ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೩೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೬೮ | ಕುಕ್ಕಿಲ ಸಂಪುಟ
ಬೃಹತ್ಸಂಪುಟವು ಪಾರ್ತಿಸುಬ್ಬನ ವಿಚಾರವಾಗಿ ಈವರೆಗೆ ಪ್ರಕಟವಾದ ಗ್ರಂಥಗಳಲ್ಲೆಲ್ಲ ಪ್ರಮಾಣಭೂತವೆಂದು ಅಖಿಲ ಕರ್ನಾಟಕದಲ್ಲಿ ಮಾನ್ಯವಾಗಿರುತ್ತದೆ. ಕೃಷ್ಣಭಟ್ಟರು ಸಂಪಾದಿಸಿದ ಇನ್ನೊಂದು ಗ್ರಂಥವೆಂದರೆ ನಾಗವರ್ಮನ ಛಂದೋಂಬುಧಿ. ಅನೇಕ ಪ್ರತಿಗಳ ಸಾಹಾಯ್ಯದಿಂದ ಆ ಗ್ರಂಥದ ಪಾಠಶುದ್ಧಿಯನ್ನು ಮಾಡಿ, ಛಂದಸ್ಸಿಗೆ ಸಂಬಂಧಿಸಿದ ನಾನಾ ವಿಷಯಗಳನ್ನು ಹಲವು ಗ್ರಂಥಗಳಿಂದ ಅಪಾರವಾಗಿ ಸಂಗ್ರಹಿಸಿ ಅವುಗಳನ್ನು ಅನುಬಂಧಗಳಾಗಿ ಸೇರಿಸಿ ತಮ್ಮ ವೈದುಷ್ಯವನ್ನು ತೆರೆದು ತೋರಿಸಬಲ್ಲ ಸುದೀರ್ಘವಾದ ಪೀಠಿಕೆಯೊಂದನ್ನು ಸಹ ಬರೆದು ಸೇರಿಸಿ ಪ್ರಕಾಶಪಡಿಸಿದ ಅಮೋಘ ವಾದೊಂದು ರಚನೆ ಇದಾಗಿರುತ್ತದೆ.
ಕೃಷ್ಣಭಟ್ಟರ ರಚನೆಗಳ ವಿಷಯಗಳು ಮಾತ್ರವಲ್ಲ ಅವರ ನಿರೂಪಣ ವಿಧಾನವೂ ಅವರ ಭಾಷಾ ಶೈಲಿಯೂ ಅತ್ಯಂತ ಪ್ರೌಢವಾದವುಗಳು. ಇದರಿಂದಾಗಿ ಅವುಗಳನ್ನು ತಿಳಿದೋದುವ ಕೆಲಸವು ಎಲ್ಲರಿಗೂ ಸುಲಭವಲ್ಲ, ವಿದ್ವಾಂಸರಿಗೆ ಮಾತ್ರ, ವಿಶೇಷತಃ ತಜ್ಞರಿಗೆ ಮಾತ್ರ ಅವು ರೋಚಕವಾಗಬಲ್ಲವು. ಪಾರ್ತಿಸುಬ್ಬನ ಕುರಿತಾಗಿ ಮತ್ತು ಯಕ್ಷಗಾನದ ಕುರಿತಾಗಿ ಅವರು ಬರೆದ ಹಲವು ಲೇಖನಗಳು ಬೇರೆ ಬೇರೆ ಸಂದರ್ಭ ಗಳಲ್ಲಿ ಪ್ರಕಟವಾಗಿರುತ್ತವೆ. ಅವರು ಬರೆದ ಸಂಗೀತಶಾಸ್ತ್ರ ವಿಷಯಕವಾದ ಲೇಖನ ಗಳಂತೆಯೇ ಇವು ಸಹ ಪ್ರತ್ಯೇಕವಾದೊಂದು ಪುಸ್ತಕವಾಗಿ ಪ್ರಕಟವಾಗುವುದಕ್ಕೆ ಅರ್ಹ ವಾಗಿವೆ. ಯಕ್ಷಗಾನಾಸಕ್ತರು ಈ ಕೆಲಸವನ್ನು ನೆರವೇರಿಸಿದರೆ ಕನ್ನಡಿಗರೆಲ್ಲರಿಗೆ ತುಂಬಾ ಪ್ರಯೋಜನವಾಗದಿರದು.
ಕೃಷ್ಣ ಭಟ್ಟರು ತಮ್ಮ ಅಪರ ವಯಸ್ಸಿನಲ್ಲಿಯೂ ವಿಶೇಷ ಪರಿಶ್ರಮವನ್ನು ವಹಿಸಿ ತಮಿಳು ಭಾಷೆಯ ಅಭ್ಯಾಸವನ್ನೂ ಮಾಡಿದ್ದರು. ಅಷ್ಟು ಮಾತ್ರವಲ್ಲ ತಮಿಳು ಛಂದಸ್ಸಿನ ಕುರಿತಾಗಿ ಸಣ್ಣದಲ್ಲದ ಒಂದು ನಿಬಂಧವನ್ನೂ ರಚಿಸಿದ್ದರೆಂದು ತಿಳಿದುಬರುತ್ತದೆ. ಇದೂ ಅಲ್ಲದ ಪುರಾತನ ಮಹಾಕಾವ್ಯವಾದ 'ಶಿಲಪ್ಪದಿಕಾರಮ್' ಎಂಬ ಗ್ರಂಥದ ಭಾಷಾಂತರ ವನ್ನೂ ಮಾಡತೊಡಗಿದ್ದರೆಂದು ಸಹ ಕೇಳಿದ್ದೇನೆ. ಅವು ಮುದ್ರಿತವೇನೂ ಆಗಿಲ್ಲ. ಅವರ ಆ ಬರಹಗಳ ಸ್ಥಿತಿ ಈಗ ಏನಾಗಿದೆಯೆಂಬುದೂ ನನಗರಿಯದು. ಕೃಷ್ಣಭಟ್ಟರ ಅಭಿಮಾನಿ ಗಳಾದ ತರುಣರು ಅವರ ಅಪ್ರಕಟಿತ ಬರಹಗಳನ್ನೆಲ್ಲ ಪ್ರಕಾಶಪಡಿಸುವ ಹೊಣೆಯನ್ನು ಹೊರುವರೆಂದು ಆಶಿಸಲೇ?
ಕೃಷ್ಣ ಭಟ್ಟರು ತಮ್ಮ ಜೀವನದ ಬಹು ಭಾಗವನ್ನು ಹೋರಾಟದಲ್ಲೇ ವ್ಯಯಿಸಿ ದರೂ ಅದರಲ್ಲೆಲ್ಲಾ ವಿಜಯಿಗಳೇ ಆಗಿ ತಮ್ಮ ಕೊನೆಗಾಲದ ಒಂದೆರಡು ವರ್ಷಗಳನ್ನು ಸಮಾಧಾನದಿಂದಲೂ ಶಾಂತಿಯಿಂದಲೂ ಕಳೆದು ಒಂದು ದಿನ ಮಧ್ಯಾಹ್ನದ ಭೋಜನಾ ನಂತರ ಆರಾಮಕುರ್ಚಿಯಲ್ಲಿ ತೃಪ್ತಿಯಿಂದ ಕುಳಿತಿದ್ದಾಗಲೇ ಯಾವ ಗದ್ದಲವನ್ನೂ ಮಾಡದೆ ಅವರ ಪ್ರಾಣಪಕ್ಷಿ ಗೂಡಿಂದ ಹಾರಿಹೋಯಿತು. ಅವರ ಸಾರ್ಥಕ ಜೀವನ ಸೌಧಕ್ಕೆ ಈ ಬಗೆಯ ನಿರ್ಯಾಣವು ಕಲಶವಿಟ್ಟಿತು. All is well that ends well.


(ಸೇಡಿಯಾಪು ಅವರ 'ವಿಚಾರಪ್ರಪಂಚ' ೧೯೯೨.)