ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಯಕ್ಷಗಾನದ ಶಾಸ್ತ್ರೀಯತೆ

  ಬಯಲಾಟ ಹಾಗೂ ದಶಾವತಾರವೆಂದು ಕರೆಯಲ್ಪಡುವ ಯಕ್ಷಗಾನ ಪ್ರಯೋಗವು ನಮ್ಮ ದಕ್ಷಿಣ ದೇಶದ ಆಂಧ್ರ, ಕರ್ಣಾಟಕ, ತಮಿಳುನಾಡು ಈ ಮೂರು ರಾಜ್ಯಗಳ ವಿಸ್ತಾರದಲ್ಲಿ ಬಹುಕಾಲದಿಂದ ತಾಂಡವವಾಡುತ್ತಿದ್ದರೂ ಇದರ ಪೂರ್ವೋತ್ತರದ ಕುರಿತು ವಿದ್ವಾಂಸರು ಸಂಶೋಧನೆಗೆ ಕೈಹಚ್ಚಿರುವುದು ಕಳೆದ ಐವತ್ತು ವರ್ಷಗಳಿಂದೀಚೆ. ಅಂದಿನಿಂದ, ಯಕ್ಷಗಾನವೆಂಬ ಹೆಸರು ಯಾವುದರಿಂದ ಬಂತು? ಇದು ಶಾಸ್ತ್ರೀಯ ಸಂಪ್ರದಾಯವೋ ಅಥವಾ ಜಾನಪದವೋ? ಮೂಲವೆಲ್ಲಿ? ಹುಟ್ಟಿದ್ದೆಂದು? ಎಂಬ ಜಿಜ್ಞಾಸೆಗಳು ಉಂಟಾಗಿವೆ. ಬಯಲಾಟಕ್ಕೆ ಸದೃಶವಾದುದೇ ದಕ್ಷಿಣದ ನಾಲ್ಕನೇ ರಾಜ್ಯವಾದ ಕೇರಳದ ಕಥಕಳಿ ಎಂಬುದು. ಅದು ಮೂಕಾಭಿನಯ ಮತ್ತು ವಿಶೇಷವಾದ ಹಸ್ತಮುದ್ರೆಗಳ 'ಚಿತ್ರಾಭಿನಯ'ವುಳ್ಳುದು ಎಂಬುದಷ್ಟೆ ಬಯಲಾಟಕ್ಕೂ, ಅದಕ್ಕೂ ಹೇಳುವಂತಹ ವ್ಯತ್ಯಾಸವಿರುವುದು. ಆದರೆ, ಹಿಂದಕ್ಕೆ ಈ ವಿಶೇಷತೆಗಳು ಅದರಲ್ಲಿದ್ದಿಲ್ಲ ಎಂದೂ, ಬಯಲಾಟಗಳಲ್ಲಿ ಈಗಲೂ ಕೆಲವೆಡೆ ರೂಢಿ ಇರುವಂತೆ ಭಾಗವತರೊಂದಿಗೆ ಪಾತ್ರಗಳೂ ಹಾಡುವ ಸಂಪ್ರದಾಯವಿದ್ದಿತ್ತೆಂದೂ, ಆಗ ಹಸ್ತಮುದ್ರೆಗಳ ಅಭಿನಯವು ಇದ್ದಿರಲಿಲ್ಲವೆಂದೂ ತಜ್ಞರ ಸಂಶೋಧನೆಗಳಿಂದ ತಿಳಿದು ಬಂದಿದೆ. ಆದರೆ ಅದರ ಹಾಡುಗಾರಿಕೆಯೂ, ನಾಟ್ಯವೂ ಮೊದಲಿಂದಲೂ ಹೆಚ್ಚಿನ ಮಟ್ಟಿಗೆ ಶಾಸ್ತ್ರೀಯವಾದುದೆನ್ನುತ್ತಾರೆ.
ಯಕ್ಷಗಾನವಾದರೆ, ಕೆಲವು ಕಡೆ ಶಾಸ್ತ್ರೀಯವಾದ ಸಂಗೀತ-ನಾಟ್ಯಗಳಿಂದ ಪ್ರಯೋಗಿಸಲ್ಪಡುವುದು, ಕೆಲವು ಕಡೆ ಸಂಗೀತ-ನಾಟ್ಯಗಳಲ್ಲಿ ಶಾಸ್ತ್ರೀಯ ಅಭ್ಯಾಸವಿಲ್ಲದವರಿಂದ ಜಾನಪದವೆಂಬ ಹಾಗೆ ಆಡಲ್ಪಡುವುದು, ಹೀಗೆ ಎರಡು ವಿಧದಲ್ಲಿ ನಡೆದು ಬಂದಿದೆ. ಅಶಾಸ್ತ್ರೀಯವೆನ್ನುವ ಪ್ರಯೋಗದಲ್ಲಾದರೂ, ಸಾಂಪ್ರದಾಯಿಕವಾದ ಕೆಲವೊಂದು ಶಾಸ್ತ್ರೀಯ ಆನುವಂಶಿಕವನ್ನು ನಾವು ಲಕ್ಷಿಸಬಹುದಾಗಿದೆ. ಮುಖ್ಯವಾಗಿ, ಪಾತ್ರಗಳು ತೆರಹಿಡಿದು ರಂಗಸ್ಥಳ ಪ್ರವೇಶ ಮಾಡುವುದು ಯಾವ ಯಾವ ಜಾನಪದ ಸಂಪ್ರದಾಯದಲ್ಲೂ ಇರುವಂತಹದಲ್ಲ. ಕಥಾರಂಭಕ್ಕೆ ಮೊದಲು ನಡೆಯುವ ಸಭಾಲಕ್ಷಣವೆಂಬ ನಾಂದೀ ವಿಧಿ; ಅಲ್ಲಿ ಶಾಸ್ರೋಕ್ತ ಲಕ್ಷಣ ಶ್ಲೋಕಗಳ ಸಮೇತ ವಿಸ್ತರಿಸಲ್ಪಡುವ ನಾಟ್ಯ ಲಕ್ಷಣ, ಗಾಯಕ ಲಕ್ಷಣ, ವಾದ್ಯ- ವಾದಕ-ನಟ-ವಿದೂಷಕ-ತಾಳಮೇಳ ಇತ್ಯಾದಿ ಲಕ್ಷಣಗಳು, ಮುಖಕ್ಕೆ ಬಣ್ಣ ಹಾಕುವ ಕ್ರಮ, ವೇಷರಚನೆ, ಕಿರೀಟ, ಕಡಗ, ಕಂಕಣ, ಎದೆಹಾರ, ಭುಜಕೀರ್ತಿ ಇತ್ಯಾದಿ ಆಭರಣ ವಿಶೇಷಗಳೂ ಜಾನಪದ ಸಂಪ್ರದಾಯದಲ್ಲೆಲ್ಲಿಯೂ ಇದ್ದಂತೆ ತಿಳಿಯುವುದಿಲ್ಲ. ಅಲ್ಲದೆ ಕುಣಿತದಲ್ಲಿಯೂ, ದೊಡ್ಡಲಾಗ, ಅಂತರಲಾಗ, ಅಡಂತರಲಾಗ, ಒರ್ಮೈಲಾಗ, ಮಂಡಿ, ಬೀಸು, ತಿರುಸು ಎಂದು ಕರೆಯಲಾಗುವ ಹಾರಾಟ-ಸುತ್ತಾಟಗಳು, ಶಾಸ್ತ್ರ ಗ್ರಂಥಗಳಲ್ಲಿ ಕಾಣುವ “ಉತ್ಪ್ಲುತೀಕರಣ' ಮತ್ತು 'ಭ್ರಮರೀ' ಎಂಬ ನೃತ್ತ ವಿಧಾನಗಳೇ ಆಗಿವೆ.'ಲಾಗನೃತ್ತ'ಗಳನ್ನು ಕೇರಳದ ಕಥಕಳಿಯಲ್ಲೂ ಕಾಣಬಹುದು.
ಬಯಲಾಟದ ಈ ಶಾಸ್ತ್ರೀಯಾಂಶಗಳನ್ನು ಲಕ್ಷಿಸಿದ ಮದ್ರಾಸಿನ ಡಾ| ವಿ. ರಾಘವನ್ ಅವರಂತಹ ಶಾಸ್ತ್ರ ಪರಿಣತರು, ಕಥಕಳಿಯಂತೆ ಇದೂ ಸಂಸ್ಕೃತ ರೂಪಕ,