ಪುಟ:ಕ್ರಾಂತಿ ಕಲ್ಯಾಣ.pdf/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೨

ಕ್ರಾಂತಿ ಕಲ್ಯಾಣ

ನೀವು ಎರಡು ದಿನಗಳು ಇಲ್ಲಿಯೇ ಇದ್ದು ಮಹಾರಾಜ ಜಗದೇಕಮಲ್ಲರಸರು ಪ್ರೇಮಾರ್ಣವನ ಪಟ್ಟಾಭಿಷೇಕಕ್ಕೆ ಒಪ್ಪುವಂತೆ ಮಾಡಬೇಕು?” ಎಂದನು.

"ಈ ರಾತ್ರಿ ಹಿಂದಿರುಗಿ ನಾಳೆ ಪುನಃ ಬಂದರಾಗದೆ?"

ಕ್ರಮಿತನು ಯೋಚಿಸಿ ಉತ್ತರ ಕೊಟ್ಟನು: "ಚಾಲುಕ್ಯರಾಜ್ಯದ ಈಗಿನ ಆತಂಕಕಾರಿ ಪರಿಸ್ಥಿತಿಯಲ್ಲಿ ಜಗದೇಕಮಲ್ಲರಸರಿಗೂ ಹೊರಗಿನ ಜನರಿಗೂ ಯಾವ ಸಂಬಂಧವೂ ಇಲ್ಲದಂತೆ ನಾವು ಎಚ್ಚರದಿಂದ ನೋಡಿಕೊಳ್ಳಬೇಕಾಗಿದೆ. ಒಂದು ಸಾರಿ ಇಲ್ಲಿಗೆ ಬಂದವರು, ಬಂದ ಕೆಲಸ ಮುಗಿಯುವವರೆಗೆ ಹೊರಗೆ ಹೋಗುವಂತಿಲ್ಲ. ಅದು ರಾಜಗೃಹದಲ್ಲಿ ಅನುಸರಿಸುತ್ತಿರುವ ನಿಯಮ. ಜಗದೇಕಮಲ್ಲರಸರ ಅಭಿಪ್ರಾಯದಲ್ಲಿ ನಾವು ಅಪೇಕ್ಷಿಸುವ ಪರಿವರ್ತನೆ ಆಗುವವರೆಗೆ ನೀವು ಇಲ್ಲಿರಬೇಕಾಗುವುದು. ಈ ಎಲ್ಲ ವಿಚಾರಗಳನ್ನು ನಾನು ಮೊದಲೇ ಯೋಚಿಸಿ ಆಜ್ಞಾಪತ್ರವನ್ನು ಸಿದ್ಧಪಡಿಸಿಕೊಂಡು ನಿಮ್ಮ ಬಿಡಾರಕ್ಕೆ ಬಂದೆ. ನಿಮ್ಮನ್ನು ಇಲ್ಲಿಗೆ ಕರೆತರುವ ವಿಚಾರ ನಿಮಗಾಗಲಿ, ನಿಮ್ಮ ಮಿತ್ರ ಬ್ರಹ್ಮರಾಜಸೇಟರಿಗಾಗಲಿ ತಿಳಿಯಕೂಡದೆಂಬುದು ನನ್ನ ಉದ್ದೇಶವಾಗಿತ್ತು."

ಹಾಗಾದರೆ ಆಮೇಲೆ ನಡೆದ ಬಿಜ್ಜಳರಾಯರ ಸಂದರ್ಶನ, ನಿಮ್ಮ ಈ ನಾಟಕದ ಒಂದು ದೃಶ್ಯವೇ ಆಗಿರಬೇಕು"-ಅಗ್ಗಳನೆಂದನು, ನಿರಾಶೆಗೊಂಡವನಂತೆ ನಿಟ್ಟುಸಿರುಟ್ಟು,

"ಅದು ನಾಟಕದಲ್ಲಿ ಬಹು ಮುಖ್ಯವಾದ ಒಂದು ಭಾಗ, ಅಗ್ಗಳದೇವರಸರೆ. ನಿಜವಾದ ರಾಜನ ಪ್ರವೇಶ ಆ ದೃಶ್ಯದಲ್ಲಿಯೇ. ಉಳಿದ ಪಾತ್ರಗಳೆಲ್ಲ ವಂಚನೆಯ ಖೋಟಾನಾಣ್ಯಗಳಂತೆ, ಆದರೆ ಅದಕ್ಕಾಗಿ ನೀವು ಚಿಂತಿಸುವ ಅಗತ್ಯವಿಲ್ಲ. ಚಾಲುಕ್ಯ ರಾಣಿವಾಸದಂತೆ ನಿಮ್ಮ ಸುಖ ವಸತಿಗೆ ಬೇಕಾದ ವಸ್ತುಗಳೆಲ್ಲವೂ ಇಲ್ಲಿರುವವು."-ಉಪಹಾಸದ ದನಿಯಿಂದ ಕ್ರಮಿತನು ಹೇಳಿದನು.

"ಆಜ್ಞಾಪತ್ರದ ಒಕ್ಕಣೆಯೇನೆಂಬುದನ್ನು ನಾನು ತಿಳಿಯಬಹುದೆ?"

"ಪಂಡಿತಕವಿ ಅಗ್ಗಳದೇವರು ಮಹಾರಾಜ ಜಗದೇಕಮಲ್ಲರಸರ ಸಮ್ಮುಖದ ಕಾವ್ಯೋಪದೇಶಕರಾಗಿ ನಿಯುಕ್ತರಾಗಿದ್ದಾರೆ, ಅವರ ಸುಖ ವಸತಿಗೆ ಏರ್ಪಡಿಸತಕ್ಕದ್ದು ಎಂದು."

"ನಾನೇ ಚತುರನೆಂದು ತಿಳಿದಿದ್ದೆ, ನಾರಣ ಕ್ರಮಿತರೆ. ಆದರೆ ನಿಮ್ಮ ಚಾತುರ್ಯದ ಮುಂದೆ ನಾನು ಕೇವಲ ಶಿಶು. ಸಂತೋಷದಿಂದ ಸೋಲೊಪ್ಪಿಕೊಳ್ಳುತ್ತೇನೆ."

-ವಿಚಲಿತನಾದಂತೆ ಆವೇಶದಿಂದ ಅಗ್ಗಳನು ನುಡಿದನು.