ಪುಟ:ಕ್ರಾಂತಿ ಕಲ್ಯಾಣ.pdf/೨೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮಾನವನು ದಾನವನಾದಾಗ

೨೫೯


ಪರಂಪರಾಗತವಾದ ನೀತಿ ನಿಬಂಧನೆಗಳನ್ನು ರಕ್ಷಿಸಿದಂತಾಗುವುದು,” ಎಂದನು.

ಕ್ರಮಿತನ ಅಸಹನೆ ಇಮ್ಮಡಿಸಿತು. ಅಧಿಕಾರ ದರ್ಪದಿಂದ ಅವನು,

“ಈ ನಿರರ್ಥಕ ವಿಚಾರಣೆ ಮುಂದುವರಿಯುವುದನ್ನು ಪ್ರಭುಗಳು ನಿಷೇಧಿಸಿದ್ದಾರೆ. ಅಪರಾಧ ನಡೆದಿದೆಯೆಂದು ನಿರ್ಧರಿಸಲು ಸಾಕಾದಷ್ಟು ಸಾಕ್ಷ್ಯಗಳು ಈಗ ನ್ಯಾಯಪೀಠದ ಮುಂದಿವೆ. ಅದರಂತೆ ದಂಡಾಜೆಯ ತೀರ್ಪು ರಚಿತವಾಗಿದೆ. ಇದಕ್ಕೆ ನೀವು ಒಪ್ಪಿಗೆ ಕೊಡದೆಹೋದರೆ ಪ್ರಭುಕೋಪಕ್ಕೆ ಪಾತ್ರರಾಗಬೇಕಾಗುವುದು. ಸಹೋದ್ಯೋಗಿಯೆಂಬ ಅಭಿಮಾನದಿಂದ ನಿಮಗೆ ಮೊದಲೆ ಎಚ್ಚರಿಕೆ ಕೊಡುತ್ತಿದ್ದೇನೆ,” ಎಂದನು.

ಮಂಚಣನ ಮುಖದಲ್ಲಿ ತಿರಸ್ಕಾರದ ಮಿದುನಗೆ ಅರಳಿತು. ಉಪೇಕ್ಷೆಯ ಚುಚ್ಚುದನಿಯಿಂದ ಅವನು.

“ಈ ಗೊಡ್ಡು ಬೆದರಿಕೆಗೆ ನಾನು ಅಂಜುವೆನೆಂದು ಭಾವಿಸಿದಿರಾ, ಕ್ರಮಿತರೆ? ಪ್ರಭುಸೇವೆಯಲ್ಲಿ ನಾನು ಜೀವಿತಕಾಲವೆಲ್ಲವನ್ನೂ ಕಳೆದಿದ್ದೇನೆ. ನನ್ನ ಅಧಿಕಾರಾವಧಿಯಲ್ಲಿ ನಿಮ್ಮಂತಹ ಅನೇಕ ಮಂದಿ ರಾಜಪುರೋಹಿತರು, ಧರ್ಮಾಧಿಕಾರಿಗಳು ಆಗಿಹೋದರು. ಈ ನಗೆಯಾಟ ನಿಲ್ಲಿಸಿ ವಿಚಾರಣೆ ಮುಂದುವರೆಯಲು ಏರ್ಪಡಿಸಿರಿ,” ಎಂದನು.

ಕ್ರಮಿತನ ಕಣ್ಣುಗಳಿಂದ ಕೋಪದ ಕಿಡಿಗಳು ಹಾರಿದವು. ಪ್ರತಿಕ್ಷಣದಲ್ಲಿ ಅವನ ಮನಸ್ಸಿನ ಆವೇಗವನ್ನು ಮುಚ್ಚಿಟ್ಟು ವಂಚಕ ವಿನಯದಿಂದ,

“ಇದು ಗೊಡ್ಡು ಬೆದರಿಕೆಯಲ್ಲಿ ಮಂಚಣನವರೆ, ಹನ್ನೆರಡು ವರ್ಷಗಳ ಹಿಂದೆ ನೀವು ಅರ್ಥಮಂತ್ರಿಯಾಗಿದ್ದಾಗ, ಅಶ್ವವಾಣಿಜ್ಯದಲ್ಲಿ ನಡೆದ ರಾಜಧನದ ಅಪಹಾರ ಪ್ರಸಂಗವನ್ನು ಪ್ರಭುಗಳಿನ್ನೂ ಮರೆತಿಲ್ಲ. ಕೊನೆಗಾಲದಲ್ಲಿ ವಿಶ್ವಸಘಾತುಕನೆಂದು ಹೆಸರಾಗಿ ಸರ್ವಸ್ವವನ್ನೂ ಕಳೆದುಕೊಂಡು ಸೆರೆಮನೆಯಲ್ಲಿ ಸಾಯುವುದು ನಿಮಗಿಷ್ಟವೆ?” ಎಂದನು.

“ಅಪಹಾರ ನಡೆದದ್ದು ತೈಲಪಮಹಾರಾಜರ ಮನೆಹೆಗ್ಗಡೆ ಮಹದೇವರಸರಿಂದ. ಪ್ರಭುಗಳಿಗೆ ಆ ವಿಚಾರ ತಿಳಿದಿದೆ. ಒಬ್ಬರ ತಪ್ಪಿಗಾಗಿ ಮತ್ತೊಬ್ಬರನ್ನು ಶಿಕ್ಷಿಸುವಂತಹ ಅಚತುರರಲ್ಲ ಬಿಜ್ಜಳರಾಯರು,” –ಮಂಚಣ ಅಷ್ಟೇ ವಿನಯದಿಂದ ಉತ್ತರ ಕೊಟ್ಟನು.

“ನೀವು ರಹಸ್ಯದಲ್ಲಿ ಶರಣಧರ್ಮದ ಅನುಮೋದಕರೆಂಬುದನ್ನೂ ಪ್ರಭುಗಳು ತಿಳಿದಿದ್ದಾರೆ.”

ಈ ಸಾರಿ ಕ್ರಮಿತನ ವಾಗ್ಬಾಣ ಗುರಿಮುಟ್ಟಿತು. ಮಂಚಣ ಅಪ್ರತಿಭನಾಗಿ,