ಪುಟ:ಕ್ರಾಂತಿ ಕಲ್ಯಾಣ.pdf/೧೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸಿರಿಮನೆಯ ಕತ್ತಲೆಗೆ ಗುರುಮನೆಯ ದೀಪ

೧೦೯

ಜೋಳಿಗೆಯ ತುಂಬ ಪತ್ರೆ ತುಂಬಿರಲಿ. ಹೋಗುವಾಗ ಬರುವಾಗ ದಾರಿಯಲ್ಲಿ ಯಾರ ಸಂಗಡಲೂ ಮಾತಾಡಬಾರದು. ರಾಜಗೃಹದ ಸುತ್ತ ಬಿಜ್ಜಳನ ಬೇಹುಗಾರರು ಸುಳಿದಾಡುತ್ತಾರೆ."

"ಆಜ್ಞೆ. ಪ್ರಭುಗಳು ಹೇಳಿದಂತೆ ಮಾಡುತ್ತೇನೆ."

"ದೇವಗಿರಿಯಿಂದ ಸುದ್ದಿ ಬರುವವರೆಗೆ ನಾವೇನೂ ಮಾಡುವಂತಿಲ್ಲ. ದಾಸೋಹ ನಡೆಯುವಾಗ ರಾಜಗೃಹದಲ್ಲಿ ಹೆಚ್ಚು ಸಂದಣಿಯಿರುತ್ತದೆ. ಅನೇಕ ಮಂದಿ ಜಂಗಮರು ಬರುತ್ತಾರೆ. ನೀವು ಅವರಲ್ಲಿ ಯಾರೊಡನೆಯೂ ಮಾತಾಡಬಾರದು. ಪ್ರತಿದಿನ ದಾಸೋಹ ಪ್ರಾರಂಭವಾಗಿ ಮುಗಿಯುವವರೆಗೆ ನಿಮ್ಮ ಬಿಡಾರದಲ್ಲಿಯೇ ಇದ್ದುಬಿಟ್ಟರೆ ಒಳ್ಳೆಯದು. ದಾಸೋಹದ ಕೊನೆಯ ದಿನ ನಾನು ಅತಿಥಿಗಳಿಗೆ ದರ್ಶನ ಕೊಡುತ್ತೇನೆ, ಆಗ ಮಾತ್ರ ನೀವು ನನ್ನ ಪರಿವಾರದ ಸಂಗಡಿರಬಹುದು. ಮುಂದಿನ ತಿಂಗಳಲ್ಲಿ ಮಂಗಳವೇಡೆಯಲ್ಲಿ ಕುಮಾರ ಸೋಮೇಶ್ವರನ ಪಟ್ಟಾಭಿಷೇಕ ನಡೆಯುತ್ತದೆ. ಆ ಸಮಾರಂಭಗಳನ್ನು ಮುಗಿಸಿಕೊಂಡು ಬಿಜ್ಜಳನು ಕಲ್ಯಾಣಕ್ಕೆ ಹಿಂದಿರುಗುತ್ತಾನೆ. ಆ ಮೇಲೆ ಅವನೇನು ಮಾಡುವನು, ಪ್ರೇಮಾರ್ಣವನ ಉತ್ತರಾಧಿಕಾರ ವಿಚಾರದಲ್ಲಿ ಅವನ ಪ್ರತಿಕ್ರಿಯೆಯೇನು ಎಂಬುದನ್ನು ನೋಡಿಕೊಂಡು ನಾವು ಮುಂದಿನ ಕಾರ್ಯಗಳನ್ನು ನಿರ್ಧರಿಸಬೇಕು. ಅಲ್ಲಿಯವರೆಗೆ ಓಲಗ ಶಾಲೆಯಲ್ಲಿ ಪ್ರತಿದಿನ ಪ್ರವಚನ ನಡೆಯುವುದು. ಅಗ್ಗಳ ಬೊಮ್ಮರಸರಿಗೆ ನೀನು ಪ್ರತ್ಯೇಕವಾಗಿ ಈ ವಿಚಾರಗಳನ್ನು ತಿಳಿಸತಕ್ಕದ್ದು. ನೀವು ಮೂವರು ಒಂದುಗೂಡಿ ಯಾವಾಗಲೂ ಮಾತಾಡಬೇಡಿರಿ. ಅದು ಸಂದೇಹಕ್ಕೆ ಎಡೆಗೊಡುತ್ತದೆ. ನಮ್ಮ ಮೂವರ ನಡುವೆ ನೀನು ಸಂಧಾನಿಯಂತೆ ನಡೆದುಕೊಳ್ಳಬೇಕು. ನಾನು ಹೇಳಿದುದೆಲ್ಲವೂ ನೆನಪಿದೆಯೆ?"

"ನೆನಪಿದೆ."

"ಈಗ ನೀನು ಹೊರಗೆ ಹೋಗಿ ಭಟರಿಗೆ ಹೇಳಿ ಪಸಾಯಿತರನ್ನು ಕರೆಸು."

ಬ್ರಹ್ಮಶಿವನು ಭಟರ ಸಂಗಡ ಮಾತಾಡುತ್ತಿದ್ದಾಗ ಜಗದೇಕಮಲ್ಲನು ಬೊಮ್ಮರಸ ಅಗ್ಗಳರಿಗೆ ಮೆಲುದನಿಯಲ್ಲಿ, "ನಾನು ಬ್ರಹ್ಮಶಿವನಿಗೆ ಎಲ್ಲವನ್ನು ಹೇಳಿದ್ದೇನೆ. ಕೆಲವು ದಿನಗಳು ಸಂಚಿನ ಸಂಬಂಧವಾದ ಮಾತುಕಥೆಗಳು ಅವನ ಮುಖಾಂತರ ನಡೆದರೆ ಒಳ್ಳೆಯದು," ಎಂದು ಹೇಳಿದನು.

ಪಸಾಯಿತರು ಬಂದ ಮೇಲೆ ಕಾವ್ಯೋಪದೇಶಿ ಧರ್ಮೋಪದೇಶಕರಿಗೆ ಫಲ ಪುಷ್ಪ ದಕ್ಷಿಣೆಗಳ ವಿನಿಯೋಗದೊಡನೆ ಪ್ರವಚನ ಮುಗಿಯಿತು.