ಪುಟ:ಕೋಟಿ ಚೆನ್ನಯ-ಪಂಜೆ ಮಂಗೇಶರಾವ್.pdf/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

18

ಕೋಟಿ ಚೆನ್ನಯ

ಆಗ ಕಟ್ಟಿಯ ಹಿಂದುಗಡೆಯ ಒಂದು ಹುಲ್ಲು ಗುಡಿಸಲಿನಿಂದ ಒಬ್ಬ ಬ್ರಾಹ್ಮಣನು ಕಟ್ಟೆ ಹತ್ತಿ ಬಂದನು; ಮತ್ತು ಇವರನ್ನು ಕಂಡು ಒಂದು ನಿಮಿಷದವರೆಗೆ ಬೆರಗುಗೊಂಡು, “ನಿಮ್ಮ ಜಾತಿನೀತಿ ಗೊತ್ತಾಗಬೇಕಾಯಿತು” ಎಂದು ಹಗುರವಾಗಿ ಕೇಳಿದನು.

ಕೋಟಿ- “ನಾವು ಜಾತಿಯಲ್ಲಿ ಮುರ್ತೆ ಮಾಡುವವರು .”

ಚೆನ್ನಯ-ನೀತಿಯಲ್ಲಿ ನೂಲು ಹಾಕಿದವರು.”

“ಹಾಗಾದರೆ ತೆಂಕಲ ಮಗ್ಗುಲಲ್ಲಿ ಬನ್ನಿ, ಕಂಚಿನ ಕೈದಂಬೆಯಲ್ಲಿ ನೀರು ಹೊಯ್ಯುತ್ತೇನೆ. ಕೈಕೊಟ್ಟು ಆಸರು ಆರಿಸಿಕೊಳ್ಳಿ' ಎಂದು ಅರವಟ್ಟಿಗೆಯವನು ಸ್ವಲ್ಪ ಧೈರ್ಯದಿಂದ ಹೇಳಿದನು.

ಅದಕ್ಕೆ ಚೆನ್ನಯನು ನೂರು ಕುಲದವರ ಎಂಜಲ ದಂಬೆಯಲ್ಲಿ ನಾವು ಕುಡಿಯುವಂಥವರಲ್ಲ” ಎಂದನು.

ಬ್ರಾಹ್ಮಣನು ಗಾಬರಿಗೊಂಡು “ ನಾನು ಏನು ಮಾಡಲಿ? ” ಎಂದು ದೈನ್ಯದಿಂದ ಹೇಳಿದನು. ಆ ನಮ್ರತೆಯ ಮಾತಿಗೆ ಕೋಟಿಯು “ ನಾವು ಕೈಯೊಡ್ಡುತ್ತೇವೆ' ಎಂದನು.

“ಬೇಡಣ್ಣ ! ನನ್ನ ಕತ್ತಿಯ ಹಿಡಿಯನ್ನು ಹೀಗೆ ಒಡ್ಡು ತ್ತೇನೆ, ನೀರು ಹಾಕಲಿ” ಎಂದು ಹೇಳಿ ಚೆನ್ನಯನು ತನ್ನ ಕತ್ತಿಯ ತುದಿಯನ್ನು ಬಾಯೊಳಗೆ ಇಟ್ಟು, ಅದರ ಹಿಡಿಯನ್ನು ಬ್ರಾಹ್ಮಣನ ಕಡೆಗೆ ಒಡ್ಡಿದನು. ಬ್ರಾಹ್ಮಣನು ನೀರು ಸುರಿದನು, ನೀರಿನ ಒಂದೇ ಒಂದು ತಟುಕು ಕೆಳಗೆ ಬೀಳದಂತೆ ಚೆನ್ನಯನು ನೀರು ಕುಡಿದ ಚಮತ್ಕಾರವನ್ನು ನೋಡಿ, ಆ ಬ್ರಾಹ್ಮಣನು ಆಶ್ಚರ್ಯಗೊಂಡನು.

ಇಬ್ಬರು ಆಸರುಬೇಸರು ಕಳೆದನಂತರ ಕೋಟಿಯು 'ಸ್ವಾಮಿ, ತಾವು ಯಾರು ? ಇಲ್ಲಿ ನಿಮಿತ್ತ ಹೇಳುವವರು ಯಾರಾದರೂ ಇದ್ದಾರೇ ? ಎಂದು ಕೇಳಿದನು.

ಅದಕ್ಕೆ ಬ್ರಾಹ್ಮಣನು "ಬೇಕಾದರೆ ನಾನೇ ಹೇಳುತ್ತೇನೆ' ಎಂದು ಹೇಳಿ ತನ್ನ ಗುಡಿಸಲಿಗೆ ಹೋಗಿ, ಬಿಳಿ ಗೆರೆಯ ಮಂಡಲದ ಮಣೆ, ಕವಡಿ ತುಂಬಿದ ಚೀಲ, ದರ್ಭೆ ಹುಲ್ಲಿನ ಚಾಪೆ- ಇವನ್ನು ಹಿಡಿದುಕೊಂಡು ಬಂದು,