ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಪ್ರಕಾಶಕರಿಂದ ಎರಡು ಮಾತು

ದಿ। ಕುಕ್ಕಿಲ ಕೃಷ್ಣ ಭಟ್ಟರೊಂದಿಗೆ ನನಗೆ ವೈಯಕ್ತಿಕ ಪರಿಚಯ ತೀರ ಕಡಿಮೆ.

ನನ್ನ ನೆನಪಿನಂತೆ, ನಮ್ಮ ಪ್ರಥಮ ಭೇಟಿಯೇ ಅವರು ನಿಧನ ಹೊಂದುವ ವರ್ಷ ಅಥವಾ ಕೆಲವು ತಿಂಗಳುಗಳ ಮೊದಲು ವಿವೇಕಾನಂದ ಕಾಲೇಜಿನಲ್ಲಿ ನಡೆದ ಒಂದು ಸಮಾರಂಭದಿಂದ ಹಿಂದಿರುಗುವಾಗ, ಆಗ ಅವರು ಅವರ 'ಶಿಲಪ್ಪದಿಕಾರಂ' ಗದ್ಯಾನುವಾದವನ್ನು ಕರ್ನಾಟಕ ಸಂಘದಿಂದ ಪ್ರಕಟಿಸುವ ಪ್ರಸ್ತಾಪ ಮಾಡಿದ್ದರು.

ಅನಂತರ ಅವರು ಅನಿರೀಕ್ಷಿತವಾಗಿ ತೀರಿಕೊಂಡರು.

ಸುಮಾರು ಐದು ವರ್ಷಗಳ ಹಿಂದೆ, ಮಿತ್ರರಾದ ಪ್ರೊ। ಅಮೃತ ಸೋಮೇಶ್ವರ ಅವರು ದಿ। ಕುಕ್ಕಿಲರ ಸಮಗ್ರ ಲೇಖನಗಳ ಸಂಪುಟವನ್ನು ಕರ್ನಾಟಕ ಸಂಘ ಹೊರತರಬೇಕೆಂದು ಸೂಚಿಸಿದರು. ಸಂಪಾದಿಸಿ ಕೊಟ್ಟರೆ ಪ್ರಕಟಿಸುವ ಜವಾಬ್ದಾರಿಯನ್ನು ಕರ್ನಾಟಕ ಸಂಘ ವಹಿಸಿಕೊಳ್ಳುವುದೆಂದು ಹೇಳಿದೆವು. ಅನಂತರ, ಪ್ರೊ। ಅಮೃತ ಅವರು ಸಿಕ್ಕಿದಾಗಲೆಲ್ಲ ನಾವೇ ಅವರಿಗೆ ನೆನಪಿಸುತ್ತಿದ್ದವು. ಶ್ರೀ ಎಂ. ಪ್ರಭಾಕರ ಜೋಶಿ ಸಂಪಾದನೆಯ ಕೆಲಸ ಮಾಡುತ್ತಿದ್ದಾರೆಂದೂ, ಆದಷ್ಟು ಬೇಗನ ಸಿದ್ಧಪಡಿಸಿ ಕೊಡುವುದಾಗಿಯೂ ಉತ್ತರ ಬರುತ್ತಿತ್ತು.

ಹಸ್ತಪ್ರತಿ ಕೈಗೆ ಬಂತು. ಬಂದು ಎರಡು ವರ್ಷಗಳೇ ಸಂದುವು. ಒಂದಲ್ಲ ಒಂದು ಕಾರಣಕ್ಕೆ ಮುದ್ರಣದ ಕೆಲಸ ಮುಂದೆ ಹೋಗುತ್ತಿತ್ತು. ಕೊನೆಗೂ, ಇದೇ ದಶಂಬರ ತಿಂಗಳಲ್ಲಿ, ೧೯೯೮ನೇ ಮಾರ್ಚ್ ತಿಂಗಳಲ್ಲಿ 'ಕುಕ್ಕಿಲ ಸಂಪುಟ' ಹೊರಬರಲೇ ಬೇಕೆಂಬ ದೃಢ ನಿರ್ಧಾರಕ್ಕೆ ಬಂದವು. ಅದರ ಫಲವಾಗಿ ಈ ಬೃಹತ್ ಸಂಪುಟ ಈಗ ನಿಮ್ಮ ಮು೦ದಿದೆ. ನಮಗೆ ಸಂತೋಷವಾಗಿದೆ.

ದಿ। ಕೃಷ್ಣ ಭಟ್ಟರ ಕೆಲವರು ಬಂಧುಗಳು ಮತ್ತು ಕರ್ನಾಟಕ ಸಂಘದ ಕೆಲವರು ಅಭಿಮಾನಿಗಳು ಸ್ವಲ್ಪಮಟ್ಟಿಗೆ ಇದರ ಮುದ್ರಣದ ವೆಚ್ಚದ ಭಾರವನ್ನು ಹೊತ್ತುಕೊಂಡಿದ್ದಾರೆ. ಅವರಿಗೆ ನಾವು ಕೃತಜ್ಞರು. ನಮ್ಮ ಮೇಲಿನ ಉಳಿದ ಭಾರವನ್ನು ಇಳಿಸುವುದರಲ್ಲಿ ನಾಡಿನಾದ್ಯಂತ ಹರಡಿರುವ ಶಿಕ್ಷಣ ಸಂಸ್ಥೆಗಳು, ಗ್ರಂಥಭಂಡಾರಗಳು ಮತ್ತು ಸಾಹಿತ್ಯ-ಕಲಾಭಿಮಾನಿಗಳು ಸಹಕರಿಸುವರೆಂಬ ವಿಶ್ವಾಸ ನಮ್ಮದು.

ಈ ಸಂದರ್ಭದಲ್ಲಿ, ನಾವು ಸ್ಮರಿಸಿಕೊಳ್ಳಲೇಬೇಕಾದ ಮೂವರು, ಕಲಾವಿದ ಶ್ರೀ ಮೋಹನ ಸೋನ, ಮುದ್ರಕರಾದ ಶ್ರೀ ಎಂ. ಎಸ್. ರಘುನಾಥ ರಾವ್ ಮತ್ತು ಅವರ ಮುದ್ರಣಾಲಯದ ಕಂಪ್ಯೂಟರ್ ವಿಭಾಗದ ಶ್ರೀಮತಿ ಜಯಲಕ್ಷ್ಮಿ ಎಸ್. ಜೋಯಿಸ್, ಅವರ ಸಂಪೂರ್ಣ ಸಹಕಾರವಿಲ್ಲದಿರುತ್ತಿದ್ದಲ್ಲಿ ಇಷ್ಟು ಕಡಿಮೆ ಅವಧಿ ಯಲ್ಲಿ ಈ ಕೃತಿ ಬೆಳಕು ಕಾಣುತ್ತಿರಲಿಲ್ಲ.

ಪುತ್ತೂರು
೨೮-೩-೧೯೯೮
ಬೋಳಂತಕೋಡಿ ಈಶ್ವರ ಭಟ್ಟ
ಅಧ್ಯಕ್ಷ, ಕರ್ನಾಟಕ ಸಂಘ