ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೧೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೪೦ | ಕುಕ್ಕಿಲ ಸಂಪುಟ
ಅವರು ಪಾರ್ತಿಸುಬ್ಬನ ಕಾಲವನ್ನು ಸು. ೧೮೦೦ ಎಂದು ಒಪ್ಪಿದ್ದರು. ಅವನ ಕೃತಿಗಳ ಮೇಲೆ ಮಲೆಯಾಳಂನ ಕೊಟ್ಟಾರಕರ ಮಹಾರಾಜನ ರಾಮನಾಟಂ ಕೃತಿಗಳ ಬಲವಾದ ಪ್ರಭಾವವಿರುವುದನ್ನು ತೋರಿಸಿದರು. ಈ ಪ್ರಭಾವ ಪರಿಶೀಲನೆ ಅವರು ಮಾಡಿದ ಮಹತ್ವದ ಸಂಶೋಧನೆ. ಈ ಹಂತದಲ್ಲಿ ಅವರು ಡಾ| ಕಾರಂತರು ಮಂಡಿಸಿದ ವಾದಗಳನ್ನು ಸಯುಕ್ತಿಕವಾಗಿ ನಿರಾಕರಿಸಿದುದಲ್ಲದೆ, ಕಾರಂತರ ಹಸ್ತಪ್ರತಿಗಳ ಕಾಲನಿರ್ಣಯವನ್ನೂ ಪ್ರಶ್ನಿಸಿದರು.
- ಎರಡನೆಯ ಹಂತದಲ್ಲಿ, ಕುಕ್ಕಿಲರಿಗೆ ದೊರೆತ ಹಸ್ತಪ್ರತಿಗಳ ಮತ್ತು ಹೊಸಮಾಹಿತಿಗಳ ಆಧಾರದಲ್ಲಿ ಅವರು ಕವಿ ಪಾರ್ತಿಸುಬ್ಬನ ಕಾಲವನ್ನು ಸು. ೧೫೯೦-೧೬೨೦ ಎಂದು ನಿರ್ಣಯಿಸಿದ್ದಾರೆ. (ಪಾರ್ತಿಸುಬ್ಬನ ಯಕ್ಷಗಾನಗಳು ಮೈಸೂರು ವಿ.ವಿ.೧೯೭೫), ಅಲ್ಲದೆ ೧೮೦೦ರಲ್ಲಿ ಬದುಕಿದ್ದ ಪಾರ್ತಿಸುಬ್ಬನೆಂಬ ವ್ಯಕ್ತಿ ಬೇರೆ, ಕವಿ ಪಾರ್ತಿಸುಬ್ಬನು ಬೇರೆ ಎಂಬ ನಿರ್ಣಯಕ್ಕೂ ಬಂದಿದ್ದಾರೆ.
ಪಾರ್ತಿಸುಬ್ಬನಿಗೆ ಸಂಬಂಧಿಸಿ ಕುಕ್ಕಿಲರ ಬರಹಗಳಲ್ಲಿ ಏಕಸೂತ್ರತೆ ಇದೆ. ಆದರೆ, ಹಿಂದಿನ ವಾದಗಳನ್ನು ಅವರು ಕ್ರಮವಾಗಿ ಸಂಗ್ರಹಿಸಿ, ಮಂಡಿಸದಿರುವುದರಿಂದ, ಪರಿಶೀಲನೆಯ ದೃಷ್ಟಿಯಿಂದ ತೊಡಕಾಗುವುದುಂಟು.

ವಿವಾದಾಂಶಗಳು - ಸಾಮ್ಯಗಳು


ಕಾರಂತ-ಕುಕ್ಕಿಲರ ವಾದಗಳಲ್ಲಿ- ರಾಮಾಯಣ ಮತ್ತಿತರ ಪ್ರಸಂಗಗಳ ಕರ್ತೃ ಯಾರು? ಪಾರ್ತಿಸುಬ್ಬನು ಹೌದೆ, ಅಲ್ಲವೆ? ಅವರ ಊರಾವುದು, ಕಾಲ ಯಾವುದು? ಎಂಬುವು ಮುಖ್ಯ ಪ್ರಶ್ನೆಗಳು, ಕವಿಯು ಪಾರ್ತಿಸುಬ್ಬ, ಅವರ ಊರು ಕುಂಬಳೆ, ಅವನ ಕಾಲ ಸು. ೧೬೦೦ ಎಂದು ಕುಕ್ಕಿಲರ ನಿಲುವು. ಆತನು ಅಜ್ಞಾನ ಕವಿ, ಕಣ್ಣಪುರದ ಕೃಷ್ಣನ ಭಕ್ತ, ಊರು ನಿರ್ಣಯವಿಲ್ಲ ಎಂದು ಕಾರಂತರ ನಿಲುವು ಕಾಲದ ವಿಚಾರದಲ್ಲಿ ಇಬ್ಬರಿಗೂ ಏಕಾಭಿಪ್ರಾಯವಿದೆ.
ಅಲ್ಲದೆ, ತಾನು ನೋಡಿದ ಹಳೆಯ ಸಭಾಲಕ್ಷಣದ ಪ್ರತಿಯೊಂದರಲ್ಲಿ, ಪಂಚವಟಿ ಪ್ರಸಂಗದ ಕತೆಯ ಸೂಚನೆ ಇರುವುದರಿಂದ, ರಾಮಾಯಣ ಪ್ರಸಂಗಗಳು ಪ್ರಾಚೀನ, ಪ್ರಾಯಃ ಅವೇ ಮೊತ್ತಮೊದಲ ಯಕ್ಷಗಾನ ಪ್ರಸಂಗಗಳಿರಬಹುದು ಎಂಬ ಊಹೆಯನ್ನು ಕಾರಂತರು ಮಂಡಿಸಿದ್ದಾರೆ.
ಈ ಅಭಿಪ್ರಾಯವು ಕುಕ್ಕಿಲರ ಅಭಿಪ್ರಾಯಕ್ಕೆ ನಿಕಟವಾಗಿದೆ.
ಈ ಎಲ್ಲದರ ಹಿನ್ನೆಲೆಯಲ್ಲಿ, ಇಲ್ಲಿನ ಪಾರ್ತಿಸುಬ್ಬನ ಸಂಬಂಧಿಯಾದ ಬರಹ ಗಳನ್ನು ಓದಬೇಕೆಂದು ವಿನಂತಿ.

-ಸಂಪಾದಕ