ಪುಟ:ಕೋಟಿ ಚೆನ್ನಯ-ಪಂಜೆ ಮಂಗೇಶರಾವ್.pdf/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

60

ಕೋಟಿ ಚೆನ್ನಯ

ಕೋಟಿ- “ ತಮ್ಮಾ! ತಲೆಗೆ ಏರಿದೆ ಚಿತ್ರಬಾಣ; ಎದೆಯನ್ನು ಸೀಳಿದೆ ಶಿಳೀಮುಖ; ಕಣ್ಣಿಗೆ ಬೀಸಿದೆ ಅರಸಿನ ಹುಡಿ ಎಂದು ಅಸ್ಪುಟವಾಗಿ ಹೇಳಿ, ಕೂಡಲೆ “ ತಮಾ-ನೀನು ಯಾವಾಗಲೂ ಹಿಂದುಮುಂದು ನೋಡುವುದಿಲ್ಲ. ಅಕೊ ! ನಿನ್ನ ಬೆನ್ನ ಹಿಂದೆ” ಎಂದು ಕೈಸನ್ನೆ ಮಾಡಿದನು.

ಆ ಹೊತ್ತಿಗೆ ಸರಿಯಾಗಿ ಒಬ್ಬನು ಚೆನ್ನಯನ ಬೆನ್ನ ಹಿಂದೆ ಕಳ್ಳ ಹೆಜ್ಜೆಯಿಂದ ನುಸುಳಿಕೊಂಡು ತನ್ನ ಕತ್ತಿಯನ್ನು ಆತನ ಕೊರಳಿಗೆ ಇಟ್ಟಿದ್ದನು.

ತಕ್ಷಣವೇ ಚೆನ್ನಯನು ಮೋರೆಯನ್ನು ತಿರುಗಿಸಿ, ಇದ್ದಲ್ಲಿಂದ ಫುಟ ನೆಗೆದು “ಅಣ್ಣಾ ! ಇದು ನೆಗಳೆ; ಹರಿದು ಬಂದು ಕಚ್ಚುವ ಸ್ವಭಾವದ್ದು. ಕಣ್ಣಿಂದ ಕಾಣಲಿಕ್ಕಿಲ್ಲ, ಕೈಯಿಂದ ಮುಟ್ಟಲಿಕ್ಕಿಲ್ಲ ಎಂಬಂತೆ ಹಿಂದುಗಡೆಯಿಂದ ಬಂದಿದೆ” ಎಂದು ಹೇಳಿ, ತುಂಟ ಕುದುರೆಯಂತೆ ಕಾಲಿನಿಂದ ಒದೆದು ಬಿಟ್ಟನು. ಆ ಏಟು ಸಿಡಿಲಿನಂತೆ ಚೆಂದುಗಿಡಿಯ ಕಪಾಲಕ್ಕೆ ಬಿದ್ದು ಅವನು ಕಾಯಬಿಟ್ಟು ಸಂದನು.

ಚಂದುಗಿಡಿಯು ಸತ್ತದ್ದೇ ತಡ, ಅವನ ಸೈನಿಕರು ಕೊಳುಗುಳವನ್ನು ಬಿಟ್ಟು ಓಡತೊಡಗಿದರು. ಹೊತ್ತು ತಲೆಗೆ ಬರುವಷ್ಟರಲ್ಲಿ ಯುದ್ಧವು ಮುಗಿಯಿತು. ಯುದ್ಧದ ಜಯಧ್ವನಿಯು ಎಣ್ಮೂರು ಬೀಡಿಗೆ ಮುಟ್ಟಿತು. ಆಗ ದೇವಬಲ್ಲಾಳನು ಆ ವೀರರನ್ನು ಮಹಾಸಂಭ್ರಮದಿಂದ ಕಾಣುವುದಕ್ಕಾಗಿ ಪಟ್ಟದ ಜೋಡಿ ಕುದುರೆಗಳನ್ನೂ ಎರಡು ಪಲ್ಲಕಿಗಳನ್ನೂ ಸಿಂಗರಿಸಿಕೊಂಡು ಕಾಲ್ನಡೆಯಾಗಿ ಬಂದು, ದೇವಸ್ಥಾನದ ಮುಂದುಗಡೆಯ ಬಾಕಿಮಾರು ಗದ್ದೆಯಲ್ಲಿ ಗಾಯಗೊಂಡು ಬಿದ್ದಿದ್ದ ಕೋಟಿ, ಅವನ ಕಡೆಗಾಲದ ಸೇವೆ ಮಾಡುತ್ತಲಿದ್ದ ಚೆನ್ನಯ, ಇವರಿಬ್ಬರ ಹಿಂದುಗಡೆಯಲ್ಲಿ ಪಶ್ಚಾತ್ತಾಪದ ಮುಖಮುದ್ರೆಯಿಂದ ಮಾತಿಲ್ಲದೆ ನಿಂತಿದ್ದ ಪೆರುಮಾಳು ಬಲ್ಲಾಳ-ಈ ಮೂವರನ್ನು ಕಂಡನು. ಉಭಯಪಕ್ಷದ ಅನೇಕ ಸೈನಿಕರು ರಣರಂಗದಲ್ಲಿ ಮಡಿದು ಬಿದ್ದಿದ್ದರು. ಉಳಿದವರು ಪ್ರಾಣವನ್ನು ಕೈಯಲ್ಲಿ ಹಿಡಿದುಕೊಂಡು ಓಡಿ ಹೋಗಿದ್ದರು.

ದೇವಬಲ್ಲಾಳನು ಕೋಟಿಚೆನ್ನಯರನ್ನು ಕಂಡು, ಅವರ ಕಾಲಿಗೆ ಅಡ್ಡ ಬಿದ್ದು ನಮಸ್ಕರಿಸಿ, “ನನ್ನನ್ನೂ ನನ್ನ ಬೀಡನ್ನೂ ಕಾಪಾಡಿದ ಬಂಟರು ತಾವು.