ಪುಟ:ಕ್ರಾಂತಿ ಕಲ್ಯಾಣ.pdf/೩೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೩೬೪

ಕ್ರಾಂತಿ ಕಲ್ಯಾಣ


ಬತ್ತಿಗಳನ್ನು ಸರಿಪಡಿಸಲು ಅವಕಾಶವಿತ್ತು ಬಿಜ್ಜಳನು, “ನಿಮ್ಮ ಅವಸರದ ಕಾರ್ಯ ವಿಧಾನವನ್ನು ಸಭಾಸದರಿಗೆ ವಿವರಿಸಿರಿ, ಮಾಧವ ನಾಯಕರೆ,” ಎಂದನು.

ಮಾಧವ ನಾಯಕನು ಮುಂದುವರಿದು ಹೇಳಿದನು : “ಕಲ್ಯಾಣದ ಒಂದೊಂದು ಶೈವಮಠವೂ ಕ್ರಾಂತಿಯ ಕೇಂದ್ರ. ಮಠಪತಿಗಳು, ಕಾರ್ಯಕರ್ತರು, ಜಂಗಮ ಸನ್ಯಾಸಿಗಳು, ಗಣಾಚಾರದ ಭಕ್ತರು, ಇವರೆಲ್ಲ ನಗರದಲ್ಲಿ ಅಶಾಂತಿ ಹರಡಲು ಸಮಯ ಕಾಯುತ್ತಿದ್ದಾರೆ. ಮಹಮನೆಯು ಈ ಕ್ರಾಂತಿಯ ಮಹಾಕೇಂದ್ರ, ಅದರ ಅಂಗವಾದ ಅನುಭವಮಂಟಪದ ವಿಚಾರಗೋಷ್ಠಿ, ಧಾರ್ಮಿಕ ಪ್ರಸಾರದ ಸೋಗಿನಲ್ಲಿ ರಾಜನಿಗೆ ವಿರುದ್ಧವಾದ ಕ್ರಾಂತಿಭಾವನೆಗಳನ್ನು ಹರಡುತ್ತಿದೆ. ತಮ್ಮ ಮೇಲೆ ರಾಜನು ದಬ್ಬಾಳಿಕೆ ನಡೆಸುತ್ತಿರುವನೆಂಬ ಅಪವಾದವನ್ನು ಜನರಲ್ಲಿ ಹರಡಿ ಕಲ್ಯಾಣವನ್ನು ಬಿಟ್ಟು ಹೋಗಲು ಈಗ ಶರಣರು ಹವಣಿಸುತ್ತಿದ್ದಾರೆ. ಈ ವಲಸೆಗೆ ನಾವು ಅವಕಾಶ ಕೊಟ್ಟರೆ, ಕಲ್ಯಾಣದ ಕ್ರಾಂತಿ ರಾಜ್ಯದ ಎಲ್ಲ ಕಡೆ ಹರಡಲು ಅನುವು ಮಾಡಿಕೊಟ್ಟಂತಾಗುವುದು ಶರಣರು ಯಾರೇ ಆಗಲಿ, ನಗರವನ್ನು ಬಿಟ್ಟು ಹೋಗದಂತೆ ಆಜ್ಞೆ ಮಾಡಿ, ಚಳುವಳಿಯಲ್ಲಿ ಮುಖ್ಯಪಾತ್ರ ವಹಿಸಿದ ಎಲ್ಲ ಶೈವಮಠಗಳನ್ನೂ ನಾಶಮಾಡುವುದು ಈಗ ನಾವು ಅನುಸರಿಸಬೇಕಾದ ಅವಸರದ ಕಾರ್ಯಕ್ರಮ. ನೀವು ಅನುಮತಿ ಕೊಡುವುದಾದರೆ ನನ್ನ ಮಹಾಸೈನ್ಯ ಒಂದೇ ದಿನದಲ್ಲಿ ಈ ಕಾರ್ಯ ಮಾಡಬಲ್ಲುದು.

ಸಭೆಯಲ್ಲಿ ಗಂಭೀರ ಮೌನ. ಬಿಜ್ಜಳನ ಹೊರತಾಗಿ ಉಳಿದವರೆಲ್ಲ ಸ್ತಂಭಿತರಾಗಿ ಕುಳಿತಿದ್ದರು. ಮಾಧವ ನಾಯಕನ ದ್ವೇಷಸಾಧನೆ ಇಂತಹ ಉಗ್ರರೂಪ ತಾಳುವುದೆಂಬ ಕಲ್ಪನೆಯೂ ಅವರಿಗಿರಲಿಲ್ಲ. ಸಭಾಸದರ ಪ್ರತಿಕ್ರಿಯೆಗಾಗಿ ಕಾಯುತ್ತ ಬಿಜ್ಜಳನು ಸುಮ್ಮನೆ ಕುಳಿತನು. ಸೂಚನೆಯನ್ನು ಅನುಮೋದಿಸಿ ಕಾರ್ಯಾಚರಣೆಯ ಹೊಣೆಯನ್ನು ಮಾಧವ ನಾಯಕನಿಗೆ ವಹಿಸುವುದು ಅವನ ಉದ್ದೇಶವಾಗಿತ್ತು.

ಅಷ್ಟರಲ್ಲಿ ಕರ್ಣದೇವನು ಎದ್ದು ನಿಂತು, “ಈ ವಿಚಾರದಲ್ಲಿ ನಾನು ಮಾತಾಡಬೇಕಾಗಿದೆ,” ಎಂದನು.

ಸಭಾಸದರು ಕುತೂಹಲದಿಂದ ಕರ್ಣದೇವನ ಕಡೆ ತಿರುಗಿದರು. “ಸೂಚನೆಯ ಅನುಮೋದನೆಗೆ ಪ್ರಭುಗಳು ಇವನನ್ನೇಕೆ ಆರಿಸಿದರು?” “ಸೋದರನೆಂಬ ಅಭಿಮಾನದಿಂದಲೇ?” “ವಾಗ್ಮಿಯೂ ಚತುರನೂ ಆದ ನಾರಣಕ್ರಮಿತನೇಕೆ ಸುಮ್ಮನೆ ಕುಳಿತಿದ್ದಾನೆ ?” ಎಂದು ಅವರು ತಮ್ಮ ತಮ್ಮಲ್ಲಿ ಆಡಿಕೊಂಡರು. ಕರ್ಣದೇವನು ಚರ್ಚೆಯಲ್ಲಿ ಭಾಗವಹಿಸುವುದು ಬಿಜ್ಜಳನಿಗೂ ಇಷ್ಟವಿರಲಿಲ್ಲ. ರಾಜಕೀಯದಲ್ಲಿ ಚತುರನಲ್ಲವೆಂಬ ಕಾರಣದಿಂದ, “ಹೇಳುವುದನ್ನು ಬೇಗ ಮುಗಿಸು