ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೩೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೫೪ / ಕುಕ್ಕಿಲ ಸಂಪುಟ
ಹೇಳಿದರು. ಮತ್ತೆ ಅದನ್ನೇ ತುಂಡು ತುಂಡಾಗಿ ಹೇಳಿಕೊಡುತ್ತಾ ಮುಂದಿನ ದಾರಿ ಸಾಗಿತು.
ಹೋದ ಮರುದಿನವೇ ಶಾಲೆಯ 'ದೊಡ್ಡ ಮಾಸ್ತರು' ಮಾವನಲ್ಲಿಗೆ ಬಂದಿದ್ದರು. ಅವರೊಂದಿಗೇ ನನ್ನನ್ನು ಶಾಲೆಗೆ ಕಳುಹಿಸಿದ್ದೂ ಆಯಿತು. ಸಂಸ್ಕೃತ ಪಾಠಶಾಲೆ ಬಡೆಕ್ಕಿಲ ಮನೆಯಲ್ಲಿಯೇ ನಡೆಯುತ್ತಿತ್ತು. ಮುಂದಿನ ವಿದ್ಯಾದಶಮಿಗೆ ಗುರುಗಳಾಗಿದ್ದ ಮಿತ್ತೂರು ನಾರಾಯಣಭಟ್ಟರಲ್ಲಿ ಸಂಸ್ಕೃತಪಾಠಕ್ಕೂ ಸುರು ಹಚ್ಚಿಸಿದರು. ಮುಂದೆ ಆರೇಳು ವರ್ಷ ಬಡೆಕ್ಕಿಲದಲ್ಲೇ ನನ್ನ ಆಟ-ಪಾಠ.
'ಗ್ರಂಥ ಓದಿಸದೆ ಇರಬೇಡ' ಎಂದು ನನ್ನ ಅಜ್ಜ ಹೇಳಿದ ಮಾತು. ದೊಡ್ಡ ಮಾವ ನನಗೆ ಓದಿಸಿದ ಗ್ರಂಥ ಭಾರತ ಭಾಗವತ ಅಲ್ಲ. 'ಜಗನ್ನಾಥ ವಿಜಯ' ರನ್ನನ 'ಗದಾಯುದ್ಧ' 'ರಾಮ ಪಟ್ಟಾಭಿಷೇಕ' 'ಚಂದ್ರಪ್ರಭ ಪುರಾಣ' 'ಸೋಮೇಶ್ವರ ಶತಕ' ಇತ್ಯಾದಿ ಒಂದೊಂದನ್ನೇ ಓದಿಸಿ ಅರ್ಥ ಹೇಳಿ ಕಲಿಸಿದರು.
ನಾನೇ ಎಂದಲ್ಲ. ಇದ್ದವರು ಬಂದವರು ದೊಡ್ಡವರು ಸಣ್ಣವರು ಯಾರೇ ಆಗಲಿ ಅವರನ್ನು ಕರೆದು ಕೂರಿಸಿಕೊಂಡು ಹಳೆಗನ್ನಡ ಕಾವ್ಯಗಳನ್ನು ಓದಿ ಅರ್ಥಹೇಳಿ ಅದರ ಸ್ವಾರಸ್ಯವನ್ನು ವರ್ಣಿಸುವುದೆಂದರೆ ಅವರಿಗೆ ಅಷ್ಟೊಂದು ಪ್ರೀತಿ, ಕಾವ್ಯಗಳಷ್ಟೇ ಅಲ್ಲ. ಯಕ್ಷಗಾನ ಪದ್ಯಗಳೂ ತಾವೇ ರಚಿಸಿದ ಕವಿತೆಗಳೂ ಈ ಪ್ರವಚನಗಳಲ್ಲಿ ಬರುತ್ತಿದ್ದವು. ರಸಿಕ ವಿದ್ವಾಂಸರಾರಾದರೂ ಬಂದಿದ್ದರೆಂದರೆ ರಾತ್ರಿ ಬೆಳಗಾಗುವ ತನಕವೂ ಈ ಕಾವ್ಯ ಗೋಷ್ಠಿ ನಡೆಯುವುದಿತ್ತು. ಈ ರಸದೂಟಕ್ಕಾಗಿಯೇ ಊರ ಒಳಗಿನ, ಹೊರಗಿನ ವಿದ್ವಾಂಸರು, ಕವಿಗಳು, ಭಾಗವತರು, ಅರ್ಥಧಾರಿಗಳು ಅದೆಷ್ಟೋ ಮಂದಿ ದಿನ ದಿನ ಬರುತ್ತಿದ್ದರು. ಆಗ ಇವರು ನನಗೊಬ್ಬನಿಗೇ ಏಕೆ? ಎಲ್ಲರಿಗೂ ದೊಡ್ಡ ಮಾವ ಎಂದೆನಿಸಿತ್ತು.
ಅಂದು ಬಡೆಕ್ಕಿಲದಲ್ಲಿ ನಾನು ಕಂಡದೆಲ್ಲ ದೊಡ್ಡದೇ, ದೊಡ್ಡ ಮನೆ, ದೊಡ್ಡ ಚಾವಡಿ, ದೊಡ್ಡ ದೊಡ್ಡ ಪುಸ್ತಕಗಳು, ದೊಡ್ಡ ಮನುಷ್ಯರ ಸವಾರಿ, ದೊಡ್ಡ ಶಾಲೆ, ದೊಡ್ಡ ಮಾಸ್ತರರು
. ಒಂದೆಡೆ ಸಂಸ್ಕೃತ ಪಾಠ, ಮತ್ತೊಂದೆಡೆ ವೇದ ಪಾಠ, ಯಕ್ಷಗಾನದವರ ಕೂಟ, 'ಪಂಚಾಯ್ತಿಗೆ'ಯವರ ಜಗಳಾಟ, ತಹಶೀಲ್ದಾರರು, ಮಣೆಗಾರರು, ಪಟೇಲರು ಶ್ಯಾನುಭಾಗರು ಮುಂತಾದ ನೌಕರರ ಕಾಟ, ಈ ಬಂವರಿಗೆಲ್ಲ ಮಾನಮಾರ್ಯಾದೆ, ಊಟ ಉಪಚಾರ ನಿರ್ವಹಿಸುವ ಊಳಿಗದವರ ಓಡಾಟ, ಅನುದಿನವೂ ಇಂತಹ ಗದ್ದಲ ಹಬ್ಬಹರಿದಿನಾದಿ ವಿಶೇಷ ಸಂದರ್ಭಗಳ ಸಂಭ್ರಮವಂತೂ ಕೇಳುವುದೇ ಬೇಡ. ಮಾವನವರೇ ನಡೆಸುವ ನವರಾತ್ರೆ ಪೂಜೆ ಎಂದರೆ ಅದು ಒಂಬತ್ತು ದಿನಗಳ ದೊಡ್ಡ ಜಾತ್ರೆ, ರಾತ್ರಿ ಊಟದ ಮೇಲೆ ಹರಿಕಥೆ, ಪುರಾಣ, ಕಾವ್ಯವಾಚನ, ಯಕ್ಷಗಾನ, ಒಂದಲ್ಲ ಒಂದು ಒಂಬತ್ತು ದಿನವೂ ನಡೆಯುವ ಸಂಪ್ರದಾಯ ಮಾಮೂಲಾಗಿತ್ತು.
ಆ ಒಂದು ನವರಾತ್ರಿಯ ದಿನ ಏರ್ಪಟ್ಟ ತಾಳಮದ್ದಳೆ, ನೆನಪಿಗೆ ಬರುವ ಮೊದಲಿನ ತಾಳಮದ್ದಲೆ ಅದು, ನನ್ನ ದೊಡ್ಡ ಮಾವನವರ ದೊಡ್ಡ ಮಾವ, ನಡ್ಲೆ ಗುರಿಕಾರ ಕೇಶವ ಭಟ್ಟರು ಭಾಗವತರು. 'ಕರ್ಣಪರ್ವ, ಗದಾಪರ್ವ' ಪ್ರಸಂಗ, ವೆಂಕಟರಮಣಭಟ್ಟರಿಗೆ ಕೌರವನ ಅರ್ಥ ಎಂದು ಸಭೆಯಲ್ಲಿ ನಿರ್ಣಯವಾಯಿತು. ಅದನ್ನು ಕೇಳಿ ನನಗೆ ಬಹಳ ಖೇದವಾಯಿತು. ಕೌರವನು ಕೆಟ್ಟವ, ದ್ರೋಹಿ, ಪಾತಕಿ, ಘಾತಕಿ ಎಂದೆಲ್ಲ ಅಜ್ಜ ಅಜ್ಜಿ