ಪುಟ:ಕ್ರಾಂತಿ ಕಲ್ಯಾಣ.pdf/೨೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೯೦

ಕ್ರಾಂತಿ ಕಲ್ಯಾಣ


ಕೈಯಾರೆ ನಿನ್ನನ್ನು ಅಗ್ನಿಕುಂಡಕ್ಕೆ ತಳ್ಳಿದಂತೆ ಎಂದು ಭಾವಿಸಿ ಸುಮ್ಮನಾದೆ. ನೀನಿದನ್ನು ನಾಲ್ಕಾರು ಸಾರಿ ಚೆನ್ನಾಗಿ ಓದಿ ಒಕ್ಕಣೆಯನ್ನು ನೆನಪಿನಲ್ಲಿಟ್ಟುಕೊಂಡರೆ ಸಾಕು, ಕಲ್ಯಾಣಕ್ಕೆ ಹೋಗಿ ಜಗದೇಕಮಲ್ಲರಸರ ಮುಂದೆ ಈ ಸಂದೇಶವನ್ನು ಪಠಿಸಬೇಕು. ಈ ಕಾರ್ಯ ನಿನ್ನಿಂದಾಗುವುದೆ?”

ಕಾಮೇಶ್ವರಿಯ ನುಡಿಗಳು ಅಗ್ನಿಶಿಖಿಯಂತೆ ಉಷಾವತಿಯನ್ನು ದಹಿಸಿದವು. ಅವಳು ಒಡತಿಯ ಕಾಲುಗಳ ಮೇಲೆ ಬಿದ್ದು, “ನಾನು ನಿಮಗಾಗಿ ಜೀವ ಕೊಡಲೂ ಸಿದ್ದ, ರಾಣೀಜಿ. ಆದರೆ ನಿಮ್ಮನ್ನು ಈ ಸಂಕಟದಲ್ಲಿ ಬಿಟ್ಟು ನಾನು ಹೋಗಲಾರೆ. ನಿಮ್ಮನ್ನು ದಹಿಸುವ ಅಗ್ನಿ ನನ್ನನ್ನೂ ದಹಿಸಲಿ," ಎಂದು ಬಿಕ್ಕಿ ಬಿಕ್ಕಿ ಅತ್ತಳು.

“ಈ ಪಿಶಾಚ ಪುರಿಯಿಂದ ಪ್ರೇಮಾರ್ಣವನನ್ನು ಪಾರುಮಾಡುವುದು ನಿನಗೊಬ್ಬಳಿಗೆ ಸಾಧ್ಯ. ನೀನು ಆ ಕಾರ್ಯ ಮಾಡಲಾರದೆ ಹೋದರೆ ನನ್ನ ಸಂಗಡ ಅವನೂ ಸಾಯುವನು.”

“ಅಬಲೆಯಾದ ನಾನು ಪ್ರೇಮಾರ್ಣವನನ್ನು ರಕ್ಷಿಸಲು ಸಮರ್ಥಳಾಗುವೆನೆ?”

“ನಾನು ಅದಕ್ಕೊಂದು ಉಪಾಯ ಯೋಚಿಸಿದ್ದೇನೆ. ಆದರೆ ಅದಕ್ಕೆ ನಿನ್ನ ಸಹಾಯ ಅಗತ್ಯ”

ಉಷಾ ನಿರುತ್ತರೆಯಾಗಿ ಒಪ್ಪಿಕೊಂಡಳು.

ಕಾಮೇಶ್ವರಿ ಹೇಳಿದಳು : “ಪ್ರೇಮಾರ್ಣವನನ್ನು ಈಗಲೆ ಎಚ್ಚರಗೊಳಿಸಿ ಸಾಮಾನ್ಯ ಬಾಲಕನಂತೆ ಉಡುಪು ಹಾಕು, ಪ್ರೌಢ ವಯಸಿನ ಶರಣೆಯಂತೆ ನೀನು ಕೂಡಾ ವೇಷ ಹಾಕಬೇಕಾಗುತ್ತದೆ. ನಾಲ್ಕನೆಯ ಜಾಮ ಮುಗಿದ ಘಂಟೆ ಹೊಡೆಯುತ್ತಲೆ ಕಾವಲು ಭಟರು ಹೊರಟುಹೋಗುತ್ತಾರೆ. ದಾಸದಾಸಿಯರ ಸುಳಿದಾಟ ಪ್ರಾರಂಭವಾಗುತ್ತದೆ. ಆಗ ನೀನು ಪ್ರೇಮಾರ್ಣವನನ್ನು ಸಂಗಡ ಕರೆದುಕೊಂಡು ಬಿಡಾರದಿಂದ ಹೊರಟು ನಗರದ ನಡುವೆ ಇರುವ ಗಣಾಚಾರಿ ಮಠಕ್ಕೆ ಹೋಗಬೇಕು.”

“ಮಠ ಎಲ್ಲಿದೆಯೆಂದು ನನಗೆ ತಿಳಿಯದು.”

“ನಗರದ ನಡುವೆ ಇರುವ ತ್ರಿಪುರಾಂತಕ ಗುಡಿಯನ್ನು ನೀನು ನೋಡಿರುವೆಯಷ್ಟೆ, ಅದರ ಹಿಂಭಾಗದಲ್ಲಿರುವ ವಿಶಾಲವಾದ, ಆವರಣವೇ ಗಣಾಚಾರಿ ಮಠ, ಎತ್ತರವಾಗಿ ಹಾರಾಡುವ ಗೈರಿಕ ಪತಾಕೆಯಿಂದ ಅದನ್ನು ಗುರುತಿಸಬಹುದು.”

ಉಷಾವತಿಗೆ ಪರಿಚಯ ಹತ್ತಿತು. “ಅಲ್ಲಿಗೆ ಹೋಗಿ ನಾನೇನು ಮಾಡಬೇಕು?”