ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೪೪ / ಕುಕ್ಕಿಲ ಸಂಪುಟ

ಕೀರ್ತನೆಗಳನ್ನು ಅಲ್ಲಲ್ಲಿ ತುಳುಜನರ ಬಾಯಿಂದ ಈಗಲೂ ಕೇಳಬಹುದು. ಹೆಚ್ಚೇಕೆ, ಕಳೆದ ೧೯೦೫ನೇ ಇಸವಿಯಲ್ಲಿ ಕಾರ್ಕಳದ ದೀಪೋತ್ಸವದಂದು ಭಿಕ್ಷುಕನೊಬ್ಬನು ದೇವರ ಮುಂದೆ ಹಾಡುತ್ತಿದ್ದ ಮೇಲೆ ಹೇಳಿದ ಸುಬ್ಬನ ಕೀರ್ತನೆಯನ್ನು ಕೇಳಿ ನನಗೆ ರೋಮಾಂಚವಾಯಿತು."(ಈ ಗ್ರಂಥವು ೧೯೨೫ರಲ್ಲಿ ಅಚ್ಚಾಗಿದೆ. ದಿ| ಪರಮೇಶ್ವರಯ್ಯನವರು ಕನ್ನಡ ಮನೆಮಾತಾಗಿರುವ ಕೋಟ ಬ್ರಾಹ್ಮಣರು; : ಉಡುಪಿ ತಾಲೂಕಿನ ಪೊಳಲಿಯಲ್ಲಿದ್ದವರು).

ಇನ್ನೊಬ್ಬ ಪ್ರಸಿದ್ಧ ಯಕ್ಷಗಾನ ಕಲಾವಿದರಾಗಿದ್ದ ದಿ| ರಂಗಪ್ಪಯ್ಯನೆಂಬುವರು ೧೯೨೫ನೇ ಇಸವಿಯಲ್ಲಿ ರಚಿಸಿದ್ದ "ಯಕ್ಷಗಾನ ಪರಿಸ್ಥಿತಿ" ಎಂಬ ಪದ್ಯಗ್ರಂಥದಲ್ಲಿ ಹೀಗೆ ಹೇಳಿದ್ದಾರೆ- (ಇವರು ಪುತ್ತೂರಿನವರು, ಈ ಗ್ರಂಥವೂ ಅಚ್ಚಾಗಿದೆ).

...........ಮಧ್ಯಗತಿ |
ಹೊಂದಲಿನ್ನೂರು ವರ್ಷದ ಪಿಂತೆ ಪುಟ್ಟಿದಂ ಕಣಿಪುರದಿ ಪಾರ್ತಿಸುಬ್ಬಂ ||
ದ್ರಾಕ್ಷಾಪಾಕರೀತಿಯಿಂ ರಚಿಸಿರ್ದ
ಸಲ್ಲಲಿತವಾಗಿ ರಾಮಾಯಣವ ಲೋಕೋಪಕಾರಕೆಂದತಿ ಮುದದೊಳು ||
ಒರೆವಡತಿ ಯೋಗ್ಯವಹ ಗಾಯಕ ಮೃದಂಗಜತಿ |
ವರ ರಸಂಗಳ ಭೇದ ಕಾಲಾಸ ನಿಯಮವದು |
ಕರಮೊಪ್ಪೆ ರಾಗ ತಾಳಾಚ್ಛಾಯೆ ನರ್ತಿಸುವ ಹಾವಭಾವ ವಿಲಾಸವ ||
ನೆರೆ ಭೂರಿ ವೇಷಭೂಷಣದಿ ರಂಗಸ್ಥಳದಿ |
ಮೆರವಾ ದಶಾವತಾರದ ನಿಯಮವರಿಯುವಡೆ |
ಸರಸಶಾಸ್ತ್ರವಿದೆನಿಪ ಶ್ರೀ ಸಭಾಲಕ್ಷಣವ ರಚಿಸಿದಂ ಪ್ರೀತಿಯಿಂದ ||

ಕಾಸರಗೋಡು ತಾಲೂಕಿನ ದಿ| ದಾಮೋದರ ಪುಣಿಂಚತ್ತಾಯ ಎಂಬ ಕವಿಗಳು ರಚಿಸಿದ "ಕುಂಬಳಸೀಮೆತ ಚರಿತ್ರೆ"ಯೆಂಬ ಗ್ರಂಥದಲ್ಲಿ-

ಕಣಿಪುರೊಂಟು ಕೃಷ್ಣ ನಿಕೇ ತನೋ ಸೋ |
ಜುಣು ಶರಧಿ ತಡಿಟ್ ಶೃಂಗಾರೊ ||
ಕನ್ನಡ ಕವಿತೆಟ್ ಯಕ್ಷಗಾನೊನು |
ತನ್ನಮಾಂತ್ ತಾಳಮೇಳೊಂತ ||
ನಿರ್ಣಯ ಬರೇಯಿ ಪಾರ್ತಿಸುಬ್ಬಯನ |
ಜನ್ಮಭೂಮಿ ಮೂಳಾದ್ಯೊಂತ || ಎಂದಿದ್ದಾರೆ.

ಕನ್ನಡ ಕವಿತೆಯಲ್ಲಿ ಯಕ್ಷಗಾನವನ್ನುಂಟುಮಾಡಿ ತಾಳಮೇಳಗಳ ನಿರ್ಣಯವನ್ನು ರಚಿಸಿದ ಪಾರ್ತಿಸುಬ್ಬನ ಜನ್ಮಭೂಮಿಯು ಕೃಷ್ಣದೇವಸ್ಥಾನವಿರುವ ಕಣಿಪುರವಾಗಿದೆ ಎಂದು ಇದರ ತಾತ್ಪರ್ಯ.

ಬೆಳ್ತಂಗಡಿಯವರಾದ ದಿ| ಕವಿಭೂಷಣ ಕೆ. ಪಿ. ವೆಂಕಪ್ಪ ಶೆಟ್ಟರೆಂಬ ಪ್ರಸಿದ್ಧ ಯಕ್ಷಗಾನ ಕವಿಗಳು ಹಾಗೂ ಅರ್ಥಧಾರಿಗಳು ತಮ್ಮ 'ರಾಣಾರಾಜಸಿಂಹ' ಎಂಬ ಕೃತಿಯ ಮುನ್ನುಡಿಯಲ್ಲಿ - ಕುಂಬಳೆಯ 'ಪಾರ್ತಿಸುಬ್ಬ'ನೆಂಬ ಕವಿಯೇ ಕರ್ನಾಟಕದಲ್ಲಿ ಯಕ್ಷಗಾನ ನಾಟಕವನ್ನು ಪ್ರಚಾರಕ್ಕೆ ತಂದ ಮೂಲಪುರುಷನು; ಈತನು ಯಕ್ಷಗಾನ ನಾಟಕಗಳಿಗೆ ಸೂತ್ರರೂಪದಂತಿರುವ ಸಭಾಲಕ್ಷಣವೆಂಬ ಕೈಪಿಡಿಯೊಂದನ್ನು ಬರೆದು ರಾಮಾಯಣವನ್ನು ಯಕ್ಷಗಾನ ಪ್ರಬಂಧಗಳಾಗಿ ವಿರಚಿಸಿ 'ಯಕ್ಷಗಾನ ವಾಲ್ಮೀಕಿ'ಯೆಂದು