ಪುಟ:ಕ್ರಾಂತಿ ಕಲ್ಯಾಣ.pdf/೨೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮಾನವನು ದಾನವನಾದಾಗ

೨೬೩

ಕಲ್ಯಾಣದ ಪ್ರಮುಖ ನಾಗರಿಕರ ಒಪ್ಪಿಗೆ ಪಡೆದು ಬಿಜ್ಜಳನಿಗೆ ಅರ್ಪಿಸಬೇಕು."

ಮಾಚಿದೇವರ ಸಲಹೆಯ ಹಿಂದಿದ್ದ ಹಿಂಸಾಮಾರ್ಗದ ಸುಳಿವು ತಿಳಿದು ಚೆನ್ನಬಸವಣ್ಣನವರು, "ಆತ್ಮರಕ್ಷಣೆಗಾಗಿ ಬಲಪ್ರಯೋಗವನ್ನು ನಿರಾಕರಿಸಿ ಬಸವಣ್ಣನವರು ಕಲ್ಯಾಣವನ್ನು ತ್ಯಜಿಸಿದರು. ನಾವು ಆ ಆದರ್ಶವನ್ನು ರಕ್ಷಿಸಿಕೊಳ್ಳುವುದು ಅಗತ್ಯ. ಸಾಮಂತರಿಗೆ ಬರೆಯುವುದರಿಂದ ನಾಡಿನಲ್ಲಿ ಕ್ರಾಂತಿಗೆ ಕರೆಕೊಟ್ಟಂತಾಗುವುದಿಲ್ಲವೆ?" ಎಂದರು.

"ಬಲಪ್ರಯೋಗ ನನ್ನ ಉದ್ದೇಶವೂ ಅಲ್ಲ," ಮಾಚಿದೇವರು ಹೇಳಿದರು. "ಆದರೆ ಬಿಜ್ಜಳನ ಸೈನ್ಯಬಲ ಶರಣಧರ್ಮದ ಆಕ್ರಮಣಕ್ಕೆ ಅನುವಾಗುತ್ತಿರುವಾಗ ಶಕ್ತಿಯನ್ನು ಶಕ್ತಿಯಿಂದ ಎದುರಿಸಲು ನಾವು ಸಿದ್ಧರಾಗಬೇಕು. ಅನುಭವಮಂಟಪದ ಜ್ಞಾನವೃದ್ದರು ಅಹಿಂಸಾ ಮಾರ್ಗವನ್ನು ಅನುಸರಿಸಲಿ. ಆದರೆ ಶರಣಧರ್ಮದ ಅನುಯಾಯಿಗಳಾದ ಭಕ್ತರ, ನಾಗರಿಕರ ರಕ್ಷಣೆಗೆ ಬಲಪ್ರಯೋಗ ಅಗತ್ಯವಾಗುವುದು. ಮುಂದೆ ನಮಗೊದಗಬಹುದಾದ ವಿಷಯ ಸಂಕಟದಲ್ಲಿ ಶರಣಧರ್ಮದ ರಕ್ಷಣೆ ನಾವು ಭರಿಸಲಾಗದ ದೊಡ್ಡ ಹೊರೆಯಾಗುವುದು. ಈಗಿನಿಂದ ನಾವು ಅದಕ್ಕೆ ಸಿದ್ಧರಾಗಬೇಕು."

ಚೆನ್ನಬಸವಣ್ಣನವರಿಗೆ ತಮ್ಮ ದೌರ್ಬಲ್ಯದ ಅರಿವಾಯಿತು. ತುಸು ಹೊತ್ತು ಯೋಚಿಸುತ್ತಿದ್ದು ಅವರು,

"ನಾನು ಆ ರಕ್ಷಣಾಕಾರ್ಯಕ್ಕೆ ಸಮರ್ಥನಲ್ಲ, ಮಾಚಿದೇವಯ್ಯನವರೆ. ಬಿಜ್ಜಳರಾಯನ ನಿರಂಕುಶ ದಬ್ಬಾಳಿಕೆ ಉಗ್ರರೂಪ ತಾಳಿದರೆ ಬಸವಣ್ಣನವರಂತೆ ಅನುಭವ ಮಂಟಪದ ಶರಣರೂ ಕಲ್ಯಾಣವನ್ನು ಬಿಡಬೇಕಾಗುವುದು. ಈ ವಿಷಯ ಸಂಕಟದಲ್ಲಿ ಶರಣರ ರಕ್ಷಣೆಯ ಹೊಣೆಯನ್ನು ನೀವೇ ವಹಿಸಿಕೊಳ್ಳಬೇಕಾಗಿ ಬೇಡುತ್ತೇನೆ," ಎಂದರು.

"ಬಿಜ್ಜಳನಿಂದ ನಿರ್ವಾಸಿತರಾಗಿ ಬಸವಣ್ಣನವರು ಕಲ್ಯಾಣವನ್ನು ಬಿಟ್ಟರು. ನೀವು ಕಲ್ಯಾಣವನ್ನು ಬಿಟ್ಟು ಎಲ್ಲಿಗೆ ಹೋಗಲು ಯೋಚಿಸಿರುವಿರಿ? ಪ್ರಾಣಭಯದಿಂದ ಓಡಿಹೋಗುವುದು ಮಹಮನೆಯ ಅಹಿಂಸಾವಾದಿ ಶರಣರಿಗೆ ಸಲ್ಲ." -ಮಾಚಿದೇವರ ನುಡಿಗಳಲ್ಲಿ ಕಟಕಿ ತಲೆಹಾಕಿತ್ತು.

ಚೆನ್ನಬಸವಣ್ಣನವರು ಅದನ್ನು ಗಮನಿಸಲಿಲ್ಲ. ನಿರ್ಲಿಪ್ತತೆಯ ಆವೇಗದಿಂದ ಅವರು ಹೇಳಿದರು:

"ಪ್ರಾಣಭಯದಿಂದ ಶರಣರು ಕಲ್ಯಾಣವನ್ನು ಬಿಡಬೇಕೆಂದು ನಾನು ಹೇಳುತ್ತಿಲ್ಲ, ಮಾಚಿದೇವಯ್ಯನವರೆ. ಅದಕ್ಕೆ ಮತ್ತೊಂದು ಮುಖ್ಯ ಕಾರಣವಿದೆ. ಕಳೆದ ಹನ್ನೆರಡು