ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೩೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೬೨ | ಕುಕ್ಕಿಲ ಸಂಪುಟ
ಅವರು ಬರೆದಿರುವ “ದ್ರಾವಿಡ ಛಂದಸ್ಸು", "ಶಿಲಪ್ಪದಿಕಾರಂ'ನ ಅನುವಾದ, ಮತ್ತು ಕುಮಾರವ್ಯಾಸಭಾರತ ಸಂಪಾದಿತ ಪ್ರತಿ- ಹಸ್ತಪ್ರತಿಯಲ್ಲಿದ್ದು ಪ್ರಕಟವಾಗ ಬೇಕಿವೆ. ಕೊನೆಯ ದಿನಗಳಲ್ಲಿ ದಿನಗಳಲ್ಲಿ ಅವರು ರಾಮಾಯಣವನ್ನಾಧರಿಸಿ,ವಿನೂತನ ಕಲ್ಪನೆಗಳಿಂದ ಕೂಡಿದ ಕಾದಂಬರಿಯೊಂದನ್ನು ಬರೆಯುವ ಸನ್ನಾಹದಲ್ಲಿದ್ದರು.
ವ್ಯಕ್ತಿಶಃ ಕುಕ್ಕಿಲರು ತುಂಬ ಸ್ನೇಹಜೀವಿ. ಅವರ ಸಹವಾಸವೊಂದು ಉತ್ತಮ ಸತ್ಸಂಗದ ಅನುಭವ. ದಣಿವಿರದ ಮಾತುಗಾರರಾದ ಕುಕ್ಕಿಲರು, ಖರ್ಚುವೆಚ್ಚ, ಆತಿಥ್ಯ, ಊಟತಿಂಡಿ, ಸ್ನೇಹಗಳಲ್ಲಿ ಧಾರಾಳಿ. ಅಧ್ಯಯನಕ್ಕಾಗಿ ಅಪಾರ ವೆಚ್ಚ ಮಾಡಿದವರು. ವಿಚಾರಕ್ಕಾಗಿ ಬೆನ್ನು ಹಿಡಿದು, ತಿರುಗಾಟ ನಡೆಸಿ, ಅಭ್ಯಸಿಸಿದ ಛಲಗಾರ, ಪ್ರಚಾರ, ನೆರವುಗಳಿಗೆ, ಪ್ರಸಿದ್ಧಿಗೆ ಹಾತೊರೆಯದ ವಿಚಿತ್ರ ವಿದ್ವಾಂಸ, ಕೃಷಿಯಲ್ಲಿ ತೊಡಗಿ ದಾಗಲೂ, ಸಂಶೋಧನೆಯಷ್ಟೇ ಅದರಲ್ಲಿ ಆಸಕ್ತಿ, ದುಡಿಮೆ, ಉತ್ತಮ ವಾಗ್ಮಿ ಯಾದ ಕುಕ್ಕಿಲರು ಇದ್ದಕೂಟ, ಅದು ಖಾಸಗಿಯಾಗಿರಲಿ, ವೇದಿಕೆಯಾಗಿರಲಿ, ಜೀವಂತಿಕೆಯಿಂದ ತುಂಬಿರುತ್ತಿತ್ತು.
ಘನವಿದ್ವಾಂಸ ಮತ್ತು ಶ್ರೇಷ್ಠ ಸಂಶೋಧಕರಾದ ಕುಕ್ಕಿಲರು ಪಡೆದ ಪ್ರಸಿದ್ಧಿ ಮತ್ತು ಸಾಂಸ್ಥಿಕವಾದ ಮನ್ನಣೆ ತುಂಬ ಕಡಿಮೆ ತಮ್ಮ ನಾಡಿನ ಸಂಸ್ಥೆಗಳು ಅವರನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ.
(ಅಭಿಮಾನ, ದ. ಕ. ಜಿಲ್ಲಾ ಸಾಹಿತ್ಯ ಸಮ್ಮೇಳನ ಗ್ರಂಥ, ಪುತ್ತೂರು.)