ಪುಟ:ಕ್ರಾಂತಿ ಕಲ್ಯಾಣ.pdf/೨೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೯೨

ಕ್ರಾಂತಿ ಕಲ್ಯಾಣ

ಕಾಮೇಶ್ವರಿ ಅವಳನ್ನು ತಡೆದು, "ಸಂದೇಶದ ಪಾಠ ಮುಗಿಯಿತೆ?” ಎಂದಳು.

ಉಷಾವತಿ ಹಲಿಗೆಯನ್ನು ಒಡತಿಯ ಕೈಗೆ ಕೊಟ್ಟು ಸಂದೇಶವನ್ನು ಯಥಾಪ್ರತಿ ಒಪ್ಪಿಸಿದಳು. ಕಾಮೇಶ್ವರಿ ಹಲಿಗೆಯಲ್ಲಿ ಬರೆದಿದ್ದುದನ್ನು ಅಳಿಸಿ, ಪ್ರಸನ್ನತೆಯ ತುಂಬು ಕಂಠದಿಂದ,

"ನನ್ನ ಹೃದಯದ ಸಂದೇಶ ಈಗ ನಿನಗೆ ಕಂಠಹಾರವಾಗಿದೆ, ತಂಗಿ. ಕಲ್ಯಾಣಕ್ಕೆ ಹೋಗುವವರೆಗೆ ಅದನ್ನು ಕುಲಧನದಂತೆ ರಕ್ಷಿಸಿಕೊಂಡಿದ್ದು ಜಗದೇಕ ಮಲ್ಲರಸರಿಗೆ ಅದನ್ನು ಒಪ್ಪಿಸುವುದು ನಿನ್ನ ಹೊಣೆ. ಇದಕ್ಕಾಗಿ ನಾನು ನಿನಗೆ ತುಂಬ ಕೃತಜ್ಞಳು. ಪ್ರವಾಸದಲ್ಲಿ ಪರಶಿವನು ನಿಮ್ಮನ್ನು ರಕ್ಷಿಸಲಿ,” -ಎಂದು ಹೇಳಿ ಉಷಾವತಿಯನ್ನು ಬಿಗಿದಪ್ಪಿದಳು. ಒಡತಿ ದಾಸಿಯರ ಕಣ್ಣುಗಳು ಕಂಬನಿಯಿಂದ ತುಂಬಿದವು.

ಉಷಾವತಿ ಗದ್ಗದ ಕಂಠದಿಂದ, "ಅಗ್ಗಳ! ನಾನವರನ್ನು ನಿನ್ನಿನ ಸಂಜೆ ನೋಡಿದ್ದು. ಅವರು ಬಿಡಾರಕ್ಕೆ ಬಂದಾಗ......” -ಎನ್ನುತ್ತಿದ್ದಂತೆ ಕಾಮೇಶ್ವರಿ, "ನಾನು ಅಗ್ಗಳ ದೇವರಿಗೆ ಹೇಳುತ್ತೇನೆ. ನಾಳಿನ ಸಂಜೆಯೊಳಗಾಗಿ ಅವರು ಯಾತ್ರಾದಳವನ್ನು ಸೇರುವರು,” ಎಂದು ಹೇಳಿ ಕಳುಹಿಸಿದಳು.

ಕೊಂಚ ಹೊತ್ತಿನಮೇಲೆ ಮಹಾದ್ವಾರದಲ್ಲಿ ನಾಲ್ಕನೆಯ ಜಾಮ ಮುಗಿದ ಘಂಟೆ ಹೊಡೆಯುತ್ತಿದ್ದಂತೆ ಉಷಾವತಿ ಪ್ರೇಮಾರ್ಣವನನ್ನು ಕರೆದುಕೊಂಡು ಪುನಃ ಅಲ್ಲಿಗೆ ಬಂದಳು.

"ಉಷಕ್ಕನ ಸಂಗಡ ನಾನು ಎಲ್ಲಿಗೆ ಹೋಗಬೇಕಮ್ಮ?” -ಎಂದು ಬಾಲಕ ಪ್ರೇಮಾರ್ಣವ ಸಹಜವಾದ ಆತುರದಿಂದ ಕೇಳಿದನು.

"ಶರಣರ ಯಾತ್ರಾದಳದ ಸಂಗಡ ಜಂಗಮರೊಬ್ಬರು ಬಂದಿದ್ದಾರೆ ಮಗು. ಉಷಾ ನಿನಗೆ ಅವರ ದರ್ಶನ ಮಾಡಿಸುತ್ತಾಳೆ. ನೀವಿಬ್ಬರೂ ಅವರ ಸಂಗಡ ಹೋಗಬೇಕಾಗುವುದು.” -ಮನಸ್ಸಿನ ಆವೇಗವನ್ನು ತುಳಿದಿಟ್ಟು ಕಾಮೇಶ್ವರಿ ಉತ್ತರಕೊಟ್ಟಳು.

"ನೀನು ಸಂಗಡ ಬರುವುದಿಲ್ಲವೆ, ಅಮ್ಮಾ?"

"ಬಿಡಾರದ ವ್ಯವಸ್ಥೆಮಾಡಿ ನಾನು ಬರಲು ತಡವಾಗುತ್ತದೆ, ಮಗು. ಯಾತ್ರಾದಳ ನನಗಾಗಿ ಕಾಯುವುದಿಲ್ಲ. ನಾಳೆ ನಾನು ಇಲ್ಲಿಂದ ಹೊರಟು ದಳವನ್ನು ಸೇರುತ್ತೇನೆ. ಆಮೇಲೆ ಯಾವಾಗಲೂ ನಿನ್ನ ಬಳಿಯಿಂದ ಕದಲುವುದಿಲ್ಲ.” ನುಡಿಯುತ್ತಿದ್ದಂತೆ ಕಾಮೇಶ್ವರಿಯ ಕಂಠ ಗದ್ಗದಿತವಾಯಿತು. ಕಣ್ಣುಗಳು ಅಶ್ರುಪ್ಲಾವಿತವಾದವು. ಅವಳು ಬಾಲಕನನ್ನು ಬಿಗಿದಪ್ಪಿ ಮುದ್ದಿಟ್ಟು "ಇನ್ನು ಪ್ರೇಮಾರ್ಣವ