಎಕ್ಕಲಗಾಣ' ಎಂದರೆ ಯಕ್ಷಗಾನವಲ್ಲ, ಎಡಬಲಗಳಲ್ಲಿ ವಾದ್ಯಸಹಾಯವಿದ್ದು ಕೈಯಲ್ಲಿ ಜಾಗಟೆಯನ್ನೂ, ತಾಳವನ್ನೂ ಹಿಡಿದು ಹಾಡುವ ಯಕ್ಷಗಾನ ಭಾಗವತ ಅಲ್ಲವೆಂಬುದು ವಾಚಕರಿಗೆ ಖಚಿತವಾಗಿರಬಹು ದೆಂದು ನಂಬುತ್ತೇನೆ. ಆದುದರಿಂದ ಯಕ್ಷಗಾನದ ಪ್ರಾಚೀನತೆಯನ್ನು ಸ್ಥಾಪಿಸುವುದಕ್ಕೆ ಈ 'ಎಕ್ಕಲಗಾಣ' ಎಂಬ ಶಬ್ದದಿಂದ ನಿಜವಾದ ಪ್ರಯೋಜನವೇನೂ ದೊರಕುವುದಿಲ್ಲ ವೆಂದು ನಿವೇದಿಸಿಕೊಳ್ಳುತ್ತೇನೆ.


೧.“ಎಕ್ಕಲ ಯಕ್ಷಗಾನವಾಗುತ್ತದೆ” (ಬಯಲಾಟ - ಪುಟ ೯. ಅಡಿ ಟಿಪ್ಪಣಿ) ಎಂದು ನಂಬಿದ ಶ್ರೀ ಕಾರಂತರು, 'ಭರತೇಶ ವೈಭವ'ದಲ್ಲಿ 'ಎಕ್ಕಡಿಗ' ಎಂಬ ಶಬ್ದವನ್ನು ಕಂಡು (ಎಕ್ಕಲ, ಎಕ್ಕಡಿಗಗಳ ಧ್ವನಿಸಾಮ್ಯದಿಂದ?) ಅಲ್ಲಿಯೂ ಯಕ್ಷಗಾನದ ಕುರುಹುಗಳನ್ನು ಕಾಣುತ್ತಾರೆ! ಆ ಸಂದರ್ಭ ಹೀಗಿದೆ: ನೇತ್ರಮೋಹಿನಿ, ಚಿತ್ರ ಮೋಹಿನಿ ಎಂಬ ನರ್ತಕಿಯರಿಬ್ಬರ ನಾಟ್ಯ ಪ್ರದರ್ಶನವನ್ನು ನೋಡುವುದಕ್ಕಾಗಿ-

ರಾಜಕುಮಾರರು ರಸಿಕರು ಬುಧರಧಿರಾಜರು ಕವಿಗಮಕಿಗಳು |
ತೇಜಿಷ್ಟರೈತಂದು ಭರತರಾಜನ ಕಂಡು ತೇಜದೊಳೊಲ್ಲು ಕುಳಿತರು ǁ
ಗಣಿಕೆಯರಕ್ಕಡಿಗರು ನಾಟ್ಯಶಾಸ್ತ್ರಲಕ್ಷಣಿಕರು ಭಾವರಂಜಕರು
ಗುಣಿಗಳು ಮಂತ್ರಿಗಳರಸನ ಕಂಡು ತಿಂತಿಣಿಯಾಗಿ ಕುಳಿತರೋಜೆಯೊಳು ǁ

(ಪೂರ್ವ ನಾಟಕ ಸಂಧಿ - ಪದ್ಯ ೨೮-೨೯)

'ಎಕ್ಕಡಿಗ' ಎಂಬ ಶಬ್ದವು ಕಿಟ್ಟೆಲರ ಕೋಶದಲ್ಲಿಲ್ಲವಾದರೂ, ಅದರ ಇನ್ನೊಂದು ರೂಪವೇ ಆಗಿರಬೇಕಾದ 'ಎಕ್ಕಟಿಗ' ಎಂಬುದಕ್ಕೆ A superior noble or