ಪುಟ:ಕ್ರಾಂತಿ ಕಲ್ಯಾಣ.pdf/೩೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೩೩೪

ಕ್ರಾಂತಿ ಕಲ್ಯಾಣ


ಕರ್ಮ ವಿಶ್ರಾಂತಿಯನ್ನು ಪಡೆಯಲೆಳಸುವ ಸಾಧಕನು ಮೊದಲು ಪಾಪಕರ್ಮಗಳನ್ನು ಬಿಡಬೇಕು. ಅದರಲ್ಲಿ ಸಫಲತೆ ಪಡೆದಾಗ ಸಾಧಕನಿಗೆ ಪುಣ್ಯಕರ್ಮಗಳು ಐಚ್ಛಿಕವಾಗುವುವು. ಮನಶ್ಯಾಂತಿ ಲಭಿಸುವುದು. ನಾನು ಬಂಧನದಲ್ಲಿದ್ದರೂ, ಲೋಕ ವ್ಯವಹಾರದಿಂದ ದೂರವಾಗಿದ್ದರೂ ಚಿರಸುಖಿಯಂತೆ ಕಾಣುವುದರ ಮರ್ಮವಿದು.”

“ನಿನ್ನ ಮಾತುಗಳು ನನಗೆ ಒಗಟೆಯ ನುಡಿಗಳಂತಿವೆ, ಭಂಡರಾಜ. ಒಂದೂ ಅರ್ಥವಾಗುತ್ತಿಲ್ಲ.”

“ನಿಮ್ಮಂಥವರಿಗೆ ಅರ್ಥವಾಗಲೆಂದು ಬಸವಣ್ಣನವರು ಸುಲಭವಾದ ಮಾತುಗಳಲ್ಲಿ ಹೀಗೆ ಹೇಳಿದ್ದಾರೆ-

“ದೇವಲೋಕ ಮರ್ತ್ಯಲೋಕವೆಂಬುದು ಬೇರಿಲ್ಲ, ಕಾಣಿಭೋ !
ಸತ್ಯವ ನುಡಿವುದೇ ದೇವಲೋಕ, ಮಿಥ್ಯವ ನುಡಿವುದೆ ಮರ್ತ್ಯಲೋಕ, :ಆಚಾರವೇ ಸ್ವರ್ಗ, ಅನಾಚಾರವೇ ನರಕ,
ಕೂಡಲ ಸಂಗಮದೇವಾ, ನೀವೇ ಪ್ರಮಾಣು.”

ಬಸವಣ್ಣನವರ ಹೆಸರು ಕೇಳಿ ಕರ್ಣದೇವನು ವಿಚಲಿತನಾಗಿ ಹೇಳಿದನು: ಆ ಮಹಾಮಹಿಮರ ನಿರ್ವಾಸನವೇ ಈಗಿನ ಎಲ್ಲ ಅನರ್ಥಗಳ ಮೂಲ, ಭಂಡರಾಜ.ಬಸವಣ್ಣನವರ ಪುಣ್ಯದಿಂದ ಶಾಂತಿ ಸಮೃದ್ಧಿಗಳ ಮಹಾನಗರವಾಯಿತು ಕಲ್ಯಾಣ. ಅವಿವೇಕಿ ಕ್ರಮಿತನ ಮಾತು ಕೇಳಿ ಅಣ್ಣ ಬಿಜ್ಜಳನು ಅವರನ್ನು ಕಲ್ಯಾಣದಿಂದ ಓಡಿಸಿದ. ಪ್ರಾರಂಭವಾಯಿತು ಅನರ್ಥ ಪರಂಪರೆ!”

ಜಗದೇಕಮಲ್ಲ ಅಚ್ಚರಿಯಿಂದ ಕರ್ಣದೇವನ ಕಡೆ ನೋಡಿದನು. ಈ ಪರಿವರ್ತನೆಯ ಅರ್ಥವೇನು? ಅದು ವಾಸ್ತವವೇ ವಂಚನೆಯೆ? ಎಂದು ಶಂಕಿಸಿತು ವಿವೇಕ.

“ಅನರ್ಥ ಪರಂಪರೆ ! ಯಾವ ವಿಚಾರ ನೀನು ಹೇಳುತ್ತಿರುವುದು?” ಎಂದು ಅವನು ಕರ್ಣದೇವನನ್ನು ಪ್ರಶ್ನಿಸಿದನು.

- ಕರ್ಣದೇವ ಹೇಳಿದನು: “ಮಂಗಳವೇಡೆಯ ಅಗ್ನಿದಾಹ, ಚಾಲುಕ್ಯರಾಣಿ ಬೆಂಕಿಯಲ್ಲಿ ಭಸ್ಮವಾದದ್ದು, ವಿಚಾರಣೆ ನಡೆಸದೆ ಮಧುವರಸಾದಿಗಳನ್ನು ಶೂಲಕ್ಕೇರಿಸಿದ್ದು, ಶರಣರನ್ನು ನಾಶಮಾಡುವ ಉದ್ದೇಶದಿಂದ ಮಾಧವನನ್ನು ದಂಡನಾಯಕನನ್ನಾಗಿ ನೇಮಿಸಿರುವುದು, ಇವೆಲ್ಲವೂ ಅನರ್ಥಗಳಲ್ಲವೆ? ಇದರಿಂದ ಕಲ್ಯಾಣದ ನಾಗರಿಕರು ಭಯಗ್ರಸ್ತರಾಗಿದ್ದಾರೆ. ಶರಣರು ಕಲ್ಯಾಣವನ್ನು ಬಿಟ್ಟು ಹೋಗಲು ನಿರ್ಧರಿಸಿದ್ದಾರೆ. ರಾಜ್ಯದ ಸಾಮಂತ ಮನ್ನೆಯರಲ್ಲಿ ಅಸಮಾಧಾನ