ಪುಟ:ಕ್ರಾಂತಿ ಕಲ್ಯಾಣ.pdf/೧೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮಂಗಳವೇಡೆಯ ಅಗ್ನಿದಾಹ

೧೬೭


ಕಾಮೇಶ್ವರಿ ಬಿಡಾರದ ಬಾಗಿಲನ್ನು ತೆರೆದು ಹೊರಗೆ ಹೋದಳು. ಉಪ್ಪರಿಗೆಯ ಉದ್ದಕ್ಕೂ ಇದ್ದ ಮುಚ್ಚುದಾರಿ ಜನಶೂನ್ಯ. ದಾರಿಯ ಆ ಕೊನೆಯಲ್ಲಿ ತೂಗುದೀಪವೊಂದು ಮಂದಕಾಂತಿಯಿಂದ ಉರಿಯುತ್ತಿತ್ತು.

ಮೆಲ್ಲನೆ ನಡೆಯುತ್ತಮುಚ್ಚುದಾರಿಯನ್ನು ಹಾದು ಕಾಮೇಶ್ವರಿ ಮೊಗಶಾಲೆಗೆ ಬಂದಳು. ಕೈಪಿಡಿಯ ಕಂಬಕ್ಕೆ ಒರಗಿ ನಿಂತು ಶೂಲದ ಮರವಿದ್ದ ಕಡೆ ನಿಟ್ಟಿಸಿ ನೋಡಿದಳು.

ನವಮಿಯ ಚಂದ್ರನ ಮಂದಕಿರಣಗಳಲ್ಲಿ, ಆಗಾಗ ಶೂಲದ ಮರ ಸ್ಪಷ್ಟವಾಗಿ ಕಾಣುತ್ತಿತ್ತು. ಜೋತಾಡುತ್ತಿದ್ದ ದೇಹ ಗಾಳಿಯಲ್ಲಿ ಅಲುಗಿತು. ಕಾಮೇಶ್ವರಿ ಕಂಪಿಸಿದಳು!

ರಾಣಿ!

ಯಾರೋ ಕೂಗಿದಂತಾಗಿ ಕಾಮೇಶ್ವರಿ ಹಿಂದಿರುಗಿ ನೋಡಿದಳು. ಮೊಗ ಶಾಲೆಯ ಇನ್ನೊಂದು ಕಡೆಯ ಮುಚ್ಚುದಾರಿಯಲ್ಲಿ ಪುರುಷನೊಬ್ಬನು ನಿಂತಿರುವುದನ್ನು ಕಂಡು ಅವಳು ಚಕಿತಳಾದಳು.

ತಟ್ಟನೆ ಹಿಂದಕ್ಕೆ ಸರಿದು ಅವಳು ತನ್ನ ಬಿಡಾರದತ್ತ ಹೋಗಲು ಅನುವಾದಂತೆ ಪುರುಷನು ಎರಡು ಹೆಜ್ಜೆ ಮುಂದೆ ಬಂದು,

“ಏಕೆ, ರಾಣಿ ? ಗುರುತಾಗಲಿಲ್ಲವೆ ? ನಾನು ನಿನ್ನ ನೆಚ್ಚಿನ ಗರುಡ ! ಬಿಜ್ಜಳ!” ಎಂದನು.

ಕಾಮೇಶ್ವರಿ ಸ್ತಂಭಿತೆಯಾದಳು. ಅಸ್ಪುಟ ಕಂಠದಿಂದ, “ಸರ್ವಾಧಿಕಾರಿ ಬಿಜ್ಜಳರಾಯರು, ಈ ಅವೇಳೆಯಲ್ಲಿ, ನನ್ನ ಬಿಡಾರದ ಏಕಾಂತದಲ್ಲಿ !” ಎಂದು ತೊದಲುತ್ತ ನುಡಿದಳು.

ಬಿಜ್ಜಳನು ಮಿದುವಾಗಿ ನಕ್ಕು,

“ನಾನೀಗ ಸರ್ವಾಧಿಕಾರಿ ಬಿಜ್ಜಳರಾಯನಲ್ಲ, ರಾಣಿ. ಪಗಡೆಯಾಟದಲ್ಲಿ ಸೋತು, ಆತ್ಮಾರ್ಪಣ ಮಾಡಿಕೊಂಡ ನಿಮ್ಮ ನೆಚ್ಚಿನ ಗರುಡನು ಮಾತ್ರ ಒಡತಿಯಿಂದ ಗರುಡನು ಪಡೆಯಬಹುದಾದ ಕೃಪಾದೃಷ್ಟಿಯ ಪ್ರಸಾದಕ್ಕಾಗಿ ಬಂದಿದ್ದೇನೆ,” - ಎಂದು ಹೇಳಿ ಅಧಿಷ್ಠಾತೃ ದೇವೀಪ್ರತಿಮೆಯ ಸಂಮುಖದಲ್ಲಿ ಬೇಡುವ ಭಕ್ತನಂತೆ ಮೊಣಕಾಲೂರಿ ಕುಳಿತು ಕಾತರದ ಕಣ್ಣುಗಳಿಂದ ಕಾಮೇಶ್ವರಿಯ ಕಡೆ ನೋಡಿದನು.

ಅಚ್ಚರಿ ನೂರ್ಮಡಿಯಾಗಿ ಎಲ್ಲ ಕಡೆಗಳಿಂದ ಮೇಲೆರಗಿದಂತಾಯಿತು ಅವಳಿಗೆ ಕೆಲವು ಕ್ಷಣಗಳು ಸ್ತಬ್ಧಳಾಗಿ ನಿಂತು ಬಳಿಕ ಚೇತರಿಸಿಕೊಂಡು, ಬಿಜ್ಜಳನ ಭುಜ ಹಿಡಿದೆಬ್ಬಿಸಿ ಅವಳು,

“ದ್ಯೂತಸಭೆಯಲ್ಲಿ ಪ್ರಾರಂಭವಾದ ಈ ನಗೆಯಾಟವನ್ನು ಅಲ್ಲಿಗೇ