ಪುಟ:ಕ್ರಾಂತಿ ಕಲ್ಯಾಣ.pdf/೪೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮಹಾಪ್ರಸ್ಥಾನ ೪೫ ನೋಡುತ್ತಿದ್ದರು. ನುರಿತ ರಾಜಕಾರಿಣಿಯಂತೆ ಮಾಚಿದೇವರು ದನಿ ತಗ್ಗಿಸಿ ಹೇಳಿದರು : “ನೆನ್ನಿನ ಸಂಜೆ ಧರ್ಮಾಧಿಕರಣದ ಚಾವಡಿಯಲ್ಲಿ ಬಿಜ್ಜಳನ ಅಧ್ಯಕ್ಷತೆಯಲ್ಲಿ ಸೈನ್ಯಾಧಿಕಾರಿಗಳ ರಹಸ್ಯ ಸಭೆ ನಡೆಯಿತು. ಕಲ್ಯಾಣದ ಶೈವ ಮಠಗಳ ನಾಶ ಮತ್ತು ಶರಣರ ನಿರ್ಮೂಲನಕ್ಕಾಗಿ ಮಾಧವ ನಾಯಕನು ರಚಿಸಿದ್ದ ಯೋಜನೆ ಚರ್ಚಿಸಲ್ಪಟ್ಟು ಬಿಜ್ಜಳನ ಅನುಮೋದನೆ ಪಡೆಯಿತು. ಯೋಜನೆಯನ್ನು ಕಾರ್ಯಗತಮಾಡುವ ಹೊಣೆಯನ್ನು ಬಿಜ್ಜಳನು ಮಾಧವ ನಾಯಕನಿಗೊಪ್ಪಿಸಿದನು. ಸಭೆ ಮುಗಿದು ಕಲಚೂರ್ಯ ಅರಮನೆಗೆ ಹಿಂದಿರುಗಿದ ಮೇಲೆ ಸ್ವಲ್ಪ ಹೊತ್ತಿಗೆ, ಅರಮನೆಯ ಚಾವಡಿಯಲಿ, ಬಿಜ್ಜಳನು ಕೊಲ್ಲಲ್ಪಟ್ಟನು.” ಮೇಘವಿಲ್ಲದ ಗಗನದಿಂದ ಸಿಡಿಲೆರಗಿದಂತೆ ಸಭೆಯಲ್ಲಿದ್ದವರು ಸ್ತಂಭಿತರಾದರು. ಬಿಜ್ಜಳನ ವಧೆ ಮಧುವರಸಾದಿಗಳನ್ನು ಶೂಲಕ್ಕೇರಿಸಿದ, ಶರಣ ಧರ್ಮದ ವಿನಾಶಕ್ಕಾಗಿ ಪಣತೊಟ್ಟ ಚಾಲುಕ್ಯ ರಾಜ್ಯಾಪಹಾರಿ ಮಹಾ ಮಂಡಲೇಶ್ವರನ ಕೊಲೆ! ಗಣಾಚಾರಿ ಯೋಧರ ತಂಡ ದಶದಿಕ್ಕುಗಳು ಮೊಳಗುವಂತೆ ಜಯಘೋಷ ಮಾಡಿತು : “ಪರವಾದಿಗೆ ಸರಿಯಾದ ಅಂತ್ಯ” “ಮಧುವರಸಾದಿಗಳನ್ನು ಶೂಲಕ್ಕೇರಿಸಿದ ಸರ್ವಾಧಿಕಾರಿಯ ಮೇಲಿನ ಸೇಡು ತೀರಿತು!” “ಚಾಲುಕ್ಯರಾಜ್ಯ ನಿಷ್ಕಂಟಕವಾಯಿತು!” -ಎಂಬ ಕೂಗು ಎಲ್ಲ ಕಡೆಯಿಂದ ಕೇಳಿಬಂದಿತು. ಮಾಚಿದೇವರು ಕೈಯೆತ್ತಿ ಸುಮ್ಮನಿರುವಂತೆ ಸನ್ನೆಮಾಡಿದರು. ಸಭೆ ಶಾಂತವಾದ ಮೇಲೆ ಅವರು ಪುನಃ ಹೇಳಿದರು : “ನಿಮ್ಮ ಈ ಜಯಧ್ವನಿ, ಅರ್ಥವಿಲ್ಲದ ವ್ಯರ್ಥ ಘೋಷಣೆಗಳು, ನನ್ನನ್ನು ದುಃಖಕ್ಕೀಡುಮಾಡಿವೆ. ದಯಮಾಡಿ ಶಾಂತ ಚಿತ್ತದಿಂದ ಸುಮ್ಮನೆ ಕುಳಿತು ನಾನು ಹೇಳುವುದನ್ನು ಮನಮುಟ್ಟಿ ಕೇಳಬೇಕಾಗಿ ಬೇಡುತ್ತೇನೆ. ಬಿಜ್ಜಳನ ವಧೆಯಿಂದ ಶರಣರ ಹಿತಸಾಧನೆಯಾಗುವುದೆಂದು ನೀವು ಭಾವಿಸಿದ್ದರೆ ಅದು ನಿರರ್ಥಕ ಕಲ್ಪನೆ. ಬಿಜ್ಜಳನು ಪರವಾದಿ. ಮಧುವರಸಾದಿಗಳನ್ನು ನಿರ್ದಯನಾಗಿ ಕೊಲ್ಲಿಸಿದನು. ಶರಣಧರ್ಮವನ್ನು ನಾಶಮಾಡಲು ಸಂಕಲ್ಪಿಸಿದ್ದನು. ಇವೆಲ್ಲವನ್ನು ನಾನು ಒಪ್ಪುತ್ತೇನೆ. ಆದರೆ ಈ ಕಾರಣಗಳಿಂದಾಗಿ ಶರಣರು ಅವನ ವಧೆಯನ್ನು ಇಚ್ಛಿಸಲಿಲ್ಲ, ಅದಕ್ಕಾಗಿ ಪ್ರಯತ್ನಿಸಲಿಲ್ಲ. ಬಿಜ್ಜಳನ ಹಿಂಸೆ ಶಿಖರಕ್ಕೆ ಮುಟ್ಟಿದಾಗ, ಸ್ವಧರ್ಮ ರಕ್ಷಣೆಗಾಗಿ ವಲಸೆ ಹೋಗಲು ಶರಣರು ನಿರ್ಧರಿಸಿಕೊಂಡರು. ಬಲಪ್ರದರ್ಶನದಿಂದ ಬಿಜ್ಜಳನನ್ನು ಎದುರಿಸುವ ಮನೋಭಾವ ಯಾವಾಗಲೂ