ಪುಟ:ಕ್ರಾಂತಿ ಕಲ್ಯಾಣ.pdf/೪೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೮೮ ಕ್ರಾಂತಿ ಕಲ್ಯಾಣ ಬಿಜ್ಜಳರಾಯರ ಮಹಾ ಸೇನಾನಿ ಮಾಧವ ದಂಡನಾಯಕನ ಉದ್ದೇಶ. ಕಳೆದ ಹತ್ತು ವರ್ಷಗಳಿಂದ ಮಹಮನೆಯಲ್ಲಿ ಸಂಗ್ರಹವಾಗಿರುವ ಶೈವಧರ್ಮ ವಚನ ಶಾಸ್ತ್ರಗಳ ಭಂಡಾರವನ್ನು ಸುರಕ್ಷಿತ ಸ್ಥಾನಗಳಿಗೆ ಕಳುಹಿಸಿ, ಅವುಗಳ ರಕ್ಷಣೆ ಪ್ರಸಾರಗಳಿಗಾಗಿ ಏರ್ಪಡಿಸುವುದು ಮುಂದಿನ ಪೀಳಿಗೆಗೆ ನಾವು ಸಲ್ಲಿಸಬೇಕಾದ ಸೇವೆ. ಶರಣರು ಕಲ್ಯಾಣವನ್ನು ಬಿಟ್ಟು ಹೋಗುತ್ತಿರುವುದು ಈ ಹೊಣೆಯನ್ನು ನಿರ್ವಹಿಸುವ ಮಹದುದ್ದೇಶಕ್ಕಾಗಿ ನಮ್ಮ ಜೀವನದ ಸಾರ್ಥಕತೆ ಈ ಕಾರ್ಯವನ್ನು ಅವಲಂಬಿಸಿದೆ. ಅದು ಮುಗಿಯಿತೆಂದರೆ ಅಣ್ಣನವರು ಹೇಳುವಂತೆ ಮರಣವೇ ಮಹಾನವಮಿ ನಮಗೆ.” ಅವಸರದ ಸಂದರ್ಭಗಳಲ್ಲಿ ಮಾತಿನ ಮಾಲೆ ಕಟ್ಟುವುದು ಮಾಚಿದೇವರ ಅಭ್ಯಾಸವಾಗಿರಲಿಲ್ಲ, ನಿಮ್ಮ ಅಭಿಮತವೇ ನನ್ನ ಅಭಿಮತ. ಬಸವಣ್ಣನವರ ಒಪ್ಪಿಗೆ ನಮಗೆ ದೊರಕಿದೆ. ನಾಳೆ ಆರೋಗಣೆ ಮುಗಿಸಿಕೊಂಡು ಅಪರಾಹ್ನದ ವೇಳೆಗೆ ಕಲ್ಯಾಣವನ್ನು ಬಿಡಲು ನಾವು ಸಿದ್ದರಾಗಬೇಕು,” ಎಂದರು. ಗಂಗಾಂಬಿಕೆಯ ಮಾತುಗಳು ಈ ನಿರ್ಧಾರಕ್ಕೆ ಉಪಶೃತಿಯೆಂದು ಶರಣರು ತಿಳಿದರು. “ಅಣ್ಣನವರು ನಿನ್ನ ಮುಖಾಂತರ ಏನಾದರೂ ವಿಶೇಷ ಸಂದೇಶ ಕಳುಹಿಸಿರುವರೆ, ಅಕ್ಕಾ?” ಎಂದು ಚೆನ್ನಬಸವಣ್ಣನವರು ಕೇಳಿದಾಗ ಗಂಗಾಂಬಿಕೆ, “ನನ್ನನ್ನು ಬೀಳ್ಕೊಡುವಾಗ ಅವರು, 'ಶರಣರ ವಲಸೆಯಲ್ಲಿ ನೀನು ಸಂಗಡಿದ್ದರೆ ಒಳ್ಳೆಯದು. ಸಂಗಮನಾಥನ ಪಾಲನೆ ಪೋಷಣೆಗಳ ಭಾರ ಸಂಪೂರ್ಣವಾಗಿ ಅಕ್ಕ ನಾಗಲಾಂಬೆಯ ಮೇಲೆ ಬೀಳದಂತೆ ನೋಡಿಕೊಳ್ಳತಕ್ಕದ್ದು' ಎಂದು ಹೇಳಿದರು. ಇದು ಹೊರತಾಗಿ ರಹಸ್ಯ ಸಂದೇಶವೇನೂ ಇಲ್ಲ,” ಎಂದು ಉತ್ತರಕೊಟ್ಟಳು. ವಾಸ್ತವದಲ್ಲಿ ಗಂಗಾಂಬಿಕೆ ಬಸವಣ್ಣನವರ ರಹಸ್ಯ ಸಂದೇಶವೊಂದನ್ನು ಸಂಗಡ ತಂದಿದ್ದಳು. ಅದನ್ನು ಅಷ್ಟೇ ರಹಸ್ಯವಾಗಿ ನೀಲಲೋಚನೆಗೆ ಮುಟ್ಟಿಸುವುದು ಅವಳ ಹೊಣೆಯಾಗಿತ್ತು. ಆ ದಿನ ಪೂಜೆ ಆರೋಗಣೆಗಳು ಮುಗಿದ ಮೇಲೆ ಗಂಗಾಂಬಿಕೆ ಏಕಾಂತದಲ್ಲಿ ನೀಲಲೋಚನೆಗೆ ಹೇಳಿದಳು-"ನಿನಗೊಂದು ಗುಟ್ಟಾದ ಸುದ್ದಿಯಿದೆ, ಅಕ್ಕಾ.” ನೀಲಲೋಚನೆ ಕಾತರಳಾಗಿ, “ನೀನು ಇದ್ದಕ್ಕಿದ್ದಂತೆ ಹಿಂತಿರುಗಿದಾಗಲೆ ಏನೋ ವಿಶೇಷವಿದೆಯೆಂದು ತಿಳಿದೆ, ಗಂಗಾ. ಅವರು ಏನು ಹೇಳಿ ಕಳುಹಿಸಿದ್ದಾರೆ?” ಎಂದಳು. “ನಾನು ಅವರ ಸಂಗಡ ಸಂಗಮಕ್ಕೆ ಹೋದದ್ದು ಸರಿಯಲ್ಲ. ಅದರಿಂದ ನಿನ್ನನ್ನು ಪತಿಸೇವೆಯಿಂದ ವಂಚಿಸಿದೆ ಎಂಬುದು ಈಗ ನನಗೆ ಅರಿವಾಗುತ್ತಿದೆ,