ಪುಟ:ಕ್ರಾಂತಿ ಕಲ್ಯಾಣ.pdf/೧೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮಂಗಳವೇಡೆಯ ಅಗ್ನಿದಾಹ

೧೫೫


ಹೇಳುವುದರಲ್ಲಿ ನಿಮ್ಮ ಉದ್ದೇಶವೇನು, ಕರ್ಣದೇವರಸರೆ ?” ಎಂದು ಪ್ರಶ್ನಿಸಿದನು.

ಕರ್ಣದೇವ ಅಟ್ಟಹಾಸದಿಂದ ನಕ್ಕು, “ಕಾಮೇಶ್ವರಿ ಎಂತಹ ಹೆಣ್ಣೆಂಬುದನ್ನುನಿಮಗೆ ತಿಳಿಸುವುದು, ಅಗ್ಗಳ. ಶೀಲವಂತನೆಂಬ ಮುಚ್ಚಿದ ಹುಡುಗನ ಜೀವ ಉಳಿಸಲು ರಾಣಿ ಕಾಮೇಶ್ವರಿ ಒಂದಿರುಳು ಒತ್ತೆಯಾದಳು ನನಗೆ!” ಎಂದು ಉತ್ತರ ಕೊಟ್ಟನು.

“ಗಣಿಕಾವೃತ್ತಿಗಿಳಿದವಳು ರಾಣಿಯಾಗಲಿ, ಸಾಮಾನ್ಯ ಹೆಣ್ಣಾಗಲಿ ಸರಿಯಾದ ಗಿರಾಕಿ ಬಂದಾಗ ಒತ್ತೆಗೆ ನಿಲ್ಲಲೇಬಾಕಾಗುವುದು. ಒತ್ತೆಯ ಹಣದಲ್ಲಿ ಹೆಚ್ಚು ಕಡಿಮೆಯಾಗುವುದೊಂದೇ ಅಂತರ. ನಿಮ್ಮ ಕಥೆಗೆ ಮತ್ತೇನೋ ಉದ್ದೇಶವಿರಬೇಕು,”

-ಎಂದು ಅಗ್ಗಳನೂ ನಕ್ಕನು.

“ಹೌದು ಅಗ್ಗಳ, ಮರೆತಿದ್ದೆ. ಮತ್ತೊಂದು ಉದ್ದೇಶವಿದೆ. ಎಲ್ಲರೂ ಭಾವಿಸಿರುವಂತೆ ಕುಮಾರ ಪ್ರೇಮಾರ್ಣವನು ಜಗದೇಕಮಲ್ಲರಸರ ಔರಸನಲ್ಲ, ನನ್ನ ಔರಸ. ಚಾಲುಕ್ಯ ಕ್ಷೇತ್ರದಲ್ಲಿ ಹುಟ್ಟಿದ ಕಲಚೂರ್ಯ ಕುಡಿ. ಇದನ್ನು ನಿಮಗೆ ತಿಳಿಸಲೆಂದೇ ನಾನು ಈ ಕಥೆ ಹೇಳಿದ್ದು.”

-ಎಂದು ಕರ್ಣದೇವ ಗಹಗಹಿಸಿ ನಗುತ್ತಾ ಮಧುವಿಗಾಗಿ ದಾಸಿಯನ್ನು ಕೂಗಿದನು.

ದಾಸಿ ಓಡಿ ಬಂದು ಬಟ್ಟಲನ್ನು ತುಂಬಿದಳು. ಅಗ್ಗಳನ ಬಟ್ಟಲು ತುಂಬಿರುವುದನ್ನು ಕಂಡಾಗ ಅವಳ ಮುಖದಲ್ಲಿ ಅಸ್ಪುಟ ಮಂದಹಾಸವೊಂದು ಮಿಂಚಿ ಮರೆಯಾಯಿತು.

ದಾಸಿ ಹೋದಮೇಲೆ ಅಗ್ಗಳನು, “ನಿಮ್ಮ ಕಥೆ ಅಷ್ಟಕ್ಕೇ ಮುಗಿಯುವುದಿಲ್ಲ, ಕರ್ಣದೇವರಸರೆ. ಅದಕ್ಕೆ ಅನುಬಂಧವಾಗಿ ಉಪಕಥೆಯೊಂದಿದೆ. ಅದನ್ನು ಕೇಳುವ ಸಹನೆಯಿದೆಯೇ ನಿಮಗೆ?” ಎಂದು ಮೃದುವಾಗಿ ಪ್ರಶ್ನಿಸಿದನು.

“ಕಥೆಗೊಂದು ಉಪಕಥೆ! ಕವಿಯಲ್ಲವೆ ನೀವು? ಹೇಳಿರಿ ಅಗ್ಗಳದೇವ,” -ಎಂದು ಕರ್ಣದೇವ ಬಟ್ಟಲನ್ನು ಬರಿದುಮಾಡಿ ಕೆಳಗಿಟ್ಟನು.

ಅಗ್ಗಳನು ಹಳಿದನು : “ಒಬ್ಬ ಹೆಣ್ಣಿಗೆ ಅನೇಕ ಮಂದಿ ಪತಿಗಳಾಗಬಹುದು. ಗಣಿಕೆಯರಂತೆ ಗೃಹಿಣಿಯರ ವಿಚಾರದಲ್ಲಿಯೂ ಈ ಮಾತು ಅನ್ವಯಿಸುತ್ತದೆ. ನೀತಿ ವಿರುದ್ಧವಾದ ಈ ಬಗೆಯ ಬಹುಪತಿತ್ವ ಶಿಷ್ಟ ಸಮಾಜ ಭಾವಿಸಿರುವಷ್ಟು ಅಪರೂಪವಲ್ಲ. ಅಂತಹ ಹೆಣ್ಣೂಬ್ಬಳಿಗೆ ಮಗು ಹುಟ್ಟಿದಾಗ, ನನ್ನ ಮಗು ! ನನ್ನ ಮಗು! ಎಂದು ಪತಿಗಳೆಲ್ಲ ವಾದ ಹೂಡುತ್ತಾರೆ. ಆಗ ಮಗುವಿನ ತಂದೆ ಯಾರೆಂಬುದನ್ನು ತಾಯಿಯೇ ಹೇಳಬೇಕಲ್ಲವೆ ?”