ಪುಟ:ಕ್ರಾಂತಿ ಕಲ್ಯಾಣ.pdf/೩೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ರಾಜಗೃಹದಿಂದ ಹೊನ್ನಮ್ಮನ ಚಾವಡಿಗೆ

೩೩೩


ಸ್ಫಟಿಕಶಿಲೆಯ ಈ ಎರಡು ಬಟ್ಟಲುಗಳು ಆಕಾರದಲ್ಲಿ ಒಂದೇ ಆಗಿದ್ದರೂ,ಅವುಗಳಲ್ಲಿ ತುಂಬಿದ ಪಾನೀಯಗಳಲ್ಲಿ ಎಷ್ಟೊಂದು ಅಂತರವಿದೆ. ಒಂದರಲ್ಲಿ ಮಧು, ಇನ್ನೊಂದರಲ್ಲಿ ಹಣ್ಣಿನ ರಸ. ಒಂದು ಮಾನವನನ್ನು ಪಶುವಾಗಿ ಮಾಡುತ್ತದೆ.ಇನ್ನೊಂದು ಮಾನವನನ್ನು ದೇವತ್ವಕ್ಕೇರಿಸದಿದ್ದರೂ ಮಾನವನನ್ನಾಗಿಯೇ ಉಳಿಸುತ್ತದೆ. ಈ ಸ್ಫಟಿಕದ ಬಟ್ಟಲುಗಳಂತೆ ನಾವಿಬ್ಬರೂ ರಾಜವಂಶೀಯರು,ಸಮಾನ ವಯಸ್ಕರು, ರೂಪ ಯೌವನ ಪ್ರತಿಷ್ಠೆ ಗೌರವಗಳಲ್ಲಿ ಸಮಾನರು.ಆದರೂ ನಮ್ಮಿಬ್ಬರಲ್ಲಿ ಎಷ್ಟೊಂದು ಅಂತರ! ನೀನು ಪಟ್ಟಾಭಿಷಿಕ್ತನಾಗಿ, ಅಧಿಕಾರದಿಂದ ವಂಚಿಸಲ್ಪಟ್ಟು, ಬಂಧನದಲ್ಲಿದ್ದರೂ ಶಾಂತಿ ಸಮಾಧಾನಗಳಿಂದ ಚಿರಸುಖಿಯಾಗಿರುವೆ. ನಾನು ಸ್ವತಂತ್ರನಾಗಿ ಅಧಿಕಾರದಲ್ಲಿದ್ದರೂ ಮನಃಶಾಂತಿ ಇಲ್ಲದೆ ಚಿರದುಃಖಿಯಾಗಿ, ಕುಡಿದು ಕುಡಿದು ಮನದಳಲನ್ನು ಮರೆಯಲು ಪ್ರಯತ್ನಿಸುತ್ತಿದ್ದೇನೆ. ಇದರ ಕಾರಣ ನಮ್ಮ ಜೀವನ ವಿಧಾನವೆ, ಕರ್ಮ ವಿಪಾಕವೆ? ಮಂಗಳವೇಡೆಯಿಂದ ಬಂದಾಗಿನಿಂದ ನನಗಿದೇ ಚಿಂತೆ,”-ಎಂದು ನುಡಿದು ನಿಟ್ಟುಸಿರಿಟ್ಟು ಕರ್ಣದೇವ, ಪಾನಕ ತುಂಬಿದ ಬಟ್ಟಲನ್ನು ಜಗದೇಕಮಲ್ಲನಿಗೆ ಕೊಟ್ಟು ಮಧು ತುಂಬಿದ ಇನ್ನೊಂದು ಬಟ್ಟಲನ್ನು ತಾನು ತೆಗೆದುಕೊಂಡನು. ಇಬ್ಬರೂ ಸ್ವಸ್ತಿಪಾನ ಮಾಡಿದರು.

ಬಟ್ಟಲನ್ನು ಕೆಳಗಿಟ್ಟು ಜಗದೇಕಮಲ್ಲನು ಹೇಳಿದನು : “ಕಳೆದ ಕೆಲವು ವಾರಗಳಿಂದ ಬ್ರಹ್ಮೇಂದ್ರ ಶಿವಯೋಗಿಗಳೊಡನೆ ನಾನು ಈ ವಿಚಾರಗಳನ್ನು ಪ್ರಸ್ತಾಪಿಸಿದ್ದೇನೆ, ಕರ್ಣದೇವ. ಜೀವನ ವಿಧಾನ, ಕರ್ಮವಿಪಾಕ, ಇವೆರಡೂ ಪರಸ್ಪರ ಪೋಷಕವಸ್ತುಗಳು. ಒಂದರಿಂದ ಇನ್ನೊಂದು, ಅದರಿಂದ ಮತ್ತೊಂದು, ಈ ರೀತಿ ಕೊನೆಯಿಲ್ಲದ ಪರಂಪರೆ ಅದು. ಈ ವಿಷಚಕ್ರದಿಂದ ಪಾರಾಗಲು ಕರ್ಮ ವಿಶ್ರಾಂತಿಯೊಂದೇ ದಾರಿ, ಎಂದು ಹೇಳುತ್ತಾರೆ ಅವರು.”

“ಕರ್ಮವಿಶ್ರಾಂತಿ ಎಂದರೇನು?” ಎರಡನೆಯ ಸಾರಿ ಬಟ್ಟಲನ್ನು ತುಂಬಿಕೊಂಡು ಕರ್ಣದೇವ ಪ್ರಶ್ನಿಸಿದನು.

“ನಾವು ಒಂದು ಮುಂಜಾವಿನಿಂದ ಇನ್ನೊಂದು ಮುಂಜಾವಿನವರೆಗೆ ಮಾಡುವುದೆಲ್ಲ ಕರ್ಮಗಳೆ. ತತ್ವದರ್ಶಿಗಳು ಅವುಗಳನ್ನು ಪುಣ್ಯಪಾಪಗಳೆಂದು ವಿಭಾಗಿಸುತ್ತಾರೆ. ಯಾವ ಕರ್ಮದಿಂದ ನಮ್ಮ ಅಂತರಾತ್ಮನಿಗೆ ಸುಖವಾಗುವುದೋ, ಅನ್ಯರಿಗೆ ದುಃಖವಾಗುವುದಿಲ್ಲವೋ ಅವುಗಳೆಲ್ಲ ಪುಣ್ಯಕರ್ಮಗಳು. ಯಾವುದರಿಂದ ನಮ್ಮ ಅಂತರಾತ್ಮನಿಗೆ ಸುಖವಾಗುವುದಿಲ್ಲವೋ, ಅನ್ಯರಿಗೆ ದುಃಖವಾಗುವುದೋ ಅವುಗಳೆಲ್ಲ ಪಾಪಕರ್ಮಗಳು. ಪುಣ್ಯ ಪಾಪಗಳ ಈ ದ್ವಂದ್ವದಿಂದ ಮುಕ್ತನಾಗಿ