ಪುಟ:ಕೋಟಿ ಚೆನ್ನಯ-ಪಂಜೆ ಮಂಗೇಶರಾವ್.pdf/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸಮಾಪ್ತಿ

63

ಮರುಗಿ, ಆ ಎರಡು ಶವಗಳನ್ನು ಅಲಂಕರಿಸಿ, ತಾನು ತಂದಿದ್ದ ಪಲ್ಲಕಿಗಳಲ್ಲಿ ಇರಿಸಿ, ಮಹಾಸಂಭ್ರಮದಿಂದ ಮೆರವಣಿಗೆ ಮಾಡಿಸಿ, ಬೀಡಿಗೆ ಕೊಂಡುಬಂದನು. ಮರುದಿನ ಹದಿನೆಂಟು ಪೇಟೆಯವರು ಒಂದುಗೂಡಿ ಜಾತಿವಿಧಿಗೆ ಅನುಸಾರವಾಗಿ ಶವಸಂಸ್ಕಾರವನ್ನು ಸಹಿಸಿದರು.

ಯಾವ ಹೊತ್ತಿಗೆ ಕೊಟಿಯ ಆತ್ಮವು ಕಾಯವನ್ನು ಕಳಚಿಬಿಟ್ಟಿತ್ತೋ ಆ ವೇಳೆಗೆ ಸರಿಯಾಗಿ ಪಡುಮಲೆಯ ಬೀಡಿಗೆ ಬೆಂಕಿ ಬಿದ್ದು ಅದು ಸುಟ್ಟು ಬೂದಿಯಾಯಿತು. ವಿಚಾರಮಾಡಿದ್ದಲ್ಲಿ ಬೀಡಿನವರಿಗೆ ಬಹಳ ನಚ್ಚು ಮೆಚ್ಚಿನವನಾಗಿ ನಡೆಯುತಿದ್ದ ಮುದುಕ ಸಾಯಿನಬೈದ್ಯನು ಬೀಡಿನೊಳಗೆ ಯಾರೂ ಇಲ್ಲದ್ದನ್ನು ಕಂಡು, ಪೂರ್ವದ್ವೇಷವನ್ನು ತೀರಿಸುವುದಕ್ಕಾಗಿ ಬೀಡಿಗೆ ಕಿಚ್ಚು ಹಾಕಿದನೆಂತಲೂ, ಬೆಂಕಿಹತ್ತಿದ ತರುವಾಯ ಬೀಡಿನಿಂದ ಬೇರೆಯವರ ಕಣ್ಮರೆಯಾಗಿ ತಪ್ಪಿಸಿಕೊಳ್ಳಲಾರದೆ ಆ ಬೆಂಕಿಯಲ್ಲಿಯೇ ಆತನು ಬಿದ್ದು ಹತನಾದನೆಂತಲೂ ಹೇಳುವರು.

ಎಣ್ಮೂರು ದೇವಬಲ್ಲಾಳನು ಕೋಟಿಚೆನ್ನಯರನ್ನು ಸುಟ್ಟು ಶುದ್ದ ಮಾಡಿಸಿದ್ದಲ್ಲಿ ಅವರ ಸಮಾಧಿಗಳನ್ನು ಕಟ್ಟಿಸಿ, ಗರಡಿಗಳನ್ನು ಏರ್ಪಡಿಸಿದನು. ಆ ದೇವಸ್ಥಾನದ ನಿತ್ಯಾರ್ಚನೆಗೆ ಅಂದು ಕೋಟಿಚೆನ್ನಯರಿಗೆ ಕವಡಿಯಿಟ್ಟು ನಿಮಿತ್ತ ಹೇಳಿದ ಬ್ರಾಹ್ಮಣನನ್ನು ಕರೆತರಿಸಿ, ಅವನಿಗೆ ಉಂಬಳಿಯನ್ನು ಕೊಟ್ಟು, ಕೋಟಿಯ ಮಾತನ್ನು ನಡಿಸಿದನು. ಪೆರುಮಾಳು ಬಲ್ಲಾಳನು ಪಡುಮಲೆಗೆ ಹಿಂದಿರಳಿ ಹೊಸ ಬೀಡನ್ನು ಕಟ್ಟಿಸಿ, ಕೋಟಿಚೆನ್ನಯರ ಕಂಬುಳದ ಗದ್ದೆಯ ಬಳಿಯಲ್ಲಿಯೇ ಅವರ ಗುಡಿಗಳನ್ನು ಅಂದವಾಗಿ ಮಾಡಿಸಿ, ಅಲ್ಲಿ ಅವರ ಬಿಂಬಗಳನ್ನು ಪ್ರತಿಷ್ಠಿಸಿ, ತಾನು ಬದುಕಿರುವಷ್ಟು ಕಾಲ ದಿನಕ್ಕೆ ಮೂರು ಸಲ ಆ ಬಿಂಬಗಳ ದರ್ಶನವನ್ನು ಮಾಡುತಿದ್ದನು.

ಕಾಲಗತಿಯಿಂದ ತುಳುನಾಡಿನಲ್ಲಿ ಬಲ್ಲಾಳರ ಸಂಸ್ಥಾನಗಳು ಆ ಮನೆತನದವರ ಕೈಬಿಟ್ಟು ಹೋದರೂ, ಅವರ ಬೀಡುಗಳು ಪಾಳುಬಿದ್ದು ಮಣ್ಣುಗುಪ್ಪೆಯಾದರೂ, ನಾಲ್ಕು ಶತಮಾನಗಳ ಹಿಂದೆ ತುಳುನಾಡಿನಲ್ಲಿ ಬಿಲ್ಲರ ಪ್ರಭಾವವು ಹೇಗೆ ಇದ್ದಿತೆಂಬುದಕ್ಕೆ ಅನೇಕ ಗ್ರಾಮಗಳಲ್ಲಿ ಕೋಟಿ ಚೆನ್ನಯರಿಗಾಗಿ ಕಟ್ಟಿಸಿದ ಗರಡಿಗಳು ಈಗ ಸಾಕ್ಷಿಗುಡ್ಡೆಗಳಾಗಿವೆ. ಕಾಡಿ ಆಳಿದವರ ಹೆಸರು ಅಳಿಯಿತು; ನಾಡಿನ ಹಿತಕ್ಕಾಗಿ ಕಾದಾಡಿ ಕಾಯ ಬಿಟ್ಟು ಕೈಲಾಸಕ್ಕೆ ಸಂದವರ ಹೆಸರು ಉಳಿಯಿತು.