ಪುಟ:ಕ್ರಾಂತಿ ಕಲ್ಯಾಣ.pdf/೧೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೫೬

ಕ್ರಾಂತಿ ಕಲ್ಯಾಣ


ಕರ್ಣದೇವನು ತಲೆದೂಗಿ, “ಧರ್ಮಾಧಿಕರಣದಲ್ಲಿ ಇಂತಹ ಘಟನೆಯೊಂದರ ವಿಚಾರಣೆ ನಡೆದದ್ದು ನನಗೆ ನೆನಪಿದೆ. ಧರ್ಮಾಧ್ಯಕ್ಷರು ತಾಯಿಯ ಹೇಳಿಕೆಯನ್ನು ಅನುಮೋದಿಸಿ ತೀರ್ಪು ಕೊಟ್ಟರು.” ಎಂದನು.

“ಕುಮಾರ ಪ್ರೇಮಾರ್ಣವನ ತಂದೆ ಯಾರೆಂಬುದನ್ನು ರಾಣಿ ಕಾಮೇಶ್ವರಿ ಖಚಿತವಾಗಿ ಹೇಳಿದ್ದಾರೆ. ಆ ವಿಚಾರದಲ್ಲಿ ಸಂದೇಹಕ್ಕೆ ಎಡೆಯೂ ಇರುವುದಿಲ್ಲ.”

ಅಷ್ಟೇ ನಿರ್ಧಾರಕ ಕಂಠದಿಂದ ಅಗ್ಗಳನೆಂದನು.

“ಏನು ಹೇಳುತ್ತಾಳೆ ಆ ರಾಜಗಣಿಕೆ ?” -ಕರ್ಣದೇವ ಹೌಹಾರಿ ಬಿದ್ದನು. “ಅರಸರು ದಯಮಾಡಿ ಕೊಂಚ ಹೊತ್ತು ಶಾಂತಿಯಿಂದಿದ್ದರೆ ನಿಮ್ಮ ಬಾಯಿಂದಲೇ ಅದನ್ನು ಹೇಳಿಸುತ್ತೇನೆ.” -ಅನುನಯದ ದನಿಯಿಂದ ಅಗ್ಗಳನೆಂದನು.

ಕುತೂಹಲದ ಕೈ ಮೇಲಾಗಿ ಕರ್ಣದೇವನ ಚಡಪಡ ಅಷ್ಟಕ್ಕೇ ಮುಗಿಯಿತು. “ನೀವು ನನ್ನ ಪಾನಗೋಷ್ಠಿಯ ಗೆಳೆಯರು, ಅಗ್ಗಳ. ನಿಮ್ಮ ಮಾತನ್ನು ನಿರಾಕರಿಸುವುದಿಲ್ಲ,” ಎಂದು ಅವನು ಅಮಲೇರಿದವನ ಕ್ಷಣಿಕ ಸಹನೆಯಿಂದ ಸುಮ್ಮನೆ ಕುಳಿತನು.

“ಆ ದಿನ ನೀವು ಚಾಳುಕ್ಯ ಬಿಡಾರಕ್ಕೆ ಹೋಗಿ ಕಾಮೇಶ್ವರೀ ದೇವಿಗೆ ಕಡಗವನ್ನು ಕೊಟ್ಟಮೇಲೆ ಏನಾಯಿತು ಹೇಳಿ ?”

-ಅಗ್ಗಳನ್ನು ಮತ್ತೆ ಕೇಳಿದನು.

“ರಾಣಿ ನನ್ನನ್ನು ಅಂತಃಗೃಹಕ್ಕೆ ಕರೆದುಕೊಂಡು ಹೋದಳು. ಅಲ್ಲಿ ನಾನು ಮಂಚದ ಮೇಲೆ ಕುಳಿತುಕೊಂಡೆ. ರಾಣಿ ದಾಸಿಯನ್ನು ಕರೆದು ಮಧುವನ್ನು ತರುವಂತೆ ಹೇಳಿದಳು. ಇಬ್ಬರೂ ಪಾನ ಮಾಡಿದೆವು.”

“ಪಾನ ಮಾಡಿದವರು ನೀವು, ಕರ್ಣದೇವರಸರೆ. ನಿಮಗೆ ಕಾಣದಂತೆ ಬಟ್ಟಲಿನ ಮಧುವನ್ನು ಕೆಳಗೆ ಚಲ್ಲಿ ರಾಣಿ ಕಾಮೇಶ್ವರಿ ಪಾನದ ನಾಟಕ ಹೂಡಿದಳು.”

“ಇದು ನಿಜವೇ ಅಗ್ಗಳ !”

“ರಾಣಿಗೆ ಕುಡಿಯುವ ಅಭ್ಯಾಸವಿಲ್ಲ. ಎಂದೋ ಯಾವಾಗಲೋ ಕುಡಿದರೆ ಅರ್ಧ ಬಟ್ಟಲು ಮಾತ್ರ. ಇದು ನನಗೆ ಚೆನ್ನಾಗಿ ತಿಳಿದಿದೆ.”

“ಹಾಗಾದರೆ ರಾಣಿ ನನ್ನನ್ನು ವಂಚಿಸಿದಳು !” -ಕರ್ಣದೇವನ ದನಿಯಲ್ಲಿ ವಿಷಣ್ಣತೆ ತಲೆದೋರಿತ್ತು.

“ವಂಚನೆ ಅಷ್ಟಕ್ಕೇ ಮುಗಿಯಲಿಲ್ಲ, ಕರ್ಣದೇವರಸರೆ. ಆಮೇಲೆ ಏನಾಯಿತು ಹೇಳಿರಿ?”

“ಮಧು ಬಹಳ ರುಚಿಯಾಗಿತ್ತು, ನಾಲ್ಕಾರು ಬಟ್ಟಲುಗಳನ್ನು ಕುಡಿದೆ,