ಪುಟ:ಕೋಟಿ ಚೆನ್ನಯ-ಪಂಜೆ ಮಂಗೇಶರಾವ್.pdf/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅಂತಿಮಕಾಲ

61

ತಮ್ಮ ಅಡಿಯಾಳಾದ ನನ್ನನ್ನು ಕಾಯಬೇಕು. ನನ್ನ ಹಣೆಯನ್ನು ಕಡಿದು ತಮಗೆ ಮಣೆಯನ್ನಾಗಿ ಇಟ್ಟರೂ ತಮ್ಮ ಉಪಕಾರವನ್ನು ತೀರಿಸಲಾರೆನು. ಇನ್ನು ತಾವು ಈ ರಣಭೂಮಿಯನ್ನು ಬಿಟ್ಟು, ಈ ಪಲ್ಲಕಿಗಳಲ್ಲಿ ಓಲಗವಾಗಿ, ಬೀಡಿನ ಚಾವಡಿಗೆ ದಯಮಾಡಿಸಿ, ನನ್ನ ರಾಜ್ಯವನ್ನೆಲ್ಲಾ ಉದ್ಧರಿಸಬೇಕು” ಎಂದು ಭಕ್ತಿಪೂರ್ವಕವಾಗಿ ಬೇಡಿಕೊಂಡನು.

ಅಷ್ಟರಲ್ಲಿ ಪೆರುಮಾಳು ಬಲ್ಲಾಳನು ಮುಂದಕ್ಕೆ ಬಂದು ತನ್ನ ಕೈಗಳನ್ನು ಹಣೆಯ ಮೇಲೆ ಇಟ್ಟು ಕೊಂಡು, “ನಾನು ಸಾಕಿದ ಮರಿಗಳ ಮೇಲೆ ಕೈಮಾಡಿದ ಪಾಪಿ ನಾನು ! ಈ ಪಾಪಕ್ಕೆ ಇದೇ ಪ್ರಾಯಶ್ಚಿತ್ತ" ಎಂದು ಹೇಳಿ ತನ್ನ ಕೈಯಲ್ಲಿದ್ದ ಸುರಗಿಯು ತನ್ನ ಹೊಟ್ಟೆಯೊಳಗೆ ಚುಚ್ಚಿಕೊಳ್ಳುವಷ್ಟರಲ್ಲಿ ಕೋಟಿಯು “ಬೇಡ ಬುದ್ದಿ - ಕೈ ತಡೆಯಿರಿ” ಎಂದು ಸಂಜ್ಞೆ ಮಾಡಿದನು.

ಆಗ ಚೆನ್ನಯನು ಎದ್ದು ಪೆರುಮಾಳು ಬಲ್ಲಾಳನ ಕೈಯಲ್ಲಿದ್ದ ಸುರಗಿಯನ್ನು ಕಸಕೊಂಡನು.

ಇತ್ತ ಕೋಟಿಯ ಮೈರಕ್ತದ ಪ್ರವಾಹದಲ್ಲಿ ಆತನ ಪ್ರಾಣವು ಮುಳು ಗೇಳುತ್ತಲಿತ್ತು. ಅವನು ತಮ್ಮನೊಡನೆ “ನನ್ನನ್ನು ಈ ಶಿವಾಲಯದ ಇದಿರಾಗಿ ಮಲಗಿಸಿಬಿಡು ಎಂದು ಹೇಳಿ, ಆಕಾಶದ ಕಡೆಗೆ ದೃಷ್ಟಿಯನ್ನು ತಿರುಗಿಸಿ “ಚೆನ್ನಯ, ಈ ದಿನ ಸುಬ್ರಹ್ಮಣ್ಯ ಜಾತ್ರೆ. ದೇವರು ರಥಾರೋಹಣ ವಾಗಿದ್ದಾರೆ. ಗರುಡಪಕ್ಷಿಯು ತನ್ನ ರೆಕ್ಕೆಗಳನ್ನು ಬಿಚ್ಚಿ ಮಂಡಲಾಕಾರವಾಗಿ ರಥದ ಮೇಲೆಯೇ ಆಕಾಶದಲ್ಲಿ ಸುತ್ತುವಂತೆ ಈ ಕಾಯಬಿಟ್ಟು ಕೈಲಾಸಕ್ಕೆ ಹೋಗಲು ನನ್ನ ಆತ್ಮವು ಹಾರೈಸುತ್ತಲಿದೆ. ಆದರೆ ನನಗೆ ಸ್ವರ್ಗಕ್ಕೆ ನೀರು ಕೊಡುವ ಮುಂಚೆ ದೇವಸ್ಥಾನದಲ್ಲಿ ಪೂಜೆಯಾಗಲಿ !” ಎಂಬ ಮಾತುಗಳನ್ನು ಮೆಲ್ಲನೆ ಒಂದೊಂದಾಗಿ ಹೇಳಿದನು.

ಸೂರ್ಯನು ಅಸ್ತಕ್ಕೆ ಹೋದನು, ದೇವಸ್ಥಾನದಲ್ಲಿ ಘಂಟಾನಾದವು ಕೇಳಿಸಿತು, ಪೂಜೆಗೆ ಪ್ರಾರಂಭವಾಯಿತು. ಮುಂಚಿನ ಕಾಲದಲ್ಲಿ ಎಂಥಾ ಭಯಂಕರ ಯುದ್ಧವು ನಡೆಯುತ್ತಲಿದ್ದರೂ ದೇವಸ್ಥಾನದ ಪೂಜಾವಿಧಿಗಳಿಗೆ ಇತ್ತಂಡದವರಿಂದಲೂ ಅಡ್ಡಿಯಾಗುತ್ತಿರಲಿಲ್ಲ.