ಕರ್ಣಾಟಕ ಸಂಗೀತದ ಪರಂಪರ
ಭಾರತೀಯ ಸಂಗೀತದಲ್ಲಿ ಉತ್ತರ-ದಕ್ಷಿಣ ಸಂಪ್ರದಾಯ ಭೇದಗಳು ಎಂದಿನಿಂದ ಮತ್ತು ಯಾವ ಕಾರಣದಿಂದ ಉಂಟಾದುವು? ಇವೆರಡರೊಳಗೆ ಯಾವುದು ಶುದ್ಧ ಹಾಗೂ ಶಾಸ್ತ್ರೀಯ? ಯಾವುದು ಅಶಾಸ್ತ್ರೀಯ? ಅಥವಾ ನಮ್ಮಲ್ಲಿ ವಿರುದ್ಧ ಶಾಸ್ತ್ರೀಯ ಪರಂಪರೆಯೆಂಬುದು ಯಾವುದೊಂದರೊಳಗಾದರೂ ಉಳಿದಿದೆಯೇ ಇಲ್ಲವೇ? ದಕ್ಷಿಣದ ಸಂಪ್ರದಾಯಕ್ಕೆ ಕರ್ಣಾಟಕ ಸಂಗೀತವೆಂದು ಹೆಸರಾಗಲು ಕಾರಣವೇನು? ಎಂಬೀ ಪ್ರಶ್ನೆಗಳು ಯಾರಿಗಾದರೂ ಸಹಜವಾಗಿಯೇ ಹುಟ್ಟಬಹುದು. ಈಗ ಸಾಮಾನ್ಯವಾಗಿ ಊಹಿಸಲಾಗುತ್ತಿರುವ ಕಾರಣವೆಂದರೆ- 'ಕಳೆದ ಕ್ರಿ. ಶ. ೧೧ನೇ ಶತಕದಾರಭ್ಯ ಉತ್ತರ ಭಾರತಕ್ಕೆ ಮುಸಲ್ಮಾನರ ಅಭಿಯೋಗದೊಂದಿಗೆ ಫಾರಸೀ ಸಂಗೀತವೂ ಬಂತು. ಅದರ ಪ್ರಭಾವದಿಂದ ಅಲ್ಲಿ ನಮ್ಮ ಸಂಗೀತವೂ ರೂಪಾಂತರ ಹೊಂದಿತು. ಕ್ರಮಶಃ ದಕ್ಷಿಣಕ್ಕೂ ಅದು ದಾಳಿಯಿಟ್ಟಿತು. ಆದರೆ ಪುರಂದರದಾಸರೇ ಮೊದಲಾದ ಹರಿದಾಸ ಕೂಟದ ವಾಗ್ಗೇಯಕಾರರು ಬಹಳ ಸಾಹಸದಿಂದ ಹೋರಾಡಿ, ಅದರ ಪ್ರವಾಹವನ್ನು ಹಿಮ್ಮೆಟ್ಟಿಸಿ ದರು, ಶಾಸ್ತ್ರೀಯ ಸಂಪ್ರದಾಯ ಊರ್ಜಿತವಾಗಿ ಉಳಿಯುವ ಸುಭದ್ರವಾದ ವ್ಯವಸ್ಥೆ ಯನ್ನು ಮಾಡಿದರು. ಅದು ಕಾರಣ ನಮ್ಮ ಸಂಗೀತ ಶುದ್ಧವಾಗಿ ಉಳಿಯಿತು. ಹಾಗೂ ಕರ್ಣಾಟಕ ಸಂಗೀತವೆಂಬ ಪ್ರಶಸ್ತಿಯನ್ನು ಸಾರ್ಥಕವಾಗಿಯೇ ಪಡೆಯಿತು.'
ಪರಿಸರದ ಮೇಲಿಂದ ಈ ಊಹೆ ಸಂಭಾವ್ಯವಾಗಿ ಕಾಣುವುದು. ಆದರೆ, ವಸ್ತುಸ್ಥಿತಿ ಹೀಗಿತ್ತೇ? ಚರಿತ್ರೆಯಲ್ಲಿ ಇದಕ್ಕೆ ಸಮರ್ಥನೆ ಇದೆಯೇ ಎಂದು ಪರಿಶೀಲಿಸಿದರೆ, ಈ ಮಾತು ಸಕಾರಣವಾಗಿ ಕಾಣುವುದಿಲ್ಲವೆಂದಷ್ಟೇ ಅಲ್ಲ, ವಸ್ತುಸ್ಥಿತಿಗೆ ವಿರುದ್ಧವಾಗಿದೆ ಯೆಂದೇ ಹೇಳಬೇಕು. ಏಕೆಂದರೆ, ಮೂಲತಃ ಮುಸಲ್ಮಾನ ಧರ್ಮದಲ್ಲಿ ಸಂಗೀತಕ್ಕೆ ಸ್ಥಾನವೇ ಇದ್ದಿಲ್ಲ. ಅದು ನಿಷಿದ್ಧ ವಸ್ತು. ಮುಸಲ್ಮಾನರ ಅಂದಿನ ರಾಜ್ಯವಿಸ್ತಾರವೆಂದರೆ ಅದು ಅವರ ಧರ್ಮದ ವಿಸ್ತಾರವೇ ಆಗಿತ್ತೆಂಬುದನ್ನು ಬೇರೆ ಹೇಳಬೇಕಾಗಿಲ್ಲ. ಕ್ರಿ. ಶ. ೭-೮ನೆಯ ಶತಮಾನಗಳಲ್ಲಿ ಪರ್ಷಿಯವು ಸಂಪೂರ್ಣ ಮುಸಲ್ಮಾನವಾಯಿತು. ಅಂದೇ ಅಲ್ಲಿಯ ಸಂಗೀತದ ಸಮಾಧಿಯೂ ಆಗಿತ್ತೆಂದರೆ ಅದೇನೂ ಅತಿಶಯೋಕ್ತಿಯ ಮಾತಲ್ಲ. ಪರ್ಷಿಯಾ ದೇಶದ ಚರಿತ್ರೆಯಲ್ಲಿ ಇದರ ಸ್ಪಷ್ಟ ಉಲ್ಲೇಖ ಇದೆ.
ಭಾರತದೊಳಕ್ಕೆ ಬಂದ ಮೇಲೆಯೇ ಅಫಘಾನದ ಸುಲ್ತಾನರಿಗೆ ಸಂಗೀತದ ಮೇಲೆ ಸ್ವಲ್ಪ ಕರುಣೆಯುಂಟಾದುದು. ಅದನ್ನು ಒಲಿಸದೆ ಕಾರ್ಯಸಾಧನೆ ಕಷ್ಟವಾದ್ರೂ ಇದಕ್ಕೆ ಕಾರಣ. ನಮ್ಮ ಸಂಗೀತವೂ ಅವರ ಕಿವಿ ಸೆಳೆಯಿತು. ಹಾಗೂ-ಹೀಗೂ ಅದರ ಗತಿ ಒಳ್ಳೆಯದಾಯಿತು, ಪರಿಣಾಮವಾಗಿ ಅವರ ಸಂಗೀತನಿಷೇಧವು ಧಾರ್ಮಿಕ ಸಂದರ್ಭಕ್ಕೆ ಮಾತ್ರ ಸೀಮಿತವಾಗಿ ಉಳಿಯಿತು. ಆ ಮುಂದೆ ದಿಲ್ಲಿಯ ಬಾದಶಹರಿಗೆ ಸಂಗೀತದ ಮರುಳಾದದ್ದೂ ನಿಜ. ಮುಸಲ್ಮಾನರೂ ಕಲೆಯಲ್ಲಿ ಕಲೆತರು, ಕಲಿತರು, ಬೆಳೆಸಿದರು. ಫಲವಾಗಿ, ನಮ್ಮ ಸಂಗೀತವೇ ಪರ್ಷಿಯಾದಲ್ಲಿ ಮತ್ತೆ ಬೆಳೆಯಿತು. ನಮ್ಮ ಇದೇ ಸ್ವರಪದ್ಧತಿ ಅಲ್ಲಿಗೆ, ಅಲ್ಲಿಂದ ಮುಂದೆ ಎಲ್ಲೆಲ್ಲಿಗೂ ಹಬ್ಬಿತು, ಹರಡಿತು. ಯಥಾರ್ಥ ನಡೆದಿರುವುದು ಹೀಗೆ. ಇದು ಚರಿತ್ರೆಯಿಂದ ಸಮರ್ಥನೀಯವೆನ್ನುವಾಗ ನಮ್ಮ ಊಹೆ ಸರಿಯೇ?