ಪುಟ:ಕ್ರಾಂತಿ ಕಲ್ಯಾಣ.pdf/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸಿರಿಮನೆಯ ಕತ್ತಲೆಗೆ ಗುರುಮನೆಯ ದೀಪ

೧೦೧

ಅವುಗಳಲ್ಲಿ ಬಿಡುಗಡೆಯಾಗುವ ಉದ್ದೇಶದಿಂದ ಧರ್ಮವನ್ನು ಆಶ್ರಯಿಸಿದ್ದೇನೆ. ಧರ್ಮೋಪದೇಶಕರಾಗಿ ಬಂದ ನೀವು ನನ್ನ ಭಾಗಕ್ಕೆ ಬ್ರಹೋಪದೇಶಕರಾದರೆ ಸಂತೋಷ," ಎಂದನು.

ಗಡ್ಡಮೀಸೆ ಜಟೆಗಳ ಮರೆಯಲ್ಲಿಯೂ ಜಗದೇಕಮಲ್ಲನು ತನ್ನ ಗುರುತು ಹಿಡಿದನೆಂದು ಬೊಮ್ಮರಸನು ತಿಳಿದನು. ಆದರೆ ಬಿಜ್ಜಳನ ಕಾರಾಗೃಹದಿಂದ ತನ್ನ ಬಿಡುಗಡೆ, ಚಾಲುಕ್ಯ ರಾಜಕೀಯದಲ್ಲಿ ತನ್ನ ಪಾತ್ರ, ತಾನು ಕಲ್ಯಾಣದಲ್ಲಿರುವುದು, ಈ ವಿಚಾರಗಳು ಗೃಹಬಂಧನದಲ್ಲಿದ್ದ ಚಾಲುಕ್ಯ ಅರಸನಿಗೆ ತಿಳಿದದ್ದು ಹೇಗೆ? ಹೆಗ್ಗಡೆಯ ಎದುರಿಗೆ ಎಚ್ಚರದಿಂದ ಮಾತಾಡುವುದಗತ್ಯ ಎಂದು ಭಾವಿಸಿ ಬೊಮ್ಮರಸನು,

"ಪ್ರಭುಗಳ ಮನೋಗತ ನಮಗೆ ತಿಳಿದಿದೆ. ಶೈವಶರಣಧರ್ಮಗಳನ್ನು ಸಮಗ್ರವಾಗಿ ಬೋಧಿಸುವ ಸೂತಸಂಹಿತೆಯನ್ನು ಪ್ರಭುಗಳ ಸಮ್ಮುಖದಲ್ಲಿ ಪುರಾಣ ಹೇಳಬೇಕೆಂಬುದು ನಮ್ಮ ಉದ್ದೇಶ. ಅಪ್ಪಣೆಯಾದರೆ ಇಂದೇ ಪ್ರಾರಂಭಿಸುತ್ತೇನೆ" ಎಂದು ಕೈಯ್ಯಲ್ಲಿದ್ದ ಹೊತ್ತಗೆಯ ಕಟ್ಟುಗಳನ್ನು ಬಿಚ್ಚಿದನು.

ಆಮೇಲೆ ಅರ್ಧ ಪ್ರಹರಕಾಲ ಪ್ರವಚನ ನಡೆದು ಬೊಮ್ಮರಸನು ಸಂಹಿತೆಯ ಪದ್ಯಗಳನ್ನು ಓದಿ ಅರ್ಥ ಹೇಳಿದನು. ಗಂಭಿರವಾಗಿ ಎದುರಿಗೆ ಕುಳಿತು ಕೇಳುತ್ತಿದ್ದ ಮನೆಹೆಗ್ಗಡೆಗೆ ಬ್ರಹ್ಮೇಂದ್ರ ಶಿವಯೋಗಿಯ ಬಗೆಗೆ ಗೌರವ ಮೂಡಿತು. "ಇಂತಹ ಧರ್ಮನಿಷ್ಠ ವಿರಕ್ತನ ಹತ್ತಿರ ರಾಜಕೀಯ ಸುಳಿಯುವ ಸಂಭವವೂ ಇರುವುದಿಲ್ಲ," ಎಂದು ನಿರ್ಧರಿಸಿಕೊಂಡನು.

ಬೀಳ್ಕೊಡುವ ಮುನ್ನ ಜಗದೇಕಮಲ್ಲನು, "ಇದೇ ರೀತಿ ಪ್ರತಿದಿನ ಒಂದು ಪ್ರಹರಕಾಲ ತಮ್ಮ ಬೋಧಾಮೃತವನ್ನು ಕರಣಿಸಬೇಕಾಗಿ ಬೇಡುತ್ತೇನೆ. ಅಪರಾಹ್ನ ಅದಕ್ಕೆ ಸರಿಯಾದ ಕಾಲ. ನಾಳಿನಿಂದ ನಮ್ಮ ಕಾವ್ಯೋಪದೇಶಕರು ಪದ್ಯಗಳನ್ನು ಓದುವರು. ನೀವು ಅರ್ಥವಿಸಿದರೆ ಸಾಕು," ಎಂದನು.

ಸೂಚನೆಯರಿತು ಸುಖಾಸನದ ಹಿಂದೆ ಮರೆಯಲ್ಲಿದ್ದ ಅಗ್ಗಳನು ಮುಂದೆ ಬಂದನು.

"ಇವರು ನಮ್ಮ ಕಾವ್ಯೋಪದೇಶಕ, ಪಂಡಿತಕವಿ ಅಗ್ಗಳದೇವ. ಇವರು ನಮ್ಮ ಧರ್ಮೋಪದೇಶಕರಾದ....ಗುರುದೇವ....." ಹೆಸರುಗಳನ್ನು ಮರೆತವನಂತೆ ಜಗದೇಕ ಮಲ್ಲನು ಅರ್ಧದಲ್ಲಿ ನಿಂತನು.

"....ಬ್ರಹ್ಮೇಂದ್ರ ಶಿವಯೋಗಿಗಳು. ಇವರು ಗುರುಗಳ ಅಂತೇವಾಸಿ ಹರೀಶರುದ್ರ" ಎಂದು ಹೆಗ್ಗಡೆ ಪರಿಚಯ ಮುಗಿಸಿದನು.