ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪೬ | ಕುಕ್ಕಿಲ ಸಂಪುಟ
ನಮ್ಮ ರಾಮಾಯಣ ಯಕ್ಷಗಾನ ಕೃತಿಗಳನ್ನೂ, ಸಭಾಲಕ್ಷಣ ಗ್ರಂಥವನ್ನೂ ಪರಿಶೀಲಿಸಿದಲ್ಲಿ ಸುಬ್ಬನ ಕುರಿತ ಈ ಹೇಳಿಕೆಗಳು ಕಲ್ಪನೆಯ ಮಾತಲ್ಲವೆಂಬುದನ್ನು ಯಾರೂ ಊಹಿಸಿಕೊಳ್ಳಬಹುದಾಗಿದೆ.
ನಮ್ಮ ದಶಾವತಾರ ಆಟವೆಂಬುದು ಪೂರ್ವರಂಗಸಹಿತವಾದ ನಾಟ್ಯ ಪ್ರಯೋಗ. ಸಭಾಲಕ್ಷಣದ ಆ ನಾಂದೀ ಪ್ರಯೋಗವಿಲ್ಲದೆ ಕಥಾರಂಭವಾಗುವುದೆಂದಿಲ್ಲವಷ್ಟೆ? ತಾಳಮದ್ದಳೆಗಳಲ್ಲಿಯಾದರೂ ಆ ಆ ಸಭಾಲಕ್ಷಣದಲ್ಲಿರುವ ಮದವೂರ ವಿಗ್ಣೇಶನ ಸ್ತುತಿಪದ್ಯವನ್ನು ಹಾಡದೆ ಪ್ರಸಂಗ ಹೇಳುವ ಸಂಪ್ರದಾಯವಿರುವುದಿಲ್ಲ. ನಮ್ಮ ದಕ್ಷಿಣೋತ್ತರ ಜಿಲ್ಲೆಗಳ ಯಾವತ್ತೂ ಆಟದ ಮೇಳದವರು ಈ ಸಭಾಲಕ್ಷಣವನ್ನು ತಪ್ಪದೆ ಅನುಸರಿಸಿಕೊಂಡು ಬಂದಿರುತ್ತಾರೆ. ನಮ್ಮಲ್ಲಿ ತೆಂಕಮಟ್ಟು ಬಡಗಮಟ್ಟು ಎಂಬ ಭೇದವಿರುವುದು ವೇಷರಚನೆಯಲ್ಲಿ ಮತ್ತು ಕುಣಿತದ ಕ್ರಮದಲ್ಲಿ ಮಾತ್ರ ಸಭಾಲಕ್ಷಣ ಹಾಗೂ ಯಕ್ಷಗಾನ ಕೃತಿರಚನೆಯಲ್ಲಿ ಎರಡು ಸಂಪ್ರದಾಯಗಳೆಂದಿರುವುದಿಲ್ಲ. ಈ ಸಭಾಲಕ್ಷಣದ ನಾಂದೀ ವಿಧಿಗಳು ದಶಾವತಾರಸ್ತುತಿಪೂರ್ವಕವಾಗಿಯೇ ನಡೆಯತಕ್ಕವು. 'ಮತ್ಸಕೂರ್ಮವರಾಹಶ್ಚ ನಾರಸಿಂಹಶ್ಚ ವಾಮನಃ......' ಎಂಬ ದಶಾವತಾರ ಶ್ಲೋಕ ದಿಂದಲೇ ಸಭಾಲಕ್ಷಣ ಆರಂಭವಾಗುವುದು, ಕೊನೆಗೊಳ್ಳುವುದೂ ದಶಾವತಾರಮಂಗಳ ಗೀತದಲ್ಲಿ, ಸ್ತ್ರೀವೇಷ ಕುಣಿಸುವ 'ದಶಾವತಾರ ಕೋಲಾಟ', 'ಅವತಾರಸಂವಾದ' ಎಂಬ ಪದ್ಯಗಳು ಬೇರೆ ಇರುತ್ತವೆ. ಆದುದರಿಂದಲೇ ಇದಕ್ಕೆ ದಶಾವತಾರ ಆಟವೆಂದು ಹೆಸರಾಗಿರುವುದು ಹೊರತು ಹತ್ತೂ ಅವತಾರದ ಕಥೆಗಳು ಯಕ್ಷಗಾನಗಳಲ್ಲಿಲ್ಲವಷ್ಟೆ? ಹಾಗಾಗಿ ಈ ಸಭಾಲಕ್ಷಣವೆಂಬುದು ನಮ್ಮ 'ದಶಾವತಾರ ಆಟ'ದ ಮೂಲ ಗ್ರಂಥ ವೆಂಬುದರಲ್ಲಿ ಸಂದೇಹವಿಲ್ಲ.
ರಾಮಾಯಣ ಪ್ರಸಂಗಗಳನ್ನು ನೋಡಿದರೂ, ದಶಾವತಾರ ಆಟವನ್ನು ರಂಗಕ್ಕೆ ತಂದ ಮೊದಲ ಕೃತಿಗಳು ಇವೇ ಆಗಿರಬೇಕೆಂದು ನ್ಯಾಯವಾಗಿ ಊಹಿಸಬಹುದು. ಏಕೆಂದರೆ, ನಮ್ಮಲ್ಲಿ ಇತರ ಹಲವಾರು ಕವಿಗಳ ನೂರಾರು ಯಕ್ಷಗಾನ ಪ್ರಸಂಗಗಳು ಹುಟ್ಟಿಕೊಂಡಿದ್ದರೂ, ದೇವಿದಾಸ, ವಿಷ್ಣು ವಾರಂಬಳ್ಳಿ, ನಾಗಪ್ಪಯ್ಯ ಮುಂತಾದ ಹಿಂದಿನ ಯಕ್ಷಗಾನ ಕವಿಗಳಲ್ಲಿ ಒಬ್ಬೊಬ್ಬರೇ ನಾಲ್ಕಾರು ಕೃತಿಗಳನ್ನು ರಚಿಸಿದವರಿದ್ದರೂ, ಅವರಲ್ಲಿ ಯಾರೊಬ್ಬನೂ ರಾಮಾಯಣದ ಒಂದೇ ಒಂದು ಪ್ರಸಂಗವನ್ನು ಮಾಡಿದ್ದಿಲ್ಲ ಎನ್ನುವಾಗ, ಪಾರ್ತಿಸುಬ್ಬನ ಈ ರಾಮಾಯಣ ಕೃತಿಗಳು ಆ ಮೊದಲೇ ರೂಢಿಯಲ್ಲಿದ್ದಿರ ಬೇಕೆಂಬುದರಲ್ಲಿ ಸಂದೇಹವಿಲ್ಲ.
ಇನ್ನೂ ಒಂದು ವಿಚಾರದಿಂದ ಅವು ಮೊದಲ ಕೃತಿಗಳಿದ್ದಿರಬೇಕೆಂದು ಸಿದ್ಧ ವಾಗುವುದು. ಹೇಗೆಂದರೆ- ರಾಮಾಯಣ ಕೃತಿರಚನೆಯಲ್ಲಿ ಸುಬ್ಬನು ಬತ್ತೀಸಾಕೃತಿ ರಾಗತಾಳ ವಿಧದಿಂ ರಾಮಾಯಣಂ ಪೇಳ್ವುದ' ಎಂಬ ಪ್ರತಿಜ್ಞೆಯಿಂದ, ಇಂತಹ ಪದ್ಯಬಂಧಕ್ಕೆ ಇಂತಹದೇ ರಾಗತಾಳಗಳಿರಬೇಕೆಂಬ ಯಾವುದೊಂದು ನಿಯಮವನ್ನು ಕಲ್ಪಿಸಿರುತ್ತಾನೋ ಅದನ್ನು ನಮ್ಮ ಎಲ್ಲ ಕವಿಗಳೂ ಅನುಸರಿಸಿಕೊಂಡು ಬಂದಿರುತ್ತಾರೆ. ಹೇಗೆಂದರೆ- 'ಭೈರವಿ ಜಂಪೆ'ಯ ಬಂಧ ಬೇರೆ 'ಕಾಂಬೋಜಿ-ಜಂಪೆ'ಯದು ಬೇರೆ. ಕೇದಾರಗೌಳ ಜಂಪೆತಾಳದ ಪದ್ಯರಚನೆ ಇನ್ನೊಂದು ವಿಧ. ಹೀಗೆಯೇ, 'ಸೌರಾಷ್ಟ್ರ, ತ್ರಿವುಡೆ', 'ಮಧ್ಯಮಾವತಿ-ತ್ರಿವುಡೆ', 'ಕಾಂಬೋಜಿ-ಅಷ್ಟತಾಳ', 'ಭೈರವಿ-ಅಷ್ಟತಾಳ', 'ತೋಡಿ-ಅಷ್ಟತಾಳ', 'ನಾದನಾಮಕ್ರಿಯೆ-ಅಷ್ಟತಾಳ', 'ಮಾರವಿ-ಏಕತಾಳ', 'ಶಂಕರಾ ಭರಣ-ಏಕತಾಳ', 'ಶಂಕರಾಭರಣಮಟ್ಟೆ,ತಾಳ', 'ಮಾರವಿ-ಮಟ್ಟೆ' ಇತ್ಯಾದಿ ಒಂದೊಂದು