ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೧೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಯಕ್ಷಗಾನ ಮತ್ತು ಕಥಕಳಿ

ಕೇರಳದ ಕಥಕಳಿಯು ಆಂಧ್ರ, ಕರ್ಣಾಟಕ, ತಮಿಳುನಾಡು ಈ ಮೂರು ರಾಜ್ಯಗಳ ವಿಸ್ತಾರದಲ್ಲಿರುವ ಯಕ್ಷಗಾನ ಬಯಲಾಟಕ್ಕಿಂತ ಭಿನ್ನವಾದ ಸಂಪ್ರದಾಯವೆಂದು ಕೆಲವರು ಊಹಿಸುತ್ತಾರೆ. ಇದಕ್ಕೆ ಮುಖ್ಯ ಕಾರಣವೆಂದರೆ ಅದು ವಿಶೇಷವಾದ ಹಸ್ತಮುದ್ರೆಗಳಿಂದ ಅರ್ಥ ನಿರೂಪಿಸುವಂಥ ಮೂಕನಾಟ್ಯ ಎಂಬುದು. ಆದರೆ, ಇಂದಿನ ಕಥಕಳಿಯಲ್ಲಿ ಕಂಡುಬರುವ ಈ ವಿಶೇಷತೆಗಳು ಕಳೆದ ಇನ್ನೂರೈವತ್ತು ವರ್ಷಗಳಿಂದೀಚೆಗಷ್ಟೆ ಅದರ ಬೆಳವಣಿಗೆಯಲ್ಲಿ ಕಾಲಕಾಲಕ್ಕೆ ಉಂಟಾದ ಸುಧಾರಣೆಗಳ ಪರಿಣಾಮ ಹೊರತು ಪೂರ್ವ ದಲ್ಲಿ ಇದ್ದಂಥದಲ್ಲ ಎಂಬುದು ಮಲಯಾಳ ಭಾಷಾಚರಿತ್ರೆಯಿಂದಲೂ ಲಕ್ಷಣಗ್ರಂಥ ಗಳಿಂದಲೂ ತಿಳಿದುಬರುತ್ತದೆ. ರಾಮನಾಟ್ಟಂ, ಕೃಷ್ಣಾಟ್ಟಂ ಎಂದು ಕರೆಯಲಾಗುತ್ತಿದ್ದ ಅಂದಿನ ಕಥಕಳಿ ಸಂಪ್ರದಾಯದಲ್ಲಿ ಯಕ್ಷಗಾನ ಬಯಲಾಟಗಳಲ್ಲಿ ಬಹಳ ಕಡೆ ಇಂದೂ ರೂಢಿಯಲ್ಲಿರುವಂತೆ ಪಾತ್ರಗಳೂ ಹಾಡುತ್ತಿದ್ದವು. ಹಸ್ತಮುದ್ರೆಗಳ ವಿಶೇಷ ನಿರೂಪಣೆಯೂ ಆಗ ಇದ್ದಿಲ್ಲ. ವೇಷ ರಚನೆಯಲ್ಲಿಯೂ ಈಗ ಕಾಣುವಂತೆ ದವಡೆಗಳ ಮೇಲೆ ಉದ್ದುದ್ದಕ್ಕೆ ಬೆಳೆಯಿಸುವ ಚುಟ್ಟಿಯ ಕ್ರಮವೂ ಹಿಂದೆ ಇದ್ದದ್ದಲ್ಲ. ಹಾಡುಗಾರಿಕೆ ಯಲ್ಲಿಯೂ ಈಗ ಇರುವಂತೆ ಪ್ರತಿ ಚರಣದ ಒಂದೊಂದೇ ಸೊಲ್ಲನ್ನು ವಿಲಂಬಿತವಾಗಿ ರಾಗಾಲಾಪನೆಯೊಂದಿಗೆ ಮತ್ತೆ ಮತ್ತೆ ಆವರ್ತಿಸುವ 'ಸೋಪಾನ ಕ್ರಮ'ವೂ ಹಿಂದಕ್ಕೆ ಇರಲಿಲ್ಲ. ಆದ್ದರಿಂದ ಅಂದಿನ ಕಥಕಳಿಯೆಂದರೆ ತಮಿಳಿನ ತೆರುಕ್ಕೂತ್ತು ಅಥವಾ ಕನ್ನಡದ ಮೂಡಲಪಾಯ ಬಯಲಾಟಕ್ಕೆ ಸರಿಸಮಾನವಾದ ಪ್ರಯೋಗವೇ ಆಗಿತ್ತು ಎಂದರೆ ಅದು ತಮಿಳಿನ ತೆರುಕೂತ್ತಿನದೇ ಒಂದು ಪ್ರಾದೇಶಿಕ ಭೇದವೆಂಬಂತೆ ತಿಳಿಯ ಬಹುದಾಗಿದೆ.

ಇನ್ನು ಕಥಕಳಿಯ ಪ್ರಬಂಧಗಳನ್ನು ಯಕ್ಷಗಾನ ಕೃತಿಗಳೊಡನೆ ಹೋಲಿಸಿ ನೋಡಿದ್ದಾದರೆ ಅವೆರಡರೊಳಗೆ ಏನೊಂದೂ ವ್ಯತ್ಯಾಸ ಕಂಡುಬರುವುದಿಲ್ಲ. ಭಾಷೆ ಮಾತ್ರ ಬೇರೆ ಹೊರತು ಪದ್ಯರಚನೆಗಳೆಲ್ಲಾ ಏಕರೂಪವಾಗಿಯೇ ಇರುತ್ತವೆ. ಅಲ್ಲದೆ ಆರಂಭದ ಮಂಗಲಾಚಾರದಲ್ಲಿ ತಪ್ಪದೇ ಹಾಡತಕ್ಕ 'ಹರಿಹರ ವಿಧಿನುತ' ಎಂದು ಪ್ರಾರಂಭವಾಗುವ ವಿಘ್ನೇಶ್ವರ ಸ್ತುತಿಯೂ ಯಕ್ಷಗಾನದಲ್ಲಿರುವುದೇ ಕಥಕಳಿಯಲ್ಲಿಯೂ ಇರುವಂತಹದಾಗಿದೆ. ಹೆಚ್ಚೇಕೆ, ಪೂರ್ವದ ಕಥಕಳಿಯ ಆ ರಾಮನಾಟ್ಟ ಪ್ರಬಂಧಗಳ ಪ್ರತಿರೂಪವಾಗಿಯೇ ಕನ್ನಡ ಯಕ್ಷಗಾನ ರಾಮಾಯಣ ಕೃತಿಗಳು ರಚನೆಗೊಂಡಿವೆ. ಅವುಗಳನ್ನು ರಚಿಸಿದ ಪಾರ್ತಿಸುಬ್ಬನೆಂಬ ಕವಿ ಕಥಕಳಿಯಲ್ಲಿ ಭಾಗವತನಾಗಿದ್ದವನೇ ಯಕ್ಷಗಾನದಲ್ಲಿಯೂ ಭಾಗವತನಾಗಿದ್ದನೆಂಬುದನ್ನು ಇಲ್ಲಿ ಗಮನಿಸಬಹುದು.

ಅದಲ್ಲದೆ ಕಥಕಳಿ ಯಕ್ಷಗಾನ ಇವೆರಡರ ಮೇಲೂ ಜಯದೇವ ಕವಿಯ 'ಗೀತಗೋವಿಂದ' ಅಷ್ಟಪದಿ ನೃತ್ಯನಾಟಕದ ಪ್ರಭಾವವುಂಟಾಗಿರುವುದು ಸುವ್ಯಕ್ತವಾಗಿಯೇ ಇದೆ. ಆರಂಭದ ಮಂಗಲಾಚಾರದಲ್ಲಿ ಒಂದು ಅಷ್ಟಪದಿಯನ್ನು ತಪ್ಪದೇ ಹಾಡುವ ನಿಯಮ ಕಥಕಳಿಯಲ್ಲಿರುವಂತೆ ಆಂಧ್ರ ಯಕ್ಷಗಾನದಲ್ಲಿಯೂ ಇರುವುದನ್ನು ಕಾಣುತ್ತವೆ. 'ಕೃಷ್ಣಾಟ್ಟಂ', 'ಅಷ್ಟಪದಿಯಾಟ್ಟಂ' ಎಂಬಂಥ ಕಥಕಳಿಯ ಪೂರ್ವರೂಪಗಳಲ್ಲಿ ದಶಾವತಾರ ನಾಟ್ಯರೂಪಕವೂ ಆಡಲ್ಪಡುತ್ತಿತ್ತು. ಕನ್ನಡದಲ್ಲಿಯೂ ಹಿಂದಕ್ಕೆ ನಟ್ಟುವ