ಪುಟ:ಕ್ರಾಂತಿ ಕಲ್ಯಾಣ.pdf/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೦

ಕ್ರಾಂತಿ ಕಲ್ಯಾಣ

ನಿಲುವಂಗಿ ಚಲ್ಲಣಗಳು ನಲುಗಿ ಅಂದಗೆಟಿತ್ತು. ರತ್ನಕಂಠಿಕೆ ತಿರುಗು ಮುರುಗಾಗಿ, ರಾಜ ಮಕುಟ ಕೊಂಚ ಓರೆಯಾಗಿತ್ತು. ಪ್ರಭುಗಳನ್ನು ವೇದಿಕೆಯೇರಿಸುವ ನೆವದಲ್ಲಿ ಮನೆ ಹೆಗ್ಗಡೆ ಹತ್ತಿರ ಹೋಗಿ ಸರಿಪಡಿಸಿದನು. ಆದರೆ ಸಭಾಸದರು ಇವುಗಳೊಂದನ್ನೂ ಗಮನಿಸಲಿಲ್ಲ; ಕಂಡೂ ಕಾಣದಂತೆ ಮೌನವಾಗಿದ್ದರು ಅವರು. ಅರಸನು ಸಿಂಹಾಸನದಲ್ಲಿ ಹಿಂದುಮುಂದಾಗಿ ಕುಳಿತರೂ ಸರಿಯೆಂದು ನಮಸ್ಕಾರ ಮಾಡುವುದು ಆ ಕಾಲಕ್ಕೆ ರಾಜಸಭೆಯ ಸಂಪ್ರದಾಯವಾಗಿತ್ತು.

ಹೆಗ್ಗಡತಿಯರು ಆರತಿ ಬೆಳಗಿ, ಪುರೋಹಿತರು ರಾಜಾಶೀರ್ವಾದ ಮಾಡಿದ ಮೇಲೆ ನಾರಣಕ್ರಮಿತನು ಸಿಂಹಾಸನದ ಬಳಿಗೆ ಹೋಗಿ, "ಪ್ರಭುಗಳ ಅಪೇಕ್ಷೆಯಂತೆ ಕಾವ್ಯೋಪದೇಶಕನನ್ನು ಕೆರೆದುಕೊಂಡು ಬಂದಿದ್ದೇನೆ," ಎಂದನು.

ಜಗದೇಕಮಲ್ಲನು ಮನೆಹೆಗ್ಗಡೆಯ ಮುಖ ನೋಡಿದನು. ಮನೆಹೆಗಡೆ ಕರ್ಣದೇವನ ಮುಖ ನೋಡಿದನು. ಕರ್ಣದೇವನು ಕ್ರಮಿತನ ಕಡೆ ತಿರುಗಿ ತಲೆಯಾಡಿಸಿದನು. ಅಗ್ಗಳನಿಗೆ ಅರ್ಥವಾಯಿತು, ರಾಜಗೃಹದ ಆಡಳಿತ ಯಾರ ಕೈಯಲ್ಲಿದೆಯೆಂದು.

ಈ ಮೂಕಾಭಿನಯ ಮುಗಿದ ಮೇಲೆ ಅಗ್ಗಳನನ್ನು ಹತ್ತಿರ ಕರೆದು ಸಿಂಹಾಸನದ ಮುಂದೆ ನಿಲ್ಲಿಸಿ ಕ್ರಮಿತನು, "ಪಂಡಿತ ಕವಿ ಅಗ್ಗಳದೇವನು ವಂದಿಸುವನು," ಎಂದು ಹೇಳಿದನು. ಅಗ್ಗಳನು ಕೈಯೆತ್ತಿ ನಮಸ್ಕಾರಮಾಡಿ ಆಸ್ಥಾನಪದ್ಧತಿಯಂತೆ ಆಶು ಪದ್ಯವೊಂದನ್ನು ಪಠಿಸಿದನು. ಮಾಗಧರು ಉಗ್ಗಡಿಸಿದ ಬಿರುದಾವಳಿ ಅವನಿಗೆ ಸ್ಫೂರ್ತಿ ಕೊಟ್ಟಿತು.

ಜಗದೇಕ, ಜಗಕ್ಕನೇಕ,
ಜಗದಲ, ಜಗದೇಕಮಲ್ಲ, ಜಗದ್ವಿಶಾಲಾ |
ಜುಗ ಜುಗ ಜಗ ಝಂಪನ, ಜಯ ||
ಜಗದೇವ ಚಲುಕ್ಯರಾಜ್ಯ ಕರ್ಣಾಭರಣಾ ||

ಅಗ್ಗಳನು ಗಮಕ ಸಂಗೀತಗಳನ್ನು ಅಭ್ಯಾಸ ಮಾಡಿದ್ದನು. ದೈವದತ್ತವಾದ ಮಧುರಕಂಠವಿತ್ತು. ಪದ್ಯದ ನುಡಿಗಳನ್ನು ಎಳೆದು ಅಳೆದು, ತಿರುವಿ ತೂಗಿ, ಅಲ್ಲಲ್ಲಿ ರಾಗಾಲಾಪಗಳನ್ನು ಸೇರಿಸಿ ಕೇಳುವವರು ತಲೆದೂಗುವಂತೆ ಅವನು ಪದ್ಯವನ್ನು ಹಾಡಿದನು. ಸಿಂಹಾಸನದ ತಲೆಹೊತ್ತಿಗೆ ಒರಗಿ ಕುಳಿತು ಅರೆಮುಚ್ಚಿದ ಕಣ್ಣುಗಳಿಂದ ಹೆಗ್ಗಡತಿಯರ ಹಾವಭಾವಗಳನ್ನು ಹೊಂಚಿ ನೋಡುತ್ತಿದ್ದ ಜಗದೇಕಮಲ್ಲನು ಕಿವಿ ನಿಮಿರಿ ತಲೆಯೆತ್ತಿ ಪದ್ಯವನ್ನು ಕೇಳಿದನು.

ಮನೆಹೆಗ್ಗಡೆ ಅಚ್ಚರಿಯಿಂದ, "ನಿಮ್ಮ ಕಾವ್ಯೋಪದೇಶಿ ಸಂಗೀತಗಾರನೆಂದು ತಿಳಿದಿದ್ದರೆ ವಾದ್ಯಗಳನ್ನು ತರಿಸುತ್ತಿದ್ದೆ, ಕ್ರಮಿತರೆ," ಎಂದನು.