ಪುಟ:ಕ್ರಾಂತಿ ಕಲ್ಯಾಣ.pdf/೨೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೨೩೬

ಕ್ರಾಂತಿ ಕಲ್ಯಾಣ

ಬರೆದಿರುವುದು ನಿಮ್ಮ ಹೆಸರಿನ ಮೊದಲೆರಡು ಅಕ್ಷರಗಳಲ್ಲವೆ?”

“ಹೌದು.”
“ನೀವು ಬರೆದ ಚಿತ್ರಗಳಿಗೆ ಈ ಹೆಸರಿನ ಗುರುತು ಹಾಕುತ್ತಿದ್ದಿರಿ, ಅಲ್ಲವೆ?”
“ನಿಜ.”
“ಈ ಚಿತ್ರದಲ್ಲಿರುವ ಹೆಂಗಸು ಯಾರು ?”
“ಆ ಪ್ರಶ್ನೆಗೆ ನಾನು ಉತ್ತರ ಕೊಡುವುದಿಲ್ಲ.”

ಕ್ರಮಿತನು ಕುಹಕದ ನಗೆ ಬೀರಿ, “ನಿಮಗೆ ಉತ್ತರ ಕೊಡುವ ಇಚ್ಛೆಯಿಲ್ಲದೆ ಹೋದರೆ ನಾನು ಒತ್ತಾಯಪಡಿಸುವುದಿಲ್ಲ, ಶೀಲವಂತಯ್ಯ. ಹೆಣ್ಣು ಹಿಂದಿರುಗಿ ನೋಡುತ್ತಿರುವಂತೆ ಮುಖದ ಅರ್ಧಭಾಗವನ್ನು ಚಿತ್ರಿಸಿರುವುದರಿಂದ ನಾವೇ ಗುರುತು ಹಿಡಿಯಬಹುದು,” ಎಂದು ಹೇಳಿ ಪಾರ್ಶ್ವದ ಪೀಠದಿಂದ ಇನ್ನೊಂದು ಚಿತ್ರವನ್ನು ತೆಗೆದುಕೊಟ್ಟು “ಇವೆರಡರಲ್ಲಿಯೂ ಚಿತ್ರಿಸಲ್ಪಟ್ಟಿರುವ ಹೆಣ್ಣು ಒಬ್ಬಳೇ ಅಲ್ಲವೆ?” ಎಂದು ಪುನಃ ಪ್ರಶ್ನಿಸಿದನು.

“ಈ ಚಿತ್ರಕ್ಕೆ ಸಂಬಂಧಿಸಿದ ಯಾವ ಪ್ರಶ್ನೆಗೂ ನಾನು ಉತ್ತರ ಕೊಡುವುದಿಲ್ಲ.”
-ಈ ಸಾರಿ ಶೀಲವಂತ ಖಂಡಿತವಾಗಿ ಹೇಳಿದನು.

ಆಗ ಕ್ರಮಿತನು ಎರಡು ಚಿತ್ರಗಳನ್ನೂ ಮಂಚಣನಿಗೆ ಕೊಟ್ಟು “ನೀವು ಮತ್ತು ರುದ್ರಭಟ್ಟರು ಈ ಎರಡು ಚಿತ್ರಗಳನ್ನು ನೋಡಿ ಅವುಗಳಲ್ಲಿ ಚಿತ್ರಿಸಲ್ಪಟ್ಟಿರುವ ಹೆಣ್ಣು ಒಬ್ಬಳೇಯೋ ಅಥವಾ ಬೇರೆ ಬೇರೆ ವ್ಯಕ್ತಿಗಳೇ ಎಂಬುದನ್ನು ನಿರ್ಧರಿಸಿ ಹೇಳಬೇಕಾಗಿ ಕೋರುತ್ತೇನೆ,” ಎಂದನು.

ಒಂದು ಚಿತ್ರದಲ್ಲಿ ನಗ್ನೆಯಾದ ಹೆಣ್ಣೊಬ್ಬಳ ಬೆನ್ನು ಕಡೆಯ ಚಿತ್ರ. ಹೆಣ್ಣು ಹಿಂದಕ್ಕೆ ತಿರುಗಿ ನೋಡುತ್ತಿರುವಂತೆ ಮುಖದ ಪಾರ್ಶ್ವವನ್ನು ಮಾತ್ರ ಚಿತ್ರಿಸಲಾಗಿತ್ತು. ಇನ್ನೊಂದರಲ್ಲಿ ವಸ್ತ್ರಾಭರಣಗಳಿಂದ ಭೂಷಿತೆಯಾದ ರಾಜರಮಣಿಯೊಬ್ಬಳು ಮಣಿಖಚಿತವಾದ ಭದ್ರಾಸನದ ಮೇಲೆ ಕುಳಿತಿರುವಂತೆ ಚಿತ್ರಿಸಲಾಗಿತ್ತು. ವರ್ಣ ಮತ್ತು ರೇಖಾವಿನ್ಯಾಸದಿಂದ ಎರಡು ಚಿತ್ರಗಳು ಬೇರೆ ಬೇರೆ ಕಲಾಕಾರರ ಕೃತಿಗಳೆಂದು ಸ್ಪಷ್ಟವಾಗಿ ತಿಳಿಯುತ್ತಿತ್ತು.

ಮಂಚಣ ರುದ್ರಭಟ್ಟರು ಚಿತ್ರಗಳನ್ನು ಪರಿಶೀಲಿಸಿ, “ಈ ಎರಡು ಚಿತ್ರಗಳಲ್ಲಿರುವ ಹೆಣ್ಣು ಒಬ್ಬಳೇ ಎಂದು ನಿರ್ಧಾರವಾಗಿ ಹೇಳಬಹುದು,” ಎಂದು ತಮ್ಮ ಅಭಿಪ್ರಾಯವನ್ನು ತಿಳಿಸಿದರು.

“ಆ ಹೆಣ್ಣು ಯಾರೆಂಬುದು ಈಗ ನಿಮಗೆ ತಿಳಿದಿರಬೇಕಲ್ಲವೆ?”
-ವ್ಯಂಗ್ಯದ ಚುಚ್ಚುದನಿಯಿಂದ ಕ್ರಮಿತನು ಅವರನ್ನು ಪ್ರಶ್ನಿಸಿದನು.