ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೭೮ / ಕುಕ್ಕಿಲ ಸಂಪುಟ

ನಾಟಕಗಳೂ' ಎಂಬ ಲೇಖನವನ್ನು ನೋಡಬಹುದು (ಮಾನವಿಕ ಕರ್ನಾಟಕ', ಸಂ. ೧, ಸಂಚಿಕೆ ೨, ವಿ. ವಿ. ನಿಲಯ, ಮೈಸೂರು).

ಇನ್ನು, ಅಂದಿನ 'ಬೆದಂಡೆ' ಇಂದಿನ 'ಯಕ್ಷಗಾನ' ಇವೆರಡೂ ಒಂದೇ ರಚನೆಗಳೆಂದಾದರೆ ಬೆದಂಡೆಗೆ ಯಕ್ಷಗಾನವೆಂಬ ಹೆಸರು ಮತ್ತೆ ಯಾವುದರಿಂದ ಬಂತು? ಎಂಬ ಪ್ರಶ್ನೆ, ಇದನ್ನು ವಿಚಾರಿಸುವ ಮೊದಲು ಬೆದಂಡೆ ಎಂಬ ಹೆಸರೇ ಹೇಗೆ ಬಂತು, ಅದರ ಅರ್ಥವೇನೆಂಬುದನ್ನು ಸ್ವಲ್ಪ ಮಟ್ಟಿಗೆ ಪರಿಶೀಲಿಸುವುದು ಯುಕ್ತವಾಗಿದೆ. ಇದು ಅರ್ಥವಾಗಬೇಕಿದ್ದರೆ ನಮ್ಮ ಶಾಸ್ತ್ರೀಯ ಸಂಗೀತಪರಂಪರೆ ಹೇಗೆ ನಡೆದುಬಂದಿತ್ತೆಂಬುದನ್ನು ಸಂಕ್ಷೇಪವಾಗಿಯಾದರೂ ತಿಳಿದುಕೊಳ್ಳುವುದು ಅವಶ್ಯ.

ಹಿಂದೆ ಹೇಳಿದಂತೆ ಭರತನ ಗಾಂಧರ್ವವೆಂಬುದು ನಾಟಕರಂಗದಲ್ಲಿ, ಅದಕ್ಕಾಗಿಯೇ ಹುಟ್ಟಿದ್ದು. ನಾಟ್ಯಶಾಸ್ತ್ರವೇ ಗಾಂಧರ್ವ ಶಾಸ್ತ್ರ, ಆ ಗಾಂಧರ್ವ ಸಂಗೀತವೆಂದರೆ ಅದು ರಾಗಾಲಾಪನೆ ಇಲ್ಲದ ಕೇವಲ ನಿಬದ್ಧ ಗಾನ, ನಾಟಕದಲ್ಲಿ ಆಲಾಪನೆಗೆ ಅವಕಾಶವಿಲ್ಲ. ಆಲಾಪಪೂರ್ವಕವಾಗಿ ಗೀತೆಗಳನ್ನು ಹಾಡುವ ಸಂಪ್ರದಾಯ ಮತ್ತೆ ವಿಕಾಸಗೊಂಡಿದ್ದು, ಆ ಸ್ವರಾಲಾಪವೇ ರಾಗವೆಂಬ ಹೆಸರು ಪಡೆದುದು. ಆ ಆಲಾಪವೇ ಅನಿಬದ್ಧ ಗಾನ. ಈ ಸಂಪ್ರದಾಯವು ಭರತೋಕ್ತ ಪದ್ಧತಿಯಲ್ಲಿದ್ದಿಲ್ಲವಾದ್ದರಿಂದ, ಇದು ಮಾರ್ಗಕ್ಕಿಂತ ಭಿನ್ನ ಎಂಬ ಅರ್ಥದಲ್ಲಿ 'ದೇಶೀ ಗಾನ'ವೆಂದು ರೂಢಿಗೆ ಬಂತು. ಇದರ ಮೂಲ ಶಾಸ್ತ್ರಕರ್ತನು ಮತಂಗ ಮುನಿ, ಆತನ ಶಾಸ್ತ್ರ ಗ್ರಂಥವು 'ಬೃಹದ್ದೇಶೀ', ರಾಗ ಮಾರ್ಗಸ್ಯ ಸದ್ರೂಪಂ ಯನ್ನೋಕ್ತಂ ಭರತಾದಿಭಿಃ' - ಭರತಾದಿಗಳು ಹೇಳದೇ ಇರುವ ಈ ರಾಗಪದ್ಧತಿಯನ್ನು ತಾನು ವಿಸ್ತರಿಸುವುದಾಗಿದೆ ಎಂದು ಆ ಗ್ರಂಥದಲ್ಲಿ ಹೇಳಿಕೊಂಡಿದ್ದಾನೆ. ಅಂದು ಮೊದಲಾಗಿ ದೇಶೀ ಗೀತಪ್ರಬಂಧಗಳನ್ನು ಸಾವಯವವಾದ ರಾಗಾಲಾಪಪೂರ್ವಕವಾಗಿ ನಾಟ್ಯವಿಲ್ಲದ ಕೇವಲ ಸಂಗೀತ (ಸಭಾಸಂಗೀತ)ದಲ್ಲಿ ಹಾಡುವ ಸಂಪ್ರದಾಯವು ಬೆಳೆದು ಬಂತು. ನಮ್ಮ ಕರ್ಣಾಟಕ ಸಂಪ್ರದಾಯದಲ್ಲಿ ಇದು 'ದಂಡೀಗಾನ'ವೆಂದು ಪ್ರಸಿದ್ಧವಾಯಿತು. ಠಾಯೆ, ಆಲಾಪ, ಗೀತ, ಪ್ರಬಂಧ ಇವು ನಾಲ್ಕು ಪ್ರತ್ಯೇಕ 'ದಂಡಿ'ಗಳೆಂದು ಪರಿಗಣಿಸಲ್ಪಟ್ಟಿವೆ. ಪ್ರಚಲಿತ ಸಂಗೀತದ ಮೇಳಕರ್ತ ರಾಗಗಳ ಮೂಲಕರ್ತನಾದ ವೆಂಕಟಮುಖಿಯ (ಹಿಂದೆ ಹೇಳಿದ ಗೋವಿಂದ ದೀಕ್ಷಿತನ ಮಗ) ಆ ಸಂಗೀತ ಶಾಸ್ತ್ರ ಗ್ರಂಥವು. ಈ ನಾಲ್ಕು ದಂಡಿಗಳನ್ನು ಪ್ರತ್ಯೇಕ ಅಧ್ಯಾಯಗಳಲ್ಲಿ ನಿರೂಪಿಸಿರುವುದಾಗಿ 'ಚತುರ್ದಂಡೀ ಪ್ರಕಾಶಿಕೆ' ಎಂಬ ಹೆಸರು ಪಡೆದಿದೆ.

ಬೆದಂಡೆ ಎಂಬುದರ ಸಂಸ್ಕೃತ ರೂಪವು 'ವೈದಂಡಿಕ' ಎಂದೂ, ಅದು ಕಾವ್ಯದ ಹೆಸರೆಂದೂ ಕೇಶಿರಾಜನ 'ಶಬ್ದಮಣಿದರ್ಪಣ'ದಿಂದ ತಿಳಿಯುವುದು. ಆದ್ದರಿಂದ ಕನ್ನಡ ಬೆದಂಡೆಯಂತಹದೇ 'ವೈದಂಡಿಕ'ವೆಂಬ ಗೇಯ ಕಾವ್ಯವು ಸಂಸ್ಕೃತದಲ್ಲಿದ್ದಿರಬೇಕು. ಇದುವರೆಗೆ ಅಂಥಾದ್ದು ಉಪಲಬ್ಧವಿಲ್ಲ. ಆದರೆ ಸಂಗೀತ ಶಾಸ್ತ್ರಗ್ರಂಥದಲ್ಲಿ ಕಾಣುವ 'ಮಹಾಪ್ರಬಂಧ'ವೆಂಬುದೇ ಅದಾಗಿದ್ದಿರಲು ಕಾರಣ ಉಂಟು, ಇರಲಿ.

'ವೈದಂಡಿಕಂ' ಎಂಬುದು ವಿದಂಡೀ' ಎಂಬುದರಿಂದ ನಿಷ್ಪನ್ನವಾಗುವ ರೂಪ. ವಿದಂಡೀ ಎಂದರೆ 'ದಂಡೀ'ಯಿಂದ ವ್ಯಪೇತವಾದ್ದು, ಎಂದರೆ ಹೊರತಾದ್ದು ಎಂದರ್ಥ. 'ವೈದಂಡಿಕಂ' ಎಂಬ ನಪುಂಸಕಲಿಂಗರೂಪವು ಕಾವ್ಯವೆಂಬರ್ಥದಲ್ಲಿ ಬಂದುದೆಂಬುದರಲ್ಲಿ ಸಂದೇಹವಿಲ್ಲ. ಆದ್ದರಿಂದ ಕೇಶಿರಾಜನು ಹೇಳುವಂತೆ, 'ವೈದಂಡಿಕಂ' ಎಂಬುದರ ತದ್ಭವವಾದ 'ಬೆದಂಡೆ' ಎಂಬ ಹೆಸರು, ದಂಡೀ ಸಂಪ್ರದಾಯದ ಪ್ರಬಂಧವಲ್ಲವೆಂಬರ್ಥದಲ್ಲಿ ಬಂದದ್ದೆಂದು ನ್ಯಾಯವಾಗಿ ತಿಳಿಯಬೇಕು. ದಂಡೀ ಸಂಪ್ರದಾಯದ ಪ್ರಬಂಧಗಳು