ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೧೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೫೮ | ಕುಕ್ಕಿಲ ಸಂಪುಟ
ಊಹಿಸಿಕೊಳ್ಳಬಹುದು. ಅಷ್ಟು ಮಾತ್ರ ಅಲ್ಲ ನಮ್ಮ ಬಾಲಗೋಪಾಲರ ವೇಷ, ಕುಣಿತ ಆಗ ಹೇಳುವ ಪದ್ಯ, ಪ್ರಸಂಗ ಪೀಠಿಕೆಯಲ್ಲಿ ಹಾಡುತ್ತಿರುವ 'ಹೋದೇವ ದೇವ' ಎಂಬ ಪದ್ಯ ಇತ್ಯಾದಿಗಳನ್ನೆಲ್ಲ ಕಥಕಳಿಯಿಂದಲೆ ನಾವು ಕಲಿತುಕೊಂಡಿದ್ದೇವೆ. ಸಣ್ಣ ಪ್ರಾಯ ದವರು ತಲೆಗೆ ಪಕಡಿ ಕಟ್ಟಿಕೊಂಡು ಕುಣಿಯುವ ಆ ವೇಷಗಳಿಗೆ 'ಕುಟ್ಟಿ ವೇಷ'ವೆಂದೂ, 'ಬಾಲಗೋಪಾಲ'ರೆಂದೂ ಕರೆಯುತ್ತಾರೆ. ಕುಟ್ಟಿ ವೇಷವೆಂಬುದು ನಮ್ಮಲ್ಲಿ 'ಕಟ್ಟುವೇಷ' ವೆಂದು ಅಪಭ್ರಂಶವಾಗಿದೆ. ಬಾಲಗೋಪಾಲರ ವೇಷವೆನ್ನುವುದೂ ಅದನ್ನೆ, ಕಥಕಳಿಯಲ್ಲಿ 'ಜಯ ಬಾಲಗೋಪಾಲ ಜಯ ಗೋಪಿಕಾಲೋಲ ಜಯ ಮೃದುಲಸುಕಪೋಲ ಜಯ ರುಚಿರಫಾಲ' ಎಂಬ ಪದ್ಯದಿಂದ ಆ ವೇಷಗಳನ್ನು ಕುಣಿಸುವ ಪದ್ಧತಿ. ಅದರಿಂದಲಾಗಿ ಆ ವೇಷಗಳಿಗೆ ಬಾಲಗೋಪಾಲರೆಂದೆ ಹೆಸರಾಯಿತು ಅಲ್ಲದೆ ರಾಮಕೃಷ್ಣರೆಂಬ ಅರ್ಥದಲ್ಲಿ ಅಲ್ಲ.
ಇವೆಲ್ಲ ಪಾರ್ತಿಸುಬ್ಬನು ಕಥಕಳಿಯಿಂದ ನಮ್ಮ ಯಕ್ಷಗಾನಕ್ಕೆ ತಂದ ರೂಢಿ.
ಮೇಲೆ ಹೇಳಿದಂತೆ ನಮ್ಮ ಯಕ್ಷಗಾನ ಸಭಾ ಲಕ್ಷಣದಲ್ಲಿರುವ 'ಹರಿಹರಜಿತುಹರ.' ಎಂಬ ಆ ಪದ್ಯವು ಕಥಕಳಿಯ ತೋಡಯದಲ್ಲಿ ಹೀಗಿದೆ :
ಹರಿಹರ ವಿಧಿನುತ ಅಮರ ಪೂಜಿತ ಹೇ ವಾಮನ ರೂಪ |
ಏ ಏಕದಂತ ಚತುರಾದ್ಭುತ ಬಲ ಲಂಬೋದರ ರೇ |
ಸಕಲ ಸಿದ್ಧಿ ಫಲದಾಯಕ ರೇ ರೇ ಪಾಶಾಂಕುಶಧರ ರಜನೀಶಧರ ರೇ |
ವಾರಣಾನನ ನಾಗಾಭರಣ ಕಾಮಿತ ಫಲ ಸಿದ್ಧ ಕರೇ ||
ಇನ್ನೂ ಸೂಕ್ಷ್ಮವಾಗಿ ಪರಿಶೀಲಿಸಿದರೆ ಸುಬ್ಬನ ಕರ್ತೃತ್ವಕ್ಕೆ ಸಾಕ್ಷ್ಯವಾದ ಎಷ್ಟೋ ವಿಷಯಗಳು ಆತನ ಕೃತಿಗಳಿಂದ ವ್ಯಕ್ತವಾಗುತ್ತವೆ. ರಾಮಾಯಣ ಪ್ರಬಂಧಗಳಲ್ಲದೆ ಕುಶಲವರ ಕಾಳಗ, ಐರಾವತ, ಬಾಲಲೀಲೆ ಎಂಬ ಪ್ರಸಂಗಗಳ ಆತನ ಕರ್ತೃತ್ವಕ್ಕೂ ನ್ಯಾಯವಾದ ಪ್ರಮಾಣವಿದೆ. ಐರಾವತ ಪ್ರಸಂಗವನ್ನು ಈಗ ತೋರಿಸಿರುವ ಆ ಮೂಡಪ್ಪದ ಪಟ್ಟಿಯಲ್ಲಿ ಕಾಣುವ ಅದೇ ಪಿಂಗಳ ಸಂವತ್ಸರದಲ್ಲಿ ರಚಿಸಿದುದೆಂಬುದು ಹಳೆಯ ಓಲೆ ಪ್ರತಿಯೊಂದರಿಂದ ನಿರ್ಣಯವಾಗುತ್ತದೆ. ಅದರಲ್ಲಿ ಆ ಆಟವು ಪ್ರಾರಂಭ ವಾಗುವುದಕ್ಕೆ ಪೂರ್ವಭಾವಿಯಾಗಿ ರಂಗಸ್ಥಳದಲ್ಲಿ ಗಜಗೌರೀ ವ್ರತದ ಪೂಜೆಯನ್ನು ಸಾಂಗವಾಗಿ ಮಾಡುವಂತೆ ವಿಧಿ ಇದೆ. 'ಗಜಗೌರೀ ವ್ರತ ಸಂಕಲ್ಪ ಪೂಜಾ ವಿಧಾನಾ' ಎಂದು ಪ್ರಾರಂಭವಾಗುವ ಸಂಕಲ್ಪ ಮಂತ್ರದಲ್ಲಿ... ಮಮ ಸಂತಾನ ಸೌಭಾಗ್ಯ ಸಿದ್ಧರ್ಥಂ... ಮಯಾಚರಿತ ಗೌರೀದೇವತಾಸ್ಕೋನಮಃ ಧ್ಯಾಯಾಮಿ ಧ್ಯಾನಂ ಸಮರ್ಪಯಾಮಿ...' ಇತ್ಯಾದಿ ವಾಕ್ಯಗಳಿಂದ ಆತನಿಗೆ ಪುತ್ರ ಸಂತಾನವಿದ್ದಿಲ್ಲವೆಂದು ಮುಂತಾಗಿರುವ ಐತಿಹ್ಯಗಳು ಯಥಾರ್ಥವೆಂದು ನಂಬಬಹುದಾಗಿದೆ. ಆ ಪ್ರಸಂಗದ ಕಥಾಭಾಗದಲ್ಲಿ ಅರ್ಜುನನು ಶ್ರೀಕೃಷ್ಣನನ್ನು ಕರೆತರಲು ದ್ವಾರಕಿಗೆ ಹೋಗಿ ಅಲ್ಲಿ ಕೃಷ್ಣನನ್ನು ಸ್ತುತಿ ಮಾಡುವ ಅಷ್ಟೋತ್ತರಶತ ಸ್ತುತಿ ವಾಕ್ಯಗಳಲ್ಲಿ ಕುಂಬಳೆಯ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಪಾಟಾಳಿಗಳು ಮಾಡುವ ಸ್ತುತಿ ವಾಕ್ಯಗಳೂ ಸೇರಿವೆ. ಆ ಪ್ರಸಂಗದ ಕೊನೆಯ ಭಾಗದಲ್ಲಿ ಕಥಾವಸ್ತುವಿನ ಅಂಗವಾಗಿಯೆ ಧರ್ಮರಾಯಾದಿಗಳು ಶ್ರೀಕೃಷ್ಣನನ್ನು ಪ್ರತ್ಯಕ್ಷ ಪೂಜಿಸಿ ಆತನಿಗೆ ಮಂಗಳಾರತಿ ಬೆಳಗುವ ಸಂದರ್ಭದಲ್ಲಿ ಹಾಡುವ ನೀಲ ಮೇಘಾಂಗನಿಗೆ ನಿಜ ಶರಣ ಸಂಗನಿಗೆ... ಬೇಡಿದೊರಗಳವ ಕಣ್ವಪುರಿ ಕೃಷ್ಣನಿಗೆ' ಎಂಬ ಪದ್ಯವಿದೆ. ಇದು ಉಡುಪಿಯಲ್ಲಿ ಅಚ್ಚಾದ ಐರಾವತ ಪ್ರಸಂಗ ದಲ್ಲಿಯೂ ಇದೆ. ಇದೇ ಪದ್ಯವು ಅದೇ ಪ್ರೆಸ್ಸಿನಲ್ಲಿ ಅಚ್ಚಾಗಿರುವ ವಾರಂಬಳ್ಳಿ ವಿಷ್ಣು