ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೧೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೮೦ / ಕುಕ್ಕಿಲ ಸಂಪುಟ

ಪಾರ್ತಿಸುಬ್ಬನ ರಾಮಾಯಣ ರಚನೆಯ ಕುರಿತು
ಗಮನಿಸತಕ್ಕ ಇನ್ನೂ ಎರಡು ಮಾತು

ಕುಶಲವರ ಕಾಳಗದ ಆರಂಭಕ್ಕೆ ಪೂರ್ವಕಾಂಡ ರಾಮಾಯಣ ಕಥೆಯನ್ನು ಸಂಕ್ಷೇಪ ವಾಗಿ ಸೂಚಿಸುವ ಪೀಠಿಕಾ ಪದ್ಯದಲ್ಲಿ 'ಹತ್ತು ಶಿರದನ ಪಡೆಯ ಸಹಿತಲೆ ಕತ್ತರಿಸಿದನು ಕುಂಭಕರ್ಣನ ಮತ್ತೆ ಜಾನಕಿ ಸಹಿತ ಪುರವಾಳುತ್ತಲಿರ್ದ' ಎಂದಷ್ಟೆ ಹೇಳಿರುವುದರಿಂದ ಪಾರ್ತಿಸುಬ್ಬನು ರಾವಣ ವಧೆಯನ್ನು ರಚಿಸಲಿಲ್ಲವೆಂದಿರುವ ಹೇಳಿಕೆಯೂ ಸರಿಯಾದು ದೆಂದು ಅನುಮಾನಿಸಬಹುದಾಗಿದೆ. ಕಥಕಳಿ ರಾಮಾಯಣದಲ್ಲಿಯೂ ರಾವಣ ವಧೆಯ ಕುರಿತು ಪದ್ಯಗಳಿಲ್ಲದಿರುವುದು ಈ ಅನುಮಾನವನ್ನು ದೃಢಪಡಿಸುತ್ತದೆ.

ಪಾರ್ತಿಸುಬ್ಬನ ರಾಮಾಯಣ ಪ್ರಸಂಗಗಳ ಕೇವಲ ಕರ್ತೃತ್ವ ನಿರ್ಣಯದ ದೃಷ್ಟಿ ಯಿಂದ ಮುಖ್ಯ ಕಥಾವಸ್ತು ನಿರೂಪಣೆಯಲ್ಲಿಯೂ ಪದ್ಯ ರಚನೆಯಲ್ಲಿಯೂ ಕಥಕಳಿ ರಾಮಾಯಣವನ್ನು ಯಥಾಕೃತಿಯಾಗಿ ಅನುಕರಿಸಿದ ಉದಾಹರಣೆಯನ್ನು ಮಾತ್ರ ನಾನೀಗ ಹೇಳಿರುವುದರಿಂದ ಆತನು ಸ್ವತಂತ್ರ ಪ್ರತಿಭಾಶೂನ್ಯನೆಂದಾಗಲಿ, ಕೇವಲ ಅನುಕರಣಶೀಲ ನೆಂದಾಗಲಿ, ಇತರ ರಾಮಾಯಣ ಗ್ರಂಥಗಳ ಪರಿಚಯವಿಲ್ಲದವನೆಂದಾಗಲಿ ಯಾರೂ ದಯವಿಟ್ಟು ಅನ್ಯಥಾ ಭಾವಿಸಬಾರದು. ಕಥಕಳಿಯಲ್ಲಿಲ್ಲದಿರುವ ಕೆಲವು ಕಥಾಸಂದರ್ಭ ಗಳನ್ನೂ ಸುಬ್ಬನು ಅಳವಡಿಸಿಕೊಂಡದ್ದಿದೆ. ವಾಲ್ಮೀಕಿ ಅಥವಾ ತೊರವೆ ರಾಮಾಯಣ ವನ್ನು ಅನುಸರಿಸಿದ ಭಾಗವೂ ಇಲ್ಲವೆಂದಿಲ್ಲ. ಸೇತುಬಂಧನ ಮತ್ತು ಅಂಗದ ಸಂಧಾನವು ಕಥಕಳಿಯಲ್ಲಿ ನಾಲ್ವೇ ಪದ್ಯಗಳಲ್ಲಿ ಅತ್ಯಂತ ಸಂಕ್ಷಿಪ್ತವಾಗಿರುವುದನ್ನು ವಾಚಿಕಾಭಿನಯ ಪ್ರಧಾನವಾದ ನಮ್ಮ ಯಕ್ಷಗಾನಕ್ಕೆ ಉಚಿತವಾಗುವಂತೆ ಸುಬ್ಬನು ಸ್ವತಂತ್ರವಾಗಿ ವಿಸ್ತರಿ ಸಿದ್ದಾನೆ. ಅಲ್ಲಿಯ ಕೆಲವು ವರ್ಣನಾ ಭಾಗಗಳು ತೊರವೆ ರಾಮಾಯಣದಿಂದ ಪ್ರಭಾವಿತ ವಾದಂತೆಯೂ ಇವೆ. ಪಂಚವಟಿಯಲ್ಲಿ ಮಾಯಾ ಶೂರ್ಪನಖಿಯ ಪ್ರಕರಣ, ರಾವಣ ಮಂಡೋದರಿಯರ ಸಂವಾದ, ಉಂಗುರಸಂಧಿಯ ರಸವತ್ತಾದ ಸಂಭಾಷಣೆಗಳು ಇತ್ಯಾದಿ ಸಂದರ್ಭಗಳ ಅನೇಕ ಪದ್ಯಗಳು ಪಾರ್ತಿಸುಬ್ಬನ ಸ್ವತಂತ್ರ ಪ್ರತಿಭೆಗೆ ಸಾಕ್ಷ್ಯಗಳಾಗಿವೆ. ಪಂಚವಟಿಯ ಮಾಯಾಮೃಗ ಪ್ರಕರಣದಲ್ಲಿ ಸೀತೆಯ 'ಕಠಿಣತರವಾಕ್ಯ'ದಿಂದಲಾಗಿ ರಾಮನನ್ನರಸಲು ಹೊರಟ ಲಕ್ಷ್ಮಣನು 'ಭೂಮಿಯೊಳಗೇಳಾಜ್ಞೆಯಂ ಬರೆದಿದರ ಮೀರಿ ಅಡಿಯಿಡದಿರು' ಎಂದು ಹೇಳಿದುದಾಗಿ ಸುಬ್ಬನು ವರ್ಣಿಸಿರುವ ಸಂದರ್ಭವು ಕಥಕಳಿ ಯಲ್ಲಿರುವಂಥದಲ್ಲ. ವಾಲ್ಮೀಕಿ ಅಥವಾ ಕನ್ನಡ ರಾಮಾಯಣಗಳಲ್ಲಿಯೂ ಈ ಪ್ರಸ್ತಾವವಿಲ್ಲ; 'ಮಹಾನಾಟಕ'ವೆಂದು ಖ್ಯಾತಿಯುಳ್ಳ ಆಂಜನೇಯ ಕೃತವಾದ 'ಹನೂ ಮನ್ನಾಟಕ'ದಲ್ಲಿ ಉಲ್ಲಿಖಿತವಾಗಿರುವ ಈ ಅಂಶವನ್ನು ಪಾರ್ತಿಸುಬ್ಬನು ಸಂಗ್ರಹಿಸಿ ಕೊಂಡಿದ್ದಾನೆ. ಕಪಟ ಸನ್ಯಾಸಿಗೆ ಭಿಕ್ಷೆಯನ್ನು ನೀಡುವಾಗ ಸೀತೆಯು ಲಕ್ಷ್ಮಣನ ಗೆರೆಯನ್ನು ಮೀರಿದಂತೆ ಸಹ ವರ್ಣಿಸಿರುವ 'ಮಹಾನಾಟಕ'ದ ಆ ಶ್ಲೋಕಗಳು ಹೀಗಿವೆ :

ರಾಮಂ ಕಾಮಾಭಿರಾಮಂ ನಿಶಿತಶರಧನುರ್ಧಾರಿಣಂ ಲಕ್ಷ್ಮಣೇನ |
ಕ್ಷಿಪ್ರಂತದ್ರಕ್ಷಣಾಯೋಲ್ಲಿ ಖಿತ ತಟಭುವಾ ಸೋಪ್ಯಗಾತ್ರದ್ವಧಾಯ |
---------
ಸವ್ಯಾಹರದರ್ಮಿಣಿ ದೇಹಿ ಭಿಕ್ಷಾಮಲಂಘಯಲಕ್ಷ್ಮಣ ಲಕ್ಷ್ಮಲೇಖಾಂ ǁ
ಹೀಗೆ ಪಾರ್ತಿಸುಬ್ಬನು ಕಥಾಸಂದರ್ಭದಲ್ಲಿ ಮತ್ತು ವರ್ಣನಾ ಸಂದರ್ಭದಲ್ಲಿ ತನಗೆ ಉಚಿತವೆಂದು ಕಂಡ ಸಾರವತ್ತಾದ ಅಂಶಗಳನ್ನು ಅಲ್ಲಲ್ಲಿಂದ ಆಯ್ದುಕೊಂಡು 'ಏಕಸ್ಥ ಸೌಂದರ್ಯದಿದೃಕ್ಷಯೇವ' ಎಂಬಂತೆ ತನ್ನ ರಾಮಾಯಣ ಕೃತಿ ಎಂಬ ತಿಲೋತ್ತಮೆ ಯನ್ನು ನಿರ್ಮಿಸಿದ್ದಾನೆ ಎಂದೇ ತಿಳಿಯಬೇಕು.