ಪುಟ:ಕ್ರಾಂತಿ ಕಲ್ಯಾಣ.pdf/೧೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೦೨

ಕ್ರಾಂತಿ ಕಲ್ಯಾಣ

ಅಗ್ಗಳನು ಭಕ್ತಿನಮ್ರನಂತೆ ತಲೆಬಾಗಿ ವಂದಿಸಿದನು. ಸ್ತಂಭಿತರಂತೆ ಅಗ್ಗಳನನ್ನೇ ನೋಡುತ್ತಿದ್ದ ಗುರುಶಿಷ್ಯರು ಪ್ರತಿವಂದನೆ ಮಾಡಲು ಕೆಲವು ಕ್ಷಣಗಳಾದವು.

ಜಗದೇಕಮಲ್ಲನು ಹೆಗ್ಗಡೆಯ ಕಡೆ ತಿರುಗಿ, "ನಾಳೆ ಪ್ರವಚನ ನಡೆಯುವಾಗ ಕರ್ಣದೇವರಸರೂ ಎದುರಿಗಿದ್ದರೆ ಒಳ್ಳೆಯದು. ಅವರಿಗೆ ಈ ವಿಚಾರ ತಿಳಿಸು,” ಎಂದನು.

"ಕರ್ಣದೇವರಸರು ಮಂಗಳವೇಡೆಯಿಂದ ಇನ್ನೂ ಹಿಂದಿರುಗಿಲ್ಲ. ಯಾವಾಗ ಬರುವರೋ ತಿಳಿಯದು" -ಎಂದು ಹೆಗ್ಗಡೆ ಉತ್ತರ ಕೊಟ್ಟನು.

  • * *

ಆ ದಿನ ಅಪರಾಹ್ನ ಮನೆ ಹೆಗ್ಗಡೆ ಬ್ರಹ್ಮಶಿವನನ್ನು ಅರಮನೆಯ ಚಾವಡಿಗೆ ಕರೆಸಿಕೊಂಡು ರಾಜಗೃಹದ ನಿಬಂಧನೆಗಳನ್ನು ಓದಿ ಹೇಳಿ,

"ನೀವು ಇಲ್ಲಿರುವವರೆಗೆ ಹೊರಗಿನವರೊಡನೆ ಯಾವ ಸಂಬಂಧವನ್ನೂ ಇಟ್ಟುಕೊಳ್ಳಕೂಡದು. ಕರ್ಣದೇವರಸರ ಅಥವಾ ನನ್ನ ಅನುಮತಿ ಪಡೆಯದೆ ಹೊರಗೆ ಹೋಗಕೂಡದು. ಹೊರಗಿನ ವಿಚಾರಗಳನ್ನು ಪ್ರಭುಗಳಿಗಾಗಲಿ, ಇಲ್ಲಿಯ ವಿಚಾರಗಳನ್ನು ಹೊರಗಿನವರಿಗಾಗಲಿ, ತಿಳಿಸಕೂಡದು,” ಎಂದು ಹೇಳಿದನು.

"ನಾನು ಗುರುದೇವರ ಸೇವೆಗಾಗಿ ಸಂಗಡ ಬಂದಿದ್ದೇನೆ, ಹೆಗ್ಗಡೆಗಳೆ. ಅನ್ಯವಿಚಾರಗಳು ನಮಗೇಕೆ?” -ಎಂದು ಬ್ರಹ್ಮಶಿವನು ಉದಾಸೀನದಿಂದ ಉತ್ತರ ಕೊಟ್ಟನು.

"ಗುರುದೇವರಿಗೂ ಈ ವಿಚಾರ ತಿಳಿಸಿದ್ದರೆ ಒಳ್ಳೆಯದು."

"ದಿನದಲ್ಲಿ ಆರು ಪ್ರಹರಗಳ ಕಾಲ ಅವರು ಮೌನ. ಧ್ಯಾನ ಶಿವಪೂಜೆಗಳಲ್ಲಿ ಹೆಚ್ಚು ಹೊತ್ತು ಕಳೆಯುತ್ತಾರೆ. ಶಾಸ್ತಧರ್ಮಗಳ ಹೊರತಾಗಿ ಅವರು ಬೇರೆ ವಿಷಯಗಳನ್ನು ಪ್ರಸ್ತಾಪಿಸುವುದಿಲ್ಲ."

"ಹಾಗಾದರೆ ನಿಬಂಧನೆಯಂತೆ ನಡೆಯಲು ನಿಮಗಾವ ತೊಂದರೆಯೂ ಇಲ್ಲವಷ್ಟೇ?"

ಬ್ರಹ್ಮಶಿವನು ಯೋಚಿಸಿ, "ಗುರುಗಳ ಶಿವಪೂಜೆಗಾಗಿ ಬಿಲ್ವಪತ್ರೆ ತರಲು ನಾನು ದಿನಕ್ಕೊಂದು ಸಾರಿ ಹೊರಗೆಹೋಗಬೇಕಾಗುತ್ತದೆ. ಅದಕ್ಕೆ ಅನುಮತಿ ಕೊಟ್ಟರೆ ಸಾಕು,” ಎಂದನು.

"ಪೂಜೆಗೆ ಬೇಕಾಗುವ ಪತ್ರಪುಷ್ಟಗಳನ್ನು ನಾನು ತರಿಸಿಕೊಡುತ್ತೇನೆ."

"ಮಹಮನೆಯ ಅಂಗಣದಲ್ಲಿರುವ ಬಿಲ್ವಮರದಿಂದ ಕೊನೆ ಮುರಿಯದ ಪತ್ರಗಳನ್ನು ಆರಿಸಿ ತರಬೇಕಾಗುವುದು. ಅದು ನಿಮ್ಮ ಭಟರಿಗೆ ಸಾಧ್ಯವಲ್ಲ."