ಪುಟ:ಕೋಟಿ ಚೆನ್ನಯ-ಪಂಜೆ ಮಂಗೇಶರಾವ್.pdf/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

62

ಕೋಟಿ ಚೆನ್ನಯ

ಪೂಜೆಯಾಗಿ ದೇವಸ್ಥಾನದ ಬ್ರಾಹ್ಮಣನು ಹೊರಕ್ಕೆ ತೆಗೆದುಕೊಂಡು ಬಂದ ಆರತಿಯನ್ನೂ ತೀರ್ಥವನ್ನೂ ಕೋಟಿಯು ಸ್ವೀಕರಿಸಿ ದೇವಬಲ್ಲಾಳನನ್ನು ಹತ್ತಿರಕ್ಕೆ ಕರೆದು, “ಬುದ್ದಿ, ಇನ್ನು ಮುಂದೆ ಸಹಸ್ರಾವಧಿ ಕಾಲ ಈ ಮಹಾಲಿಂಗೇಶ್ವರನ ಪೂಜೆಯು ನಡುಮಲೆಯಲ್ಲಿ ಅರವಟ್ಟಿಗೆ ಇಟ್ಟಿರುವ ಆ ಬ್ರಾಹ್ಮಣರ ಕೈಯಿಂದ ನಡೆಯಿಸಬೇಕು” ಎಂದು ನಂಬಿಗೆಯನ್ನು ತೆಗೆದುಕೊಂಡು, “ಬಾಯಿಗೆ ತೀರ್ಥವನ್ನು ಹೊಯ್ದು ಬಿಡಿ” ಎಂದು ಸೂಚಿಸಿ, ಬಾಯಿತೆರೆದನು.

ದೇವಬಲ್ಲಾಳನೂ ಪೆರುಮಾಳು ಬಲ್ಲಾಳನೂ ಆತನ ಒಂದೊಂದು ಪಕ್ಕದಲ್ಲಿ ಕುಳಿತುಕೊಂಡು ಕೆಂದಾಳೆ ಎಳನೀರನ್ನು ಒಂದಿಷ್ಟು ಆತನ ಬಾಯಿಗೆ ಹೊಯ್ದರು. ಕೋಟಿಯು ಆ ಇಬ್ಬರು ಬಲ್ಲಾಳರ ಕೈಗಳನ್ನು ತನ್ನ ಕೈಗಳಿಂದ ಜೋಡಿಸಿ ಬಿಗಿಹಿಡಿದು, “ಮುಂದೆ ನೀವು ಕೈಗೂಡಿ ಬದುಕುವುದು ಒಳ್ಳೆಯದು” ಎಂದು ಹೇಳಿ, ಕಣ್ಣು ಮುಚ್ಚಿದನು; ಮುಚ್ಚಿದ ಕಣ್ಣು ಮತ್ತೆ ತೆರೆಯಲೇ ಇಲ್ಲ.

ಕೋಟಿಯು ಪರಂಧಾಮಕ್ಕೆ ಹೋಗುವುದನ್ನು ಕಂಡು ಚೆನ್ನಯನು “ಅಣ್ಣನನ್ನು ಬಿಟ್ಟು ನಾನೇತಕ್ಕೆ ಬಾಳಲಿ ? ಹುಟ್ಟುವಾಗ ಒಟ್ಟಿಗೆ ಹುಟ್ಟಿದವರು ಹೋಗುವಾಗ ಒಟ್ಟಿಗೆ ಹೋಗಬೇಕಷ್ಟೆ, ಅಣ್ಣ, ನಾನು ನಿಮ್ಮ ಬೆನ್ನ ಹಿಂದೆಯೆ ಬಂದೆ” ಎಂದು ಹೇಳಿ ಆ ದೇವಸ್ಥಾನದ ಮುಂದುಗಡೆ ಯಲ್ಲಿದ್ದ ಬಾವಿಯ ಬಾಯಿಕಲ್ಲಿಗೆ ತನ್ನ ತಲೆಯನ್ನು ತಾಟಾಡಿಸಿದನು. ಚೆಂದುಗಿಡಿಯ ಕತ್ತಿಯ ತಿವಿತದಿಂದ ರಕ್ತಹೋಗಿ ಮೊದಲೇ ಜರ್ಜರಿತವಾದ ಆತನ ಶಿರಸ್ಸಿನ ಒಳಗಿಂದ ಬಿಳಿ ಮೆದುಳಿನ ಮಾಲೆಯೊಂದು ಹೊರಬಂದು ದೇವಸ್ಥಾನದ ಬಲಿಪೀಠದಲ್ಲಿ ಇಟ್ಟಿದ್ದ ಮಲ್ಲಿಗೆಯ ಸರದಂತೆ ಕಲ್ಲಿನ ಮೇಲೆ ಬಿತ್ತು; ಅದರೊಂದಿಗೆ ಆತನ ಆತ್ಮವು ಮೇಲಕ್ಕೇರಿ ಹೋಯಿತು. ಕೂಡಲೆ ಆ ಶಿವಾಲಯದ ಒಳಗೆ ಉರಿಯುತ್ತಲಿದ್ದ ದೀಪಗಳೆಲ್ಲಾ ತಮ್ಮಷ್ಟಕ್ಕೆ ಆರಿ ಹೋದುವು; ಒಂದು ಗಳಿಗೆಯ ತನಕ ಗುಡುಗುಮಿಂಚುಗಳು ತೋರಿದುವು; ಒನಕೆಯ ಧಾರೆಯಲ್ಲಿ ಮಳೆಹೊಯ್ದು ತಟ್ಟನೆ ತಾನಾಗಿ ನಿಂತುಹೋಯಿತು.

ದೇವಬಲ್ಲಾಳನು “ಹಾ! ಹಾ! ವಿಧಿಯೇ ! ಇಂದಿಗೆ ನನ್ನ ರಾಜ್ಯದಲ್ಲಿದ್ದು ನನ್ನನ್ನು ಕಾಪಾಡಿದ ಆನೆಗಳೆ ಬಿದ್ದು ಹೋದುವೆಂದು ಮುಮ್ಮಲ