ರಾಜಾ' ಎಂದು ಅಶೋಕನ ಶಾಸನದಲ್ಲಿ ಕರೆಯಲಾಗಿದೆ ಎಂಬುದರಿಂದ ಕಾವ್ಯಪುರಾಣಾದಿ ಗಳಲ್ಲಿರುವ 'ಯವನ' ಶಬ್ದಕ್ಕೆ ಆ ಜನಾಂಗವೆಂದೇ ಅರ್ಥ ಎಂದೆಣಿಸಿರುವುದು ಸರಿಯೆ ? ನಮ್ಮ ಗ್ರಂಥಗಳು ಅದನ್ನು ಸಮರ್ಥಿಸುತ್ತವೆಯೇ?~ ಎಂಬುದನ್ನು ಈ ಚಿಕ್ಕ ಲೇಖನ ದಲ್ಲಿ ಸ್ವಲ್ಪಮಟ್ಟಿಗೆ ವಿಚಾರಿಸಲಾಗುವುದು.
ನಮ್ಮ ಪುರಾಣಗಳಲ್ಲಿ ವರ್ಣಿಸಿರುವ ಪ್ರಕಾರ ಉತ್ತರಕ್ಕೆ ಹಿಮವತ್ಪರ್ವತವೂ,
ದಕ್ಷಿಣಕ್ಕೆ ಸಮುದ್ರವೂ ಮೇರೆಯಾಗಿರುವ ಈ ಭಾರತ ದ್ವೀಪವು ಮಧ್ಯಭಾಗದಲ್ಲಿ
ಬ್ರಾಹ್ಮಣಾದಿ ಚತುರ್ವರ್ಣಾದ ಪ್ರಜೆಗಳನ್ನೂ, ಸುತ್ತಲಿನ ಪ್ರಾಂತಪ್ರದೇಶಗಳಲ್ಲಿ ಮ್ಲೇಚ್ಛರನ್ನೂ ಹೊಂದಿರುವುದೆಂಬುದಾಗಿಯೂ, ಆ ಮ್ಲೇಚ್ಛರಲ್ಲಿ ಪೂರ್ವಪ್ರಾಂತದವರಿಗೆ
ಕಿರಾತರೆಂಬ, ಹಾಗೂ ಪಶ್ಚಿಮದವರಿಗೆ ಯವನರೆಂಬ ಹೆಸರಿರುವುದೆಂದೂ ತಿಳಿಯುವುದು.
'ವಾಯುಪುರಾಣ'ದಲ್ಲಿ ಅದು ಹೀಗಿದೆ :
ದ್ವೀಪೋಪ್ಯಪನಿವಿಷ್ಟೋಯಂ ಮೇಚ್ಛರಂತೇಷು ನಿತ್ಯಶಃ
ಪೂರ್ವೇ ಕಿರಾತಾಹ್ಯಸ್ಯಾಂತೇ ಪಶ್ಚಿಮೇ ಯವನಾಃ ಸ್ಮೃತಾಃ
ಬ್ರಾಹ್ಮಣಾ ಕ್ಷತ್ರಿಯಾ ವೈಶ್ಯಾ ಮಧ್ಯೆ ಶೂದ್ರಾಶ್ಚ ಭಾಗಶಃ
ತೇಷಾಂ ಸಂವ್ಯವಹಾರೋಯಂ ವರ್ತತೇ ತು ಪರಸ್ಪರಂ
ಹೀಗೆ ಯವನರ ದೇಶವು ಭಾರತಕ್ಕೆ ತಾಗಿಕೊಂಡೇ ಇರುವುದಾಗಿದ್ದು ಅವರಿಗೂ,
ನಮಗೂ ಪರಸ್ಪರ ವ್ಯವಹಾರವು ಪುರಾತನ ಕಾಲದಿಂದ ನಡೆಯುತ್ತಿತ್ತೆಂದು ಇದರಿಂದ
ಸ್ಪಷ್ಟವಾಗುವುದು. ಪುರಾಣಗಳಿಗೆ 'ಪುರಾಣ' (ಹಳೆಯ ಕಾಲದ್ದು) ಎಂಬ ಸಂಜ್ಞೆಯನ್ನು
ಅವುಗಳನ್ನು ರಚಿಸಿದವರೇ ಕೊಟ್ಟದ್ದಾಗಿದೆ ಎಂಬುದನ್ನೂ ನಾವಿಲ್ಲಿ ಗಮನಿಸಿಕೊಳ್ಳಬೇಕು.
ಆ ಪುರಾಣಗಳಲ್ಲಿ ಈ ಪ್ರಕಾರ ವರ್ಣಿಸಿರುವ ದೇಶವೆಂದರೆ ಅದು ಪರ್ಶಿಯವೇ ಇದ್ದಿರ
ಬೇಕು ಹೊರತು ಬಹುದೂರದ ಗ್ರೀಸ್ ದೇಶವೆಂಬುದು ಸುತರಾಂ ದುರೂಹ್ಯವೆಂದೇ
ಹೇಳಬೇಕು. ನಮಗೆ ಪಶ್ಚಿಮದ ಸೀಮೆಯಲ್ಲಿರುವ ದೇಶಗಳೆಂದರೆ ಪರ್ಶಿಯ
ಅರೇಬಿಯಾಗಳೇ ಆಗಿರುವುವೆಂಬುದು ಎಲ್ಲರಿಗೂ ತಿಳಿದಿರುವ ವಿಚಾರವೇ ಸರಿ.
ಕಾಳಿದಾಸನೇ ಇದನ್ನು ಸ್ಪಷ್ಟವಾಗಿ ಹೇಳಿರುತ್ತಾನೆ. ರಘುವಂಶಕಾವ್ಯದ ನಾಲ್ಕನೇ ಸರ್ಗ
ದಲ್ಲಿ, ರಘುವಿನ ದಿಗ್ವಿಜಯವನ್ನು ವರ್ಣಿಸುತ್ತಾ, ಆತನು ಕೊಂಕಣವನ್ನು (ಅಪರಾಂತಕ)
ದಾಟಿ ಪಶ್ಚಿಮದ ಪಾರಸೀಕ ರಾಜರನ್ನು ಜೈಸಿದ ವರ್ಣನೆಯಲ್ಲಿ, ಪರ್ಶಿಯದ
ಸ್ತ್ರೀಯರನ್ನು 'ಯವನಿ'ಯರೆಂದು ಕಾಳಿದಾಸನು ಕರೆದಿದ್ದಾನೆ. ಆ ಶ್ಲೋಕಗಳು ಹೀಗಿವೆ :
ಪಾರಸೀಕಾಂಸ್ತತೋ ಜೇತುಂ ಪತಸ್ಸೇ ಸ್ಥಲವರ್ತ್ಮನಾ
ಯವನೀಮುಖಪದ್ಮಾನಾಂ ಸೇಹೇ ಮಧುಮದಂ ನ ಸಃ
ಸಂಗ್ರಾಮಸ್ತುಮುಲಸ್ತಸ್ಯ ಪಾಶ್ಚಾತ್ಯರಶ್ವಸಾಧನೈ:
ಭಲ್ಲಾಪವರ್ಜಿತೈಸ್ತೇಷಾಂ ಶಿರೋಧಿ: ಶ್ಮತ್ರುಲೈರ್ಮ ಹೀಂ
ತಸ್ತಾರ ಸರಪೂವ್ಯಾಪೈ: ಸದ್ರಪಟಲೈರಿವ
ಅಪನೀತಶಿರಸ್ತ್ರಾಣಾ ಶೇಷಾಂ ಶರಣಂ ಯಯು
ವಿನಯಂತೇ ಸ್ಮ ತದ್‌ಯೋಧಾ ಮಧುಭಿ ವಿಜಯಶ್ರಿಯಂ
ಅಸ್ತೀರ್ಣಾಜಿನರತ್ನಾಸು ದ್ರಾಕ್ಷಾವಲಯಭೂಮಿಷು
ಮೇಲಿನ ಶ್ಲೋಕಗಳಲ್ಲಿ ಪಾರಸೀಕರನ್ನು 'ಪಾಶ್ಚಾತ್ಯ'ರೆಂದೂ, 'ಅಶ್ವಸಾಧನ'ರೆಂದೂ ಆ ದೇಶವು 'ದ್ರಾಕ್ಷಾವಲಯಭೂಮಿ'ಯೆಂದೂ, ಅಲ್ಲಿಯ ಸ್ತ್ರೀಯರನ್ನು ಯವನಿಯರೆಂದೂ ವಿಶ್ಲೇಷಿಸಿರುವುದನ್ನು ಗಮನಿಸಬೇಕು.