ಪುಟ:ಕ್ರಾಂತಿ ಕಲ್ಯಾಣ.pdf/೨೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮಂಗಳವೇಡೆಯ ಅಗ್ನಿದಾಹ

೧೮೯


ಆ ಮಾರ್ಗದಲ್ಲಿ ನಡೆಯುತ್ತೇನೆ,” ಎಂದು ನಿರ್ಧರಿಸಿಕೊಂಡು ಕೈಯಲ್ಲಿದ್ದ ಹಲಿಗೆಯಲ್ಲಿ ಬರೆಯಲು ಪ್ರಾರಂಭಿಸಿದಳು.

ಅಳಿಸಿ ತಿದ್ದಿ ಬರಹವನ್ನು ಮುಗಿಸಲು ಗಳಿಗೆಕಾಲ ಹಿಡಿಯಿತು. ಆಮೇಲೆ ಅವಳು ಮಂಚದಿಂದೆದ್ದು ಬಾಗಿಲ ಬಳಿ ಹೋಗಿ ಉಷಾವತಿಯನ್ನು ಕರೆದಳು.

ಉಷಾವತಿ ಕಣ್ಮರೆಸಿಕೊಳ್ಳುತ್ತ ಒಳಗೆ ಬಂದು, “ಏಕೆ, ರಾಣೀಜಿ? ನೀವಿನ್ನೂ ಮಲಗಲಿಲ್ಲವೇ?” ಎಂದಳು.

ಉಷಾವತಿಯನ್ನು ದೀಪದ ಮುಂದೆ ಕುಳಿತುಕೊಳ್ಳುವಂತೆ ಹೇಳಿ ಕಾಮೇಶ್ವರಿ, ಹಲಿಗೆಯನ್ನು ಕೈಗೆ ಕೊಟ್ಟು ಇದನ್ನೊಂದು ಸಾರಿ ಓದಿಕೋ,” ಎಂದಳು.

ಹಲಿಗೆಯಲ್ಲಿ ಈ ರೀತಿ ಬರೆದಿತ್ತು : “ಕುಮಾರ ಸೋಮೇಶ್ವರನ ಪಟ್ಟಾಭಿಷೇಕಕ್ಕಾಗಿ ಮಂಗಳವೇಡೆಗೆ ರಾಜಾತಿಥಿಯಾಗಿ ಬಂದಿದ್ದ ನನ್ನ ಬಿಡಾರಕ್ಕೆ, ಮಾಘ ಶುದ್ಧ ನವಮಿಯಂದು ಸರಿರಾತ್ರಿಯಲ್ಲಿ ಬಿಜ್ಜಳನು ವಂಚನೆಯಿಂದ ಪ್ರವೇಶಿಸಿ ನನ್ನ ಮಾನಹರಣ ಮಾಡಿದನು. ಆ ದಾನವನ ಸ್ಪರ್ಶದಿಂದ ಕಳಂಕಿತವಾದ ನನ್ನ ದೇಹವನ್ನು ಅಗ್ನಿಯಿಂದ ದಹಿಸಲು ನಿರ್ಧರಿಸಿದ್ದೇನೆ. ನನ್ನ ಭಾಗಕ್ಕೆ ಮರಣವೇ ಮಹಾನವಮಿ. ಈ ಸಂದೇಶ ನಿಮಗೆ ತಲಪುವಷ್ಟರಲ್ಲಿ ಈ ಅಭಾಗಿನಿಯ ಮರಣದ ಸುದ್ದಿಯನ್ನು ನೀವು ಕೇಳುವಿರಿ. ಬಿಜ್ಜಳನು ಶರಣಧರ್ಮದ ಪರಮವೈರಿ. ಚಾಲುಕ್ಯರಾಜ್ಯದಲ್ಲಿರುವ ಶೈವಮಠಗಳನ್ನು ನಾಶಮಾಡಿ, ಶರಣಧರ್ಮವನ್ನು ನಿರ್ಮೂಲಗೊಳಿಸುವುದು ಅವನ ಉದ್ದೇಶ. ಚಾಲುಕ್ಯರ ಹೆಸರನ್ನು ಇತಿಹಾಸದಿಂದ ಅಳಿಸಿಹಾಕಿ ಕಲಚೂರ್ಯ ಸಾಮ್ರಾಜ್ಯವನ್ನು ಸ್ಥಾಪಿಸಲು ಅವನು ಹವಣಿಸುತ್ತಿದ್ದಾನೆ. ಈ ದಾನವರೂಪಿ ನಿರಂಕುಶ ಪ್ರಜಾಪೀಡಕನನ್ನು ವಧಿಸಿ, ಚಾಲುಕ್ಯರಾಜ್ಯವನ್ನು, ಶರಣಧರ್ಮವನ್ನು ವಿಪತ್ತಿನಿಂದ ಉದ್ದರಿಸುವ ಧೈರ್ಯ ಸಾಹಸಗಳು ನಿಮಗಿದೆಯೆ? ಅದರಿಂದ ಮಾತ್ರವೇ ನಾನು ಕಳಂಕ ವಿಮುಕ್ತಯಾಗುವೆನು. ನನ್ನ ಆತ್ಮಕ್ಕೆ ಚಿರಶಾಂತಿ ದೊರಕುವುದು.

ಇತಿ ನಿಮ್ಮ ಚರಣ ದಾಸಿ,

ಕಾಮೇಶ್ವರಿ.

ಉಷಾವತಿ ಕಂಪಿಸಿದಳು. ಹಣೆ ಬೆವರಿತು. ಬೆದರಿದ ಕಣ್ಣುಗಳಿಂದ ಕಾಮೇಶ್ವರಿಯನ್ನು ನೋಡಿ, ತೊದಲುತ್ತ “ಓದಿದೆ, ರಾಣೀಜಿ!” ಎಂದಳು.

“ಓಲೆ ಬರೆಯುವುದು ಮೊದಲು ನನ್ನ ಉದ್ದೇಶವಾಗಿತ್ತು,” ಕಾಮೇಶ್ವರಿ ಹೇಳಿದಳು. ಆದರೆ ಇಂತಹ ವಿನಾಶದ ಸಂದೇಶವನ್ನು ನಿನ್ನ ಕೈಯಲ್ಲಿ ಕಳುಹಿಸುವುದು,