ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪ / ಕುಕ್ಕಿಲ ಸಂಪುಟ

ಪರಮೇಶ್ವರನ ಮೊದಲ್ಗೊಂಡು ವಿಷ್ಣು, ಇಂದ್ರ, ಸ್ಕಂದ, ಸೂರ್ಯ, ಚಂದ್ರ, ಅಶ್ವಿನಿ ದೇವತೆಗಳು, ಸರಸ್ವತಿ, ಲಕ್ಷ್ಮಿ, ನಾಟ್ಯಕುಮಾರಿಯರು, ನಾಗರಾಜ, ಗರುಡ, ವಿಘ್ನ ವಿನಾಯಕ, ಕುಮಾರಿ (ಭೈರವಿ) ಇವರುಗಳನ್ನೆಲ್ಲಾ ಯಥಾಸ್ಥಾನಗಳಲ್ಲಿ ಆವಾಹಿಸಿ, ಮಂತ್ರಪೂರ್ವಕ ಆಮಂತ್ರಿಸಿ ಗಂಧ, ಪುಷ್ಪ, ದೀಪ, ಧೂಪಾದಿಗಳಿಂದ ವಿಧ್ಯುಕ್ತವಾಗಿ ಪೂಜಿಸಿ, ನಾಟ್ಯಾಚಾರ್ಯನು ಕೈಮುಗಿದು ಪ್ರಾರ್ಥನೆ ಮಾಡಿಕೊಳ್ಳಬೇಕೆಂಬ ಲಕ್ಷಣಶ್ಲೋಕ ಗಳು ಹೀಗಿವೆ :

ಯಥಾಸ್ಥಾನಸ್ಥಿತಾನ್ ದೇವಾನ್ ನಿಮಂತ್ರ್ಯ ತದ್ವಚೋ ವದೇತ್ ।
ಭವದ್ದಿರ್ನೋ ನಿಶಾಯಾಂ ತು ಕರ್ತವ್ಯ: ಸಂಪರಿಗ್ರಹಃ ।
ಸಾಹಾಯ್ಯಂ ಚ ಪ್ರದಾತ ಮಸ್ಮಿನ್ ನಾಟ್ಯ ಸಹಾನುಗೈ: ।

ಅರ್ಥ : ನೀವೆಲ್ಲರೂ ಈ ರಾತ್ರಿ, ಸಪರಿವಾರವಾಗಿ ನಾಟ್ಯರಂಗದಲ್ಲಿ ಬಂದು ಉಪಸ್ಥಿತ ರಾಗಿ ವಿಘ್ನಗಳನ್ನು ನಿವಾರಿಸುವುದಲ್ಲದೆ ನಾವಾಡುವ ಈ ನಾಟ್ಯಪ್ರಯೋಗವನ್ನು ಯಶಸ್ವಿ ಯಾಗಿ ನಿರ್ವಹಿಸಲು ನಮಗೆ ಸಹಾಯ ಮಾಡಬೇಕೆಂದು ಬೇಡಿಕೊಳ್ಳುವುದು. ಅಷ್ಟಲ್ಲದೆ ಮಹೇಂದ್ರನ ಪ್ರಹರಣವಾದ ಜರ್ಜರ (ವಜ್ರಾಯುಧ)ದ ಪ್ರತೀಕವನ್ನೂ ಸ್ಥಾಪಿಸಿ, ಅರ್ಚಿಸಿ, ಕೈಮುಗಿದು ನಮ್ಮ ರಾಜನಿಗೆ ಜಯ ಪ್ರಾಪ್ತಿ ಆಗಲಿ, ಶತ್ರುಗಳಿಗೆ ಪರಾಜಯ ವಾಗಲಿ, ಗೋಬ್ರಾಹ್ಮಣರಿಗೆ ಹಿತವಾಗಲಿ, ನಾಟ್ಯ ಪ್ರಯೋಗವು ಪ್ರವರ್ಧಮಾನವಾಗಲಿ ಎಂದು ಬೇಡಿಕೊಂಡು ಆಮೇಲೆ ಹಿಂದೆ ಹೇಳಿದ ಆಶ್ರಾವಣಾದಿ ವಿಧಿಗಳನ್ನು ಕ್ರಮವಾಗಿ ಮಾಡತಕ್ಕದ್ದು. ಈ ದೇವಪೂಜಾ ವಿಧಿಯನ್ನು, ಹೊತ್ತು ಮುಳುಗುವ ಮುಸ್ಸಂಜೆ ಯಲ್ಲಿಯೇ ಪ್ರಾರಂಭಿಸಬೇಕೆನ್ನುತ್ತಾನೆ.

ರಂಗಸ್ಕೋದ್ಯೋತನಂ ಕಾರ್ಯಂ ದೈವತಾನಾಂ ಚ ಪೂಜನಂ ।
ದಿನಾಂತೇ ದಾರುಣೇ ಘೋರೇ ಮುಹೂರ್ತೇ ಭೂತದೈವತೇ ।
ಆಚಮ್ಯ ಚ ಯಥಾನ್ಯಾಯಂ ದೈವತಾನಿ ನಿವೇಶಯೇತ್ ।
ರಕ್ತಾಃ ಪ್ರತಿಸರಾತ್ರ ರಕ್ತಗಂಧಾಶ್ಚ ಪೂಜಿತಾಃ ।
ರಕ್ತಾಃ ಕುಸುಮಮಾಲಾಶ್ಚ ಯಚ್ಚ ರಕ್ಕಂ ಫಲಂ ಭವೇತ್ ।

ದುರ್ದೇವತೆಗಳಿಗೆ ನಿರ್ದಿಷ್ಟವಾದ ಘೋರ ಮುಹೂರ್ತದಲ್ಲಿ, ಪೂಜಾಸ್ಥಳವನ್ನು ದೊಂದಿ ಹಚ್ಚಿ ಬೆಳಗಿಸಿ, ಕೆಂಪು ಬಣ್ಣದ ಹೂಮಾಲೆ, ರಕ್ತಚಂದನ, ಕೆಂಪು ಹೂಗಳು, ಅರಳು, ಸಾಸಿವೆ, ಅನ್ನ ಇವುಗಳನ್ನು ಕುರುದಿ, ಕುಂಕುಮಕೇಸರಿ ಮುಂತಾದವುಗಳಿಂದ ಕೆಂಪಾಗಿ ಮಾಡಿ ನೈವೇದ್ಯಕ್ಕೆ ಇಡಬೇಕು ಎಂಬ ತಾತ್ಪರ್ಯ. ಅಷ್ಟಲ್ಲದೆ :

ಪಾಪಕ್ಕೇನ ಮಾಂಸೇನ ಸುರಾ ಸೀಧುಫಲಾಸ: ।
ಅರ್ಚಯೇತ್‌ ಭೂತಸಂಘಾಂಶ್ಚ ಚಣಕ್ಕೆಶ್ಚ ಪಲಾಪುತೈ: ।

ಎಂದರೆ ಹಸಿ ಮಾಂಸ, ಬೇಯಿಸಿದ ಮಾಂಸ, ಸುರೆ, ಸೀಧು ಎಂದರೆ ಹಸಿ ಕಳ್ಳು ಅಥವಾ ಹುಳಿಹೆಂಡ ಮತ್ತು ಕಡಲೆಕಾಳುಗಳಿಂದ ಮಾಡಿದ ಚಿಕ್ಕಣ ಇತ್ಯಾದಿ ಭೂತಗಣಗಳಿಗೆ ನೈವೇದ್ಯ ಸಮರ್ಪಿಸಬೇಕು ಎಂದರ್ಥ.

ದುರ್ದೇವತೆಗಳಿಗೆ ಈ ರೀತಿ ಅಸುರಕ್ರಿಯೆಯಿಂದ ಬಲಿಪೂಜಾದಿಗಳನ್ನು ಮಾಡಿಬ್ರಹ್ಮಾ, ವಿಷ್ಣು, ಗಣಾಧಿಪ, ಇಂದ್ರಾದಿ ದೇವತೆಗಳನ್ನು ಬಿಳಿ ಹೂಮಾಲೆಗಳಿಂದ ಅರ್ಚಿಸಿ ಮಧುಪರ್ಕ, ಧೃತಾನ್ನ, ಪಾಯಸ, ಅಪ್ಪಕಜ್ಜಾಯ, ಹಾಲು, ಬೆಲ್ಲ ಮುಂತಾದ ಭಕ್ಷಭೋಜ್ಯಗಳಿಂದ ತೃಪ್ತಿಪಡಿಸಬೇಕೆನ್ನುತ್ತಾನೆ.