ಪುಟ:ಕೋಟಿ ಚೆನ್ನಯ-ಪಂಜೆ ಮಂಗೇಶರಾವ್.pdf/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಯುದ್ಧ

59

ಹೊತ್ತು ಎರಡು ಮಾರು ಏರುವಷ್ಟರಲ್ಲಿ ಇತ್ತಂಡದವರಿಗೆ ಮುಖ ಸಂಧಿಸಿ ಜಗಳಕ್ಕೆ ಪ್ರಾರಂಭವಾಯಿತು. ಇಕ್ಕಡೆಯವರು ಎಸೆದ ಬಾಣಗಳಿಂದ ಅನೇಕರು ಮಡಿದುಬಿದ್ದರು. ಮೂರುಮುಕ್ಕಾಲು ಗಳಿಗೆಯಲ್ಲಿ ಪಂಜದ ಕೇಮರ ಬಲ್ಲಾಳನು ಏರಿದ್ದ ಕುದುರೆಯ ಕಣ್ಣಿಗೆ ಬಾಣವು ತಗಲಿ, ಬಲ್ಲಾಳನು ಕುದುರೆಯಿಂದ ಕೆಳಕ್ಕೆ ಬಿದ್ದು, ಯುದ್ಧರಂಗದಿಂದ ಓಡಿ ಹೋದನು. ಎಣ್ಮೂರಿನ ಕಡೆಯಿಂದ ಯುದ್ಧ ಮಾಡುತಿದ್ದ ಮಂಜುಹೆಗ್ಗಡೆ ಎಂಬ ವೀರನು ಜಖಂ ಆಗಿ ಅಲ್ಲಿಯೆ ಮೃತನಾದುದನ್ನು ಕಂಡು ಎಣ್ಮೂರಿನವರು ಹಿಮ್ಮೆಟ್ಟಿ ಪಲಾಯನದ ಮಾರ್ಗವನ್ನು ನೋಡುತಿದ್ದರು. ಆ ಹೊತ್ತಿಗೆ ಸರಿಯಾಗಿ ಪೆರುಮಾಳ ಬಲ್ಲಾಳನೂ ಚೆಂದುಗಿಡಿಯೂ ತಮ್ಮ ತಮ್ಮ ಕುದುರೆ ಗಳನ್ನು ದೌಡಾಯಿಸಿಕೊಂಡು, ಮುಂದೊತ್ತಿ ಬರುವಂಥವರಾದರು. ಎಣ್ಮೂರಿನವರು ಕಾಲಿಗೆ ಬುದ್ದಿ ಹೇಳತೊಡಗಿದರು.

ಎಣ್ಮೂರಿನ ಜನಗಳು ನಿಂದು ನಿತ್ತರಿಸಲಾರದೆ ಹಿಂದೆಗೆದು ಹೋಗುವುದನ್ನು ಕೋಟಿಚೆನ್ನಯರು ಕಂಡು ತಮ್ಮ ಕತ್ತಿಗಳನ್ನು ಜಳಪಿಸುತ್ತ ಇರಿಸಿಕೊಂಡು ಬಂದವರನ್ನು ತಮ್ಮ ಖಡ್ಗಕ್ಕೆ ಆಹುತಿಯನ್ನಾಗಿ ಮಾಡುತ್ತ, ಓಡಿಹೋಗುವವರನ್ನು ಮುಖತಿರುಹಿ ಯುದ್ಧ ಮಾಡಬೇಕೆಂದುಹುರಿಗೊಳಿಸುತ್ತ, ಬಾಕಿಮಾರು ಗದ್ದೆಗೆ ಬಂದರು. ಅಷ್ಟರಲ್ಲಿ ಶತ್ರು ಸೈನ್ಯದ ೨೦೦ ಜನರು ಅವರನ್ನು ಮುಸುಕಿ ಮುತ್ತಿದರು.

ತಮ್ಮನ್ನು ಬಳಸಿಕೊಂಡು ನಿಂತಿದ್ದ ಹಗೆಯವರನ್ನು ಕಂಡು ಕೋಟಿಚೆನ್ನಯರು ಬೆನ್ನಿಗೆ ಬೆನ್ನು ಕೊಟ್ಟು ನಿಂತು, ಸುತ್ತು ಮುತ್ತಲಿಂದ ಬರ ತಕ್ಕ ಏಟುಗಳನ್ನು ಒಂದು ಗಳಿಗೆಯ ವರೆಗೆ ತಪ್ಪಿಸಿಕೊಂಡರು. ತರುವಾಯ ಅವರಿಬ್ಬರು ಕಬ್ಬಿನ ತೋಟಕ್ಕೆ ಬಿದ್ದ ಮರಿಯಾನೆಗಳಂತೆಯೂ, ಕುರಿ ಹಿಂಡನ್ನು ನುಗ್ಗಿದ ಹುಲಿಮರಿಗಳಂತೆಯೂ ಶತ್ರುಗಳನ್ನು ಕೈಗೆ ಸಿಕ್ಕಂತೆ ಕೊಲ್ಲುತ್ತ ರಣಭಯಂಕರರಾಗಿ ಯುದ್ಧ ಮಾಡುತಿದ್ದಾಗ ಒಂದು ಚಿತ್ರ ಬಾಣವು ಕೋಟಿಯ ಅಪಾಯಸ್ಥಾನಕ್ಕೆ ತಗಲಿ, ಅವನನ್ನು ಕಲ್ಲು ಗೊಂಬೆಯಂತೆ ಮಾಡಿಬಿಟ್ಟಿತು.

ಅದನ್ನು ಕಂಡು ಚೆನ್ನಯನು- ಅಣ್ಣಾ ! ಕಾಲು ತಿರುಗಿಸಿ, ಕಾಲು ತಿರುಗಿಸಿ” ಎಂದು ಚೀರಿದನು.