ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೩೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೬೬ | ಕುಕ್ಕಿಲ ಸಂಪುಟ
ಪಾಡುವ ಗಾಣರ ಗೇಯಂ' (ಪಂ.ಭಾ), 'ನರ್ತಕರ ಜಾಣರ ಗಾಣರ ಗೇಯಗೋಷ್ಠಿ ಯೊಳ್' (ನಂಬಿಯಣ್ಣನ ರಗಳೆ)- ಇತ್ಯಾದಿ, 'ಏಕಲ' ಎಂಬ ಶಬ್ದವಂತೂ ಸಂಗೀತ ಸ್ವರೂಪ ನಿರೂಪಣೆಗಳಲ್ಲಿ 'Solo' ಎಂಬರ್ಥದಲ್ಲಿ ಉತ್ತರಭಾರತದಲ್ಲಿ ಇಂದೂ ಪ್ರಚಲಿತವಾಗಿಯೇ ಇರುತ್ತದೆ).
'ಚಂದ್ರಪ್ರಭ ಪುರಾಣ'ದ ಮುದ್ರಿತ ಪ್ರತಿಯಲ್ಲಿ 'ಒತ್ತುವ ಪಂಚಮ ನುಣ್ಣರಂ' ಎಂದಿರುತ್ತದೆ. ಈ ಪಾಠವನ್ನವಲಂಬಿಸಿ ಪಂಡಿತ ತಿಮ್ಮಪ್ಪಯ್ಯನವರು ಮಾಡಿದ್ದ ಮತ್ತು ಕಾರಂತರು ಅನುಮೋದಿಸಿದ್ದ ಊಹೆ 'ಪಂಚಮನುಣ್ಚರಂ' ಎಂಬುದು ಒಂದು ಸಮಾಸ ಪದವೆಂಬುದು ಗ್ರಹಿಕೆಯ ಮೇಲೆ ಹುಟ್ಟಿದುದಾಗಿತ್ತು. ಸಮಾಸಪದವೆಂದು ಇದನ್ನು ಗ್ರಹಿಸಿದರೆ ಇದೊಂದು ಅರಿಸಮಾಸವೆನಿಸಿಕೊಳ್ಳುತ್ತದೆ. ಆದುದರಿಂದ ಇದರಲ್ಲೇನೋ ಪಾಠದೋಷವಿದೆಯೆಂಬ ಶಂಕೆ ಹುಟ್ಟಿ, ಕೃಷ್ಣಭಟ್ಟರು ಆ ಗ್ರಂಥದ ಹಸ್ತಪ್ರತಿಯನ್ನು ಪರೀಕ್ಷಿಸುವುದಕ್ಕಾಗಿ ಮೈಸೂರಿಗೆ ತೆರಳಿ ಅಲ್ಲಿಯ ಪುಸ್ತಕ ಭಂಡಾರದಲ್ಲಿರುವ ಅದರ ಓಲೆಯ ಪ್ರತಿಯನ್ನು ನೋಡಿದಾಗ, ಅದು 'ಪಂಚಮನುಣ್ಚರ' ಎಂದಿರದ 'ಪಂಚದ ನುಣ್ಣರಂ' ಎಂದಿರುವುದನ್ನು ಕಂಡುಕೊಂಡರು. 'ಪಂಚ' ಎಂಬುದು 'ವಂಶ' ಎಂಬುದರ ತದ್ಭವ ರೂಪ (ಬಂಚ' ಎಂಬುದು ಇದರ ಇನ್ನೊಂದು ತದ್ಭವ ರೂಪ), ಸಂಗೀತ ಶಾಸ್ತ್ರಗ್ರಂಥಗಳಲ್ಲಿ 'ವಂಶ' ಎಂಬುದು ಕೊಳಲು ಮೊದಲಾದ ಸುಷಿರವಾದ್ಯ (ಊದುವ ವಾದ್ಯ)ಗಳಿಗೆ ಇರುವ ಹೆಸರಾಗಿದೆ. ನಮ್ಮ ದೇಶಕ್ಕೆ ಪಿಟೀಲು ವಾದ್ಯವು ಪ್ರವೇಶಿಸಿ ಜನಪ್ರಿಯವಾಗುವುದಕ್ಕೆ ಮೊದಲು ಕರ್ನಾಟಕ ಸಂಗೀತ ಗಾಯನಕ್ಕೆ ಯಾವುದಾದರೊಂದು ವಂಶ ವಾದ್ಯವು 'ಪಕ್ಕವಾದ್ಯ'ವಾಗಿರುವುದು ಅನಿವಾರ್ಯವಾಗಿತ್ತು. ಆದುದರಿಂದ 'ಪಂಚದ ನುಣ್ಚರಂ' ಎಂದರೆ 'ವಂಶವಾದ್ಯದ ಮಧುರಧ್ವನಿ' ಎಂಬುದಾಗಿಯೇ ಹೊರತು ಸಂಗೀತದ ಪಂಚಮಸ್ವರಕ್ಕೂ 'ಪಂಚದ ನುಣ್ಚರಂ' ಪದ ಎಂಬ ಪ್ರಯೋಗಕ್ಕೂ ಸಂಬಂಧ ವಿಲ್ಲವೆಂಬುದನ್ನು ತಮ್ಮ ಆ ಲೇಖನದಲ್ಲಿ ಪ್ರಕಟಿಸಿ ಚಂದ್ರಪ್ರಭ ಪುರಾಣದ ಪದ್ಯಾರ್ಥ ವನ್ನು ಪೂರ್ವೋಕ್ತ ಮಹನೀಯರಿಬ್ಬರೂ ತಪ್ಪಾಗಿ ತಿಳಿದುಕೊಂಡರೆಂಬುದನ್ನು ನಿಸ್ಸಂದಿಗ್ಧ ವಾಗಿ ಪ್ರಕಾಶಪಡಿಸಿದರು. ಕೃಷ್ಣ ಭಟ್ಟರ ವಿದ್ವತ್ತೆಯೂ, ಸಂಶೋಧನ ಶಕ್ತಿಯೂ ಅವರ ಈ ಲೇಖನದಿಂದ ಪ್ರಕಟವಾಗಿ ಕನ್ನಡ ವಿದ್ವಾಂಸರಿಗೆಲ್ಲ ಅವರ ಹೆಸರು ಪರಿಚಿತವಾಗು ವಂತಾಯಿತು. ಮತ್ತು 'ಎಕ್ಕಲಗಾಣವೆಂದರೆ ಯಕ್ಷಗಾನ'- ಎಂಬ ಭ್ರಮೆಯ ನಿರಸನವೂ ಆಯಿತು. (ಶುಭಕಾರ್ಯಗಳಲ್ಲಿ ಕೇಳಿಬರುತ್ತಿರುವ ನಾಗಸ್ವರ ವಾದ್ಯಮೇಳವನ್ನು 'ಪಂಚವಾದ್ಯ' ಎಂದು ಹೇಳುವ ರೂಢಿ ದಕ್ಷಿಣಕನ್ನಡ ಮತ್ತು ಉತ್ತರಕನ್ನಡ ಇವೆರಡು ಜಿಲ್ಲೆಗಳಲ್ಲಿಯೂ ಇಂದೂ ಸಾಮಾನ್ಯವಾಗಿ ಇದೆ. ಇಲ್ಲಿ 'ಪಂಚವಾದ್ಯ'ವೆಂಬುದಕ್ಕೆ 'ಐದುವಾದ್ಯಗಳ ಕೂಟ' ಎಂಬರ್ಥವೆಂದು ಕೆಲವರು ಭ್ರಮಿಸುವುದುಂಟು. ಆದರೆ ನನ್ನ ಬಾಲ್ಯದಲ್ಲಿ ನಾನು ಕೇಳಿದಂತೆ ಕೇವಲ ನಾಗಸ್ವರವೊಂದನ್ನೇ 'ಪಂಚವಾದ್ಯ' ಎಂದು ಹೇಳುವ ರೂಢಿ ಇತ್ತು. 'ಪಂಚವಾದ್ಯ'ವೆಂದರೆ 'ವಂಶವಾದ್ಯ' ಎಂದು ಕೃಷ್ಣ ಭಟ್ಟರು ಮಾಡಿದ ಅರ್ಥಕ್ಕೆ ಈ ರೂಢಿ ಉತ್ತಮ ಸಾಕ್ಷ್ಯವಾಗಿದೆ. ಐದು ವಾದ್ಯಗಳ ಒಂದು ವಿಶಿಷ್ಟ ಕೂಟವನ್ನು ಕೇರಳೀಯರು ಪಂಚವಾದ್ಯವೆಂದು ಕರೆಯತ್ತಾರೆ. ಆ ಪಂಚವಾದ್ಯಕ್ಕೂ ದಕ್ಷಿಣೋತ್ತರ ಕನ್ನಡ ಜಿಲ್ಲೆಗಳಲ್ಲಿ ಪ್ರಚಲಿತವಾಗಿರುವ ಪಂಚವಾದ್ಯ ಮೇಳಕ್ಕೂ ಯಾವ ಸಂಬಂಧವೂ ಇಲ್ಲ. ಆ ವಾದ್ಯಗಳೇ ಬೇರೆ, ಈ ವಾದ್ಯಗಳೇ ಬೇರೆ. ಅಷ್ಟು ಮಾತ್ರವಲ್ಲ, ಉತ್ತರ ದಕ್ಷಿಣ ಕನ್ನಡ ಜಿಲ್ಲೆಗಳ ಪಂಚವಾದ್ಯ ಮೇಳದಲ್ಲಿ ಸಾಮಾನ್ಯವಾಗಿ ಐದು ವಾದ್ಯಗಳಿರುವುದಿಲ್ಲ. ನಾಗಸ್ವರ, 'ಒತ್ತು' ಎಂಬ ಹೆಸರಿನ ಶ್ರುತಿವಾದ್ಯ ಮತ್ತು