ಪುಟ:ಕ್ರಾಂತಿ ಕಲ್ಯಾಣ.pdf/೩೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ರಾಜಗೃಹದಿಂದ ಹೊನ್ನಮ್ಮನ ಚಾವಡಿಗೆ

೩೬೩


ಪ್ರೋತ್ಸಾಹ ಕೊಡುತ್ತಿರುವುದು. ಕೆಲವು ಮಂದಿ ಸಾಮಂತರೂ ಈ ಅಪಾಮಾರ್ಗ ಹಿಡಿದಿದ್ದಾರೆ. ಈ ವಿಷಮ ಪರಿಸ್ಥಿತಿಯಲ್ಲಿ ರಾಜನ ಕರ್ತವ್ಯವೇನು ಎಂಬುದನ್ನು ಈಗ ನಾವು ನಿರ್ಧರಿಸಬೇಕಾಗಿದೆ. ವರ್ಣಾಶ್ರಮ ಧರ್ಮಗಳ ರಕ್ಷಣೆ ರಾಜನ ಕರ್ತವ್ಯ, ನಮ್ಮ ಸಂಸ್ಕೃತಿ ಧರ್ಮಶಾಸ್ತ್ರ ಇತಿಹಾಸಗಳು ಈ ಸತ್ಯವನ್ನು ಘಂಟಾಘೋಷವಾಗಿ ಹೇಳುತ್ತವೆ. ಶರಣರ ಆಕ್ರಮಣದಿಂದ ವರ್ಣಾಶ್ರಮ ಧರ್ಮವನ್ನು ರಕ್ಷಿಸುವುದು ಈಗ ರಾಜನ ಕರ್ತವ್ಯ, ಇದಕ್ಕಾಗಿ ನಾವು ಕೈಗೊಳ್ಳಬೇಕಾದ ಕಾರ್ಯವಿಧಾನವನ್ನು ನಮ್ಮ ಹಿರಿಯ ಸಾಮಂತರೂ, ಮಹಾದಂಡನಾಯಕರೂ ಆದ ಮಾಧವ ನಾಯಕರು ನಿಮಗೆ ತಿಳಿಸುತ್ತಾರೆ,” ಎಂದು ಮುಗಿಸಿದನು.

ಮಾಧವ ನಾಯಕನು ಶರಣಧರ್ಮದ ವಿರೋಧಿಯೆಂದು ಹೆಸರಾಗಿದ್ದನು. ದೀರ್ಘಕಾಲದಿಂದ ನಡೆದು ಬಂದಿದ್ದ ಅವನ ದ್ವೇಷಭಾವನೆಯ ವಿಷಲತೆ, ಅನುಕೂಲವಾದ ಸಮಯ ಸನ್ನಿವೇಶಗಳೂ ದೊರೆತು, ಕೆಲವೇ ದಿನಗಳಲ್ಲಿ ದೊಡ್ಡದಾಗಿ ಬೆಳೆದು ಉಗ್ರರೂಪ ತಾಳಿತ್ತು. ಬಿಜ್ಜಳನ ಅನುಮತಿ ಪಡೆದು, ಸಭೆಯಲ್ಲಿದ್ದವರಿಗೆ ವಂದಿಸಿ ಅವನು ಹೇಳಿದನು :

“ಬಿಜ್ಜಳರಾಯರ ಆಶ್ರಯದಲ್ಲಿ ಕಸಪಯಾದಿ ದುರ್ಮಂತ್ರಿಗಳು ಪ್ರಾರಂಭಿಸಿದ ಧರ್ಮಕ್ರಾಂತಿಯ ಚಳುವಳಿಯೇ ಈಗ ನಾವು ಎದುರಿಸಬೇಕಾಗಿರುವ ವಿಷಮ ಪರಿಸ್ಥಿತಿಯ ಕಾರಣ. ಈ ಆತಂಕ ಪರಿಹಾರವಾಗಿ ದೇಶಾದ್ಯಂತ ಸುಖಶಾಂತಿಗಳು ನೆಲೆಸಲು ನಾವು ಏನು ಮಾಡಬೇಕೆಂಬುದನ್ನು ನಾನು ದೀರ್ಘವಾಗಿ ಆಲೋಚಿಸಿದ್ದೇನೆ, ಜನತೆಯಲ್ಲಿ ಧರ್ಮಕ್ರಾಂತಿಯನ್ನು ಹರಡುತ್ತಿರುವ ಶರಣಧರ್ಮದ ಮೂಲೋತ್ಪಾಟನೆಯೇ ಆ ಪರಿಹಾರ ಮಾರ್ಗ. ಶರಣಧರ್ಮಕ್ಕೆ ಪ್ರೋತ್ಸಾಹ ಕೊಡುತ್ತಿರುವ ಎಲ್ಲ ಶೈವಮಠಗಳನ್ನೂ ನಾವು ನಾಶಮಾಡಬೇಕು. ಬೇರನ್ನು ಕಿತ್ತು ಹಾಕಿದರೆ ಗಿಡ ತಾನಾಗಿ ಒಣಗುವುದು. ದೇಶದ ಎಲ್ಲ ಕಡೆ, ಏಕಕಾಲದಲ್ಲಿ ಈ ವಿಧ್ವಂಸ ಕಾರ್ಯ ನಡೆಯಬೇಕು. ಅದರ ಪೂರ್ವಸಿದ್ಧತೆ ಮುಗಿಯಲು ಕೆಲವು ವಾರಗಳಾದರೂ ಬೇಕಾಗುವುದು. ಆದರೆ ರಾಜಧಾನಿ ಕಲ್ಯಾಣದ ಪರಿಸ್ಥಿತಿ, ಹೀಗೆಯೇ ಬಿಟ್ಟರೆ ಇನ್ನೂ ಕೆಡುವ ಸಂಭವವಿರುವುದರಿಂದ, ನಾವು ಕೂಡಲೇ ಕಾರ್ಯಗತ ಮಾಡಬಹುದಾದ ಅವಸರದ ಯೋಜನೆಯೊಂದನ್ನು ರಚಿಸಿದ್ದೇನೆ.”

ಇಷ್ಟು ಹೇಳಿ ಮಾಧವ ನಾಯಕನು ಪ್ರತಿಕ್ರಿಯೆಗಾಗಿ ಸಭಾಸದರ ಕಡೆಗೆ ತಿರುಗಿದನು. ಎಲ್ಲರೂ ಮೌನವಾಗಿ ಕೇಳುತ್ತ ಕುಳಿತಿದ್ದರು. ಅನುಮೋದನೆ ವಿರೋಧಗಳ ಸೂಚನೆ ಯಾರ ಮುಖದಲ್ಲಿಯೂ ಕಾಣಲಿಲ್ಲ.

ದೀವಟಿಗೆಯ ಭಟರಿಬ್ಬರು ಸಭಾಗೃಹಕ್ಕೆ ಬಂದು ದೀಪಗಳಿಗೆ ಎಣ್ಣೆ ಹಾಕಿ,