ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೫೨ / ಕುಕ್ಕಿಲ ಸಂಪುಟ

ಸಭಾಲಕ್ಷಣ ಗ್ರಂಥದಲ್ಲಿಯೂ ಈ ವೃತ್ತಗಳಿರುತ್ತವೆ. ಎರಡರಲ್ಲಿಯೂ ಈ ಪದ್ಯ ಗಳನ್ನು ಉದ್ದರಿಸಿಕೊಳ್ಳುವ ಮೂಲಕ ಸುಬ್ಬನು ಕಥಕಳಿಯ ಗುರುವಾದ ಆ ರಾಜನಿಗೂ, ಆತನ ರಾಮಾಯಣಕ್ಕೂ ಗೌರವವನ್ನು ಸಲ್ಲಿಸಿರುತ್ತಾನೆ.

ಕಥಕಳಿ ರಾಮಾಯಣದ ಇನ್ನೂ ಕೆಲವು ಉದ್ಧತಿಗಳನ್ನು ನಮ್ಮ 'ಸಭಾಲಕ್ಷಣ'ದಲ್ಲಿ ಕಾಣಬಹುದು :

“ವರದ ರಘುಕುಲ ರಘುಕುಲ ಕಾಲ ವಾರಣಧ್ವಂಸಿ ವರವಂಚಿ ಬಾಲಕ ವೀರಕೇರಳ ವಿಭುಸ್ತುತ' ಎಂಬ ವಾಕ್ಯವೂ ಕಥಕಳಿ ರಾಮಾಯಣದ ಮಂಗಳಪದ್ಯದಲ್ಲಿರುವುದೇ ಆಗಿದೆ. ಇನ್ನು 'ಹರಿಹರವಿಧಿನುತ ಅಮರಪೂಜಿತ ಹೇ ವಾಮನರೂಪ' ಎಂದು ಮೊದಲಾಗುವ ವಿಶ್ಲೇಶ್ವರ ಸ್ತುತಿಪದ್ಯವೂ ಕಥಕಳಿಯ ಪೂರ್ವರಂಗದಲ್ಲಿರು ವಂಥಾದ್ದು. ಈ ಪದ್ಯವನ್ನು ಕಥಕಳಿಯ ಸುಧಾರಕನೂ, ಗ್ರಂಥಕರ್ತನೂ ಆಗಿದ್ದ ಕೇರಳದ 'ಕೊಟ್ಟಾಯಂ ತಂಬುರಾನ್' ರಾಜನು ರಚಿಸಿರುವುದಾಗಿದೆ. ಇಂದಿಗೂ ಈ ಪದ್ಯವು ಕಥಕಳಿಯ 'ತೋಡಯ ಮಂಗಲ'ದಲ್ಲಿ ತಪ್ಪದೆ ಹಾಡಲ್ಪಡುತ್ತದೆ.

ಸಭಾಲಕ್ಷಣದಲ್ಲಿರುವ ಇನ್ನೊಂದು ಪದ್ಯ 'ಶರಣು ತಿರುವಗ್ರಶಾಲಿ ವಾಹಿನಿ...' ಎಂಬ ಅನ್ನಪೂರ್ಣಾ ಸ್ತುತಿಯೂ ತಿರುವಾಂಕೂಕೋಡಿನ ಅನ್ನಪೂರ್ಣೇಶ್ವರಿಯ ಕುರಿತಾಗಿರುವುದೆಂದೆಣಿಸಬಹುದು. (ತಿರುವಗ್ರ = ತಿರುವನ್ ಕೋಡು)

ಹಿಂದೆ ಹೇಳಿದ ತಮಿಳು ಛಂದಸ್ಸಿನ ವೃತ್ತಗಳನ್ನೂ ನಮ್ಮ ಸಭಾಲಕ್ಷಣದಲ್ಲಿ ಕಾಣಬಹುದು. ಉದಾಹರಣೆಗಾಗಿ ಮಾಧವ ಗೊಲ್ಲ ಭಾಮೆಯರ ವಿರಹ ವಿನೋದ ಪ್ರಕರಣದಲ್ಲಿರುವ ಒಂದು ಮಾತು :

ಕಿರುಜಡೆಯ ಮುಕುಟಧಾರೀ | ಕೃಷ್ಣ ಕೌಸ್ತುಭಹಾರೀ |
ತುರುಗಳನ್ನು ಕಾವ ದೇವ | ತೋರನ್ಯಾಕೀಗ ರೂಪ |
ಮುರಳಿಯಾ ಧ್ವನಿಯ ಕೇಳಿ | ಮಾರುಕೊಂಡಿರ್ದ ಬಾಳಿ
ಗರುಡನಾ ಹೆಗಲನೇರಿ | ಬಾರನೇ ಹೊಂತಕಾರಿ |

ಇದಲ್ಲದೆ ಪೂರ್ವರಂಗದ ಹಾಸ್ಯಪ್ರಹಸನಗಳಲ್ಲಿ 'ಅರೆಪ್ಪಾವಿನಾಟ' ಎಂಬುದು ಸಭಾ ಲಕ್ಷಣದಲ್ಲಿರುವುದೇ ಆಗಿದೆ. ಇದಕ್ಕೆ 'ಅಟ್ಟಳಿಗೆಯಾಟ' ಅಥವಾ 'ಚಪ್ಪರ ಮಂಚದಾಟ' ಎಂದೂ ಹೆಸರಿರುವುದು. ಈ ಆಟವು ಕೇರಳದ 'ಕೂತ್ತು ಕಳಿ'ಗಳಿಗೆ ಸೇರಿದ್ದು. ಅದರಲ್ಲಿ ಹಾಡತಕ್ಕ ಪದ್ಯಗಳು ಗ್ರಾಮೀಣ ಮಲೆಯಾಳ ಭಾಷೆಯಲ್ಲಿರುತ್ತವೆ. ಆರಂಭದಲ್ಲಿ ಅದೇ ತಮಿಳಿನ 'ಆಶಿರಿಯವಿರುತ್ತ'ವಿರುವುದು :

ಉದಾ :

ಚೂರಿಯಾ ಕುಲತ್ತಿಲೆಂದೀ | ಚುಮುಗ ರಾಜೇಂದ್ರನೆನ್ನಾನ್ |
ಭಾರಿಯಾಕ್ಕಳೆಯುಡನ್ | ವೇಂಟೆಯಾ ಚೇದಿ ವರಣಂ |
ತಿರುವಿಯಾಲ್‌ ಭೋಜರಾಜಾ | ಮೆರುವೆಯಾ ಕಟ್ಟಿಲೋಡೇ |
ಮಣ್ಣನ್ ತೂಣಿಲೆಡ್‌ತ್ತುವಡಾ | ಅರುವೈಯೂಡಿ ಕಪಾಲನ್ | ಇತ್ಯಾದಿ.

'ಅರೆ' ಎಂದರೆ ನಡು ಅಥವಾ ಸೊಂಟ, 'ಪಾವು' ಎಂದರೆ ಕುಣಿತ, ಅರೆಪ್ಪಾವು ಎಂದರೆ ಸೊಂಟದಿಂದಲೆ ಕುಣಿದಾಡುವ ಆಟವೆಂದರ್ಥ, ಮುಖವಾಡವನ್ನು ಧರಿಸಿದ ಅರೆಪ್ಪಾವಿನ ಆ ಸ್ತ್ರೀವೇಷವು ಅಟ್ಟಳಿಗೆಯ ಮೇಲೆ ಏರಿಕೊಂಡು ಬರುವುದಾಗಿದೆ.