ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಯಕ್ಷಗಾನದ ಶಾಸ್ತ್ರೀಯತೆ / ೭೫

ಹೀಗಿರುವುದರಿಂದ ಮೇಲಿನ ಚೌಂಡರಸನ ಪದ್ಯದಲ್ಲಿ ತೋರುವಂತೆ ನಟ್ಟುವರ ದಶಾವತಾರ ಪ್ರಯೋಗವೇ ನಮ್ಮ ದಶಾವತಾರ ಆಟದ ಪೂರ್ವಸ್ಥಿತಿ ಎಂದು ನ್ಯಾಯವಾಗಿ ಊಹಿಸಬಹುದಾಗಿದೆ. ಅಲ್ಲದೆ ನಮ್ಮ ಪೂರ್ವದ ಕನ್ನಡ ಕಾವ್ಯಗಳಲ್ಲಿ ವಿಶೇಷವಾಗಿ ವರ್ಣಿಸಲ್ಪಟ್ಟಿರುವ ನಾಟಕಗಳು, ಸಾಮಾನ್ಯವಾಗಿ ಈಗ ವಿದ್ವಾಂಸರು ಊಹಿಸುತ್ತಿರುವಂತೆ, ಭಾಸ-ಕಾಳಿದಾಸಾದಿ ಕವಿಗಳ ಸಂಸ್ಕೃತ ನಾಟಕಗಳಾಗಿರಬೇಕೆಂದು ಎಣಿಸಬೇಕಾಗಿಲ್ಲ. ಅವು ಪ್ರಾಯಶಃ ಸಂಸ್ಕೃತ ಉಪರೂಪಕಗಳೋ, ಅಥವಾ ಅಂತಹದೇ ದೃಶ್ಯಪಯುಕ್ತವಾದ ಕನ್ನಡ ಹಾಡುಗಬ್ಬಗಳೋ ಆಗಿರಬಹುದಲ್ಲವೆ? ಆದ್ದರಿಂದಲೇ ಬಹುಶಃ ನಮ್ಮ ಪೂರ್ವದ ಕನ್ನಡ ಕವಿಗಳು ಕಾಳಿದಾಸಾದಿಗಳ ಸಂಸ್ಕೃತ ನಾಟಕಗಳಂತಹ ರೂಪಕಗಳನ್ನು ರಚಿಸಲಿಲ್ಲ.

ಯಕ್ಷಗಾನ ರಚನೆಗಳು ಹಿಂದೆ ಹೇಳಿದಂತೆ ೧೬ನೇ ಶತಮಾನಕ್ಕಿಂತ ಹಿಂದಿನವು ದೊರೆತಿಲ್ಲವೇನೋ ಸರಿ. ಆದರೆ 'ಕವಿರಾಜ ಮಾರ್ಗ', 'ಕಾವ್ಯಾವಲೋಕನ'ಗಳಲ್ಲಿ ಕಾಣುವ ಹಾಡುಗಬ್ಬದ ಲಕ್ಷಣಗಳನ್ನು ಪರಿಶೀಲಿಸಿದರೆ ಅದು ನಮ್ಮ ಯಕ್ಷಗಾನದಂತಹದೇ ರಚನೆಯೆಂದು ತಿಳಿಯಬಹುದು.

ಯಕ್ಷಗಾನದಲ್ಲಿರುವ ರಾಗತಾಳಬದ್ಧವಾದ ಪದ್ಯಗಳನ್ನು ಮೊದಲಿಂದಲೂ ಪದಗಳೆಂದು ಕರೆಯುವ ರೂಢಿಯಿದೆ. ಈ ಪದಗಳ ಎಡೆಎಡೆಯಲ್ಲಿ ಒಂದೊಂದು ವೃತ್ತಗಳೂ, ಕಂದಗಳೂ ಸೇರಿರುವುದು ಯಕ್ಷಗಾನ ರಚನೆಯ ಮುಖ್ಯ ಲಕ್ಷಣ ವಾಗಿದೆಯಷ್ಟೆ. ಈಗ ಕಾವ್ಯಾವಲೋಕನದಲ್ಲಿ ಕೊಟ್ಟಿರುವ ಹಾಡು, ಹಾಡುಗಬ್ಬಗಳ ಲಕ್ಷಣವೇನು?

ಸೂ. ೨೪೧
ಸಂದಿಸಿರ ಕಂದಮುಂ ಪರ
ತೊಂದರಿಕೆಯ ವೃತ್ತಜಾತಿಯುಂ ಪದಮವು ತ |
ಳ್ತೊಂದಿರೆ ಪನ್ನೆರಡುವರಂ
ಸಂದುದು ಮೆಲ್ವಾಡೆನಿಕ್ಕುವದು ಕನ್ನಡದೊಳ್ |||| ೯೫೨ ||

ಕಂದ ಪದ್ಯವೂ, ಯಾವುದಾದರೂ ಒಂದು ವೃತ್ತವೂ, ಸಂಖ್ಯೆಯಲ್ಲಿ ಹನ್ನೆರಡಕ್ಕೆ ಮೀರದ ಪದಗಳೂ ಇರುವ ರಚನೆಯು ಕನ್ನಡದಲ್ಲಿ 'ಮಾಡು' ಎಂದು ಕರೆಯಲ್ಪಡುತ್ತದೆ ಎಂಬುದು ಸಂಗ್ರಹಾರ್ಥವಾಗಿದೆ. ಇಲ್ಲಿ ಪದಗಳು (ಪದಂ ಅವು) ಎಂದಿರುವುದು ಹಾಡುಗಳೇ ಎಂಬುದರಲ್ಲಿ ಸಂದೇಹವಿಲ್ಲ. ಅದು ಹೊರತು ಮೆಲ್ವಾಡು ಎಂಬ ಹೆಸರಾಗುವುದಾದರೂ ಹೇಗೆ? ಈ ಪದಗಳು ಅಥವಾ ಹಾಡುಗಳು ಹನ್ನೆರಡಕ್ಕಿಂತ ಹೆಚ್ಚಿರುವ ಪ್ರಬಂಧವು ಮಲ್ನಾಡಲ್ಲ, 'ಹಾಡು' ಎಂದೇ ಕರೆಯಲ್ಪಡುತ್ತದೆ.

ಸೂ. ೨೪೨
ಪದಿನೈದುಮಿರ್ಪತೈದುಂ
ಪದಂ ಯಥಾಸಂಭವಂ ಪ್ರಬಂಧದ ಮೆಯ್ಯೋಳ್ |
ಪುದಿದೊದವಿ ನೆಗಳ್ವೊಂಡಂತದು
ಸದಲ೦ಕಾರಂ ರಸಾಸ್ಪದಂ ಪಾಡಕ್ಕುಂ |||| ೯೫೩ ||

ಹದಿನೈದೋ ಇಪ್ಪತೈದೋ ಅಥವಾ ವಿಷಯಗೌರವಕ್ಕೆ ತಕ್ಕಂತೆ ಇನ್ನೆಷ್ಟಾದರೋ ಸಂಖ್ಯೆಯ ಪದಗಳಿರಬಹುದಾದ ರಸಾಸ್ಪದ ಪ್ರಬಂಧಕ್ಕೆ 'ಪಾಡು' ಎಂಬ ಹೆಸರೆಂದು ಈ ಪದ್ಯಕ್ಕೆ ಅರ್ಥವಾಗುವುದು. ಇನ್ನು: