ಪುಟ:ಕ್ರಾಂತಿ ಕಲ್ಯಾಣ.pdf/೨೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೨೫೮

ಕ್ರಾಂತಿ ಕಲ್ಯಾಣ

ದಂಡಾಜ್ಞೆಯನ್ನು ಬರೆಯಿಸಿ ನಿಮ್ಮ ಮತ್ತು ರುದ್ರಭಟ್ಟರ ಒಪ್ಪಿಗೆ ಪಡೆಯುವಂತೆ
ಹೇಳಿದರು. ರುದ್ರಭಟ್ಟರು ಮರುಮಾತಾಡದೆ ಒಪ್ಪಿಗೆ ಹಾಕಿದ್ದಾರೆ. ಅದರಂತೆ
ನೀವೂ ಒಪ್ಪಿಗೆ ಹಾಕಿದರೆ ನಾನು ಉಳಿಯುತ್ತೇನೆ, ನೀವೂ ಉಳಿಯುತ್ತೀರಿ.” -
ಅನುಕಂಪದ ಮೆರಗುಹಚ್ಚಿದ ಅನುನಯದ ದನಿಯಿಂದ ಕ್ರಮಿತನು ನುಡಿದನು.
“ವರ್ಣಸಂಕರದ ಅಪರಾಧ ಸ್ಥಿರವಾಗುವ ಮೊದಲೆ ಆಪಾದಿತರಿಗೆ
ಮರಣದಂಡನೆ ವಿಧಿಸುವುದು ಪ್ರಭುಗಳ ಇಚ್ಛೆಯಾಗಿದ್ದರೆ ತಮ್ಮ ಪ್ರಭುಶಕ್ತಿಯಿಂದ
ಅವರು ಆ ಕಾರ್ಯವನ್ನು ಮಾಡಬಹುದಾಗಿತ್ತು. ಆ ನಿರಂಕುಶ ಮಾರ್ಗದಲ್ಲಿ
ನಡೆಯದೆ ವಿಚಾರಣೆಗಾಗಿ ನ್ಯಾಯಪೀಠವನ್ನು ರಚಿಸಿದ ಮೇಲೆ, ಅದರ ತೀರ್ಪಿಗಾಗಿ
ಕಾಯುವುದು ಉಚಿತ. ಧರ್ಮಾಧಿಕರಣದ ಈ ಸಾಮಾನ್ಯ ನಿಯಮವನ್ನು
ಪ್ರಭುಗಳು ಮರೆತಿದ್ದರೆ, ಅದನ್ನು ಅವರ ನೆನಪಿಗೆ ತರುವುದು ನಿಮ್ಮ ಕರ್ತವ್ಯವಾಗಿತ್ತು,”
-ನೊಂದದನಿಯಿಂದ ಮಂಚಣನೆಂದನು. “ಪಭುಶಕ್ತಿಯೇ ಧರ್ಮಾಧಿಕರಣದ ಹಿಂದಿರುವ ಅಧಿಕಾರ. ಅದರ ಹೊರತಾಗಿ
ನ್ಯಾಯಪೀಠಕ್ಕೆ ಪ್ರತ್ಯೇಕ ಅಧಿಕಾರವಿದೆಯೆಂಬುದನ್ನು ನಾನು ಒಪ್ಪುವುದಿಲ್ಲ. ಪ್ರಭುಗಳ
ಸೂಚನೆಯಂತೆ ತೀರ್ಪು ಕೊಡುವುದು ನ್ಯಾಯಪೀಠದ ಕರ್ತವ್ಯ. ಅದರಂತೆ
ನಾನು ನಡೆದುಕೊಳ್ಳುತ್ತಿದ್ದೇನೆ. ನ್ಯಾಯಪೀಠವನ್ನು ರಚಿಸಿದ ಪ್ರಭುವಿಗೆ ಅದರ
ತೀರ್ಪನ್ನು ರಚಿಸುವ ಅಧಿಕಾರವೂ ಇರುತ್ತದೆ.” –ಕ್ರಮಿತನ ಉತ್ತರ ಅವನ
ರಾಜನಿಷ್ಠೆಯ ಪ್ರತೀಕವಾಗಿತ್ತು.
ಆ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಮಂಚಣನ ವಿನೋದ ಪ್ರವೃತ್ತಿ ಎಚ್ಚೆತ್ತಿತು.
ಕಟುಹಾಸ್ಯದ ನಗೆಬೀರಿ ಅವನು,
“ನಿಮ್ಮ ಪ್ರಭುನಿಷ್ಠೆಯನ್ನು ನಾನು ತಿಳಿದಿದ್ದೇನೆ, ಕ್ರಮಿತರೆ. ನನ್ನ ರಾಜನಿಷ್ಠೆ
ಅದಕ್ಕಿಂತ ಕಡಿಮೆಯೇನಲ್ಲ. ಚಾಲುಕ್ಯ ಧರ್ಮಾಧಿಕರಣದ ಕೀರ್ತಿ ಪ್ರತಿಷ್ಟೆಗಳಿಗೆ
ಕಳಂಕ ಹತ್ತದಿರಲೆಂಬುದು ನನ್ನ ಉದ್ದೇಶ. ಆಪಾದಿತರು ನ್ಯಾಯಪೀಠದೊಡನೆ
ಸಹಕರಿಸುವುದಿಲ್ಲವೆಂದ ಮಾತ್ರಕ್ಕೆ ನಾವೇಕೆ ವಿಚಾರಣೆಯನ್ನು ನಿಲ್ಲಿಸಬೇಕು?
ವರ್ಣ ಸಂಕರದ ಅಪರಾಧ ವಾಸ್ತವವಾಗಿ ನಡೆದಿದೆಯೆ? ನಡೆದಿದ್ದರೆ
ಧರ್ಮಶಾಸ್ತ್ರಗಳು ಅದಕ್ಕೆ ವಿಧಿಸುವ ಶಿಕ್ಷೆಯೇನು ? ಬೇರೆ ಸಾಕ್ಷ್ಯಗಳಿಂದ ನಾವು
ಈ ಪ್ರಶ್ನೆಗಳಿಗೆ ಉತ್ತರ ಪಡೆಯಬೇಕಾಗಿದೆ. ಮದುವೆ ನಡೆದಾಗ ಅಲ್ಲಿದ್ದ ಕುಲವೃದ್ಧರು,
ಮಠಾಧಿಕಾರಿಗಳು ಮುಂತಾದವರ ಸಾಕ್ಷ್ಯಗಳನ್ನು ತೆಗೆದುಕೊಂಡು, ಅನಂತರ
ತೀರ್ಪನ್ನು ರಚಿಸಿ ಪ್ರಭುಗಳ ಅನುಮೋದನೆಗೆ ಕಳುಹಿಸುವುದು ಈಗ ನ್ಯಾಯಪೀಠ
ಅನುಸರಿಸಬೇಕಾದ ಮಾರ್ಗ. ಆ ರೀತಿ ನಡೆಯುವುದರಿಂದ ಧರ್ಮಾಧಿಕರಣದ