ಪುಟ:ಕ್ರಾಂತಿ ಕಲ್ಯಾಣ.pdf/೪೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮಹಾಪ್ರಸ್ಥಾನ ೩೯೯ ಸಿದ್ದರಾಗಬೇಕು. ಹಾಗಲ್ಲದೆ ನಾವು ವಲಸೆ ಹೋಗುವುದನ್ನು ತಡೆಯುವುದಕ್ಕಾಗಿ ಅವರು ಮಹಮನೆಯನ್ನು ಸುತ್ತುಗಟ್ಟಿದ್ದರೆ ಮುಂದೇನಾಗುವುದೆಂದು ಕಾದು ನೋಡಬೇಕಾಗುವುದು,' ಎಂದು. ಆಗ ನಾನು ಶಿವನಿಚ್ಚೆಯಂತೆ ನಡೆಯಲಿ ಎಂದು ನಿಶ್ಚಯ ಮಾಡಿಕೊಂಡು ಇಲ್ಲಿಗೆ ಬಂದೆ. ನಾವು ಎಂತಹ ವಿಪತ್ತಿನಲ್ಲಿ ಬಿದ್ದಿರುವೆವೆಂದು ಅವರಿಗೆ ವಿವರಿಸಿ ವಚನಗಾನವನ್ನು ಕೇಳುತ್ತ ಶಿವನಲ್ಲಿ ಮನವಿಟ್ಟು ಮೌನವಾಗಿ ಕುಳಿತಿರಬೇಕೆಂದು ಹೇಳಿದೆ. ನೀವು ಬಂದ ಕೂಡಲೆ ಇಲಿಗೆ ಕರೆತರಬೇಕೆಂದು ಹೇಳಿ ಶರಣರಿಬ್ಬರನ್ನು ದಿಡ್ಡಿಯ ಬಾಗಿಲ ಬಳಿ ಕಾವಲಿರಲು ಕಳುಹಿಸಿದೆ. ಇದು ಇಲ್ಲಿಯ ಸಮಾಚಾರ” ಚೆನ್ನಬಸವಣ್ಣನವರ ನುಡಿಗಳಲ್ಲಿ ಭಯದ ಸೂಚನೆಯಿರಲಿಲ್ಲ. ದೃಢಕಂಠದಿಂದ ನಿರ್ಲಿಪ್ತರಂತೆ ಅವರು ನಡೆದುದನ್ನು ಹೇಳಿದರು. ಮಾಚಿದೇವರು ನಗರದಲ್ಲಿ ತಾವು ಕಂಡಿದ್ದನ್ನು ವಿವರಿಸಿ, “ನಾನು ಬಂದಾಗ ಮಹಮನೆಯ ಸಮೀಪ ಎಲ್ಲಿಯೂ ಸೈನ್ಯದ ಸುಳಿವಿರಲಿಲ್ಲ. ಮಹಮನೆಯನ್ನು ಸುತ್ತುಗಟ್ಟುವುದರಲ್ಲಿ ಮಾಧವ ನಾಯಕನ ಉದ್ದೇಶ ಮೊದಲು ಏನೇ ಇರಲಿ, ಆಮೇಲೆ ಕಲಚೂರ್ಯ ಅರಮನೆಯಲ್ಲಿ ನಡೆದ ಘಟನೆಗಳಿಂದ ಅದು ಬದಲಾವಣೆಯಾಗಿರಬೇಕು. ಅದರಿಂದಲೆ ಅವನು ಸೈನ್ಯದಳವನ್ನು ಹಿಂದಕ್ಕೆ ಕರೆಸಿಕೊಂಡಿದ್ದಾನೆ. ಅರಮನೆಯಲ್ಲಿ ಏನು ನಡೆಯಿತೆಂಬುದು ಯಾರಿಗೂ ತಿಳಿಯದು. ಅದೇನೇ ಇರಲಿ, ಅದರ ಫಲವಾಗಿ ಈ ರಾತ್ರಿ ನಗರದಲ್ಲಿ ಬಿಜ್ಜಳನ ಆಡಳಿತ ಸ್ತಂಭಿತವಾಗಿದೆ. ಮಾಧವ ನಾಯಕನ ಸೈನ್ಯದಳಗಳು, ನಗರ ರಕ್ಷಕ ಪಡೆ, ಕಲಚೂರ್ಯ ಅರಮನೆಯ ಸಮೀಪದಲ್ಲಿವೆ. ಮೊದಲೇ ಗೊತ್ತಾಗಿದ್ದಂತೆ ಮಹಮನೆಯನ್ನು ನಾವು ಕೂಡಲೇ ಬಿಡಬೇಕು.” ಮಾಚಿದೇವರು ಮಾತನಾಡುತ್ತಿದ್ದಂತೆ ಸಕಲೇಶ ಮಾದರಸರು ವೇದಿಕೆಯಿಂದಿಳಿದು ಅಲ್ಲಿಗೆ ಬಂದರು. ಮಾಚಿದೇವರು ಮೊದಲಿಂದ ಎಲ್ಲವನ್ನೂ ಮತ್ತೊಂದು ಸಾರಿ ವಿವರಿಸುವುದು ಅಗತ್ಯವಾಯಿತು. ಕೊನೆಗೆ ಚೆನ್ನಬಸವಣ್ಣನವರು ಹೇಳಿದರು : “ಈಗ ನಾವು ವಿಷಮ ಸಂಕಟದಲ್ಲಿ ಬಿದ್ದಿದ್ದೇವೆ. ನಾವು ವಲಸೆ ಹೋಗದಂತೆ ತಡೆಯುವುದು ಬಿಜ್ಜಳರಾಯರ ಉದ್ದೇಶವಾದರೆ, ನಗರದ ಮಹಾದ್ವಾರಗಳಿಗೆ ಆಗಲೆ ಆಜ್ಞೆ ಕಳುಹಿಸಲ್ಪಟ್ಟಿರುತ್ತದೆ. ಕಾವಲು ಭಟರು ನಮ್ಮನ್ನು ತಡೆದರೆ ಪುನಃ ಮಹಮನೆಗೆ ಹಿಂದಿರುಗಬೇಕಾಗುವುದು. ಆದ್ದರಿಂದ ಸೂರ್ಯೋದಯದವರೆಗೆ ಕಾದು ನೋಡಿ ಅನಂತರ ಮುಂದೇನು ಮಾಡಬೇಕೆಂಬುದನ್ನು ನಿರ್ಧರಿಸಬಹುದು.”